ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರ ನೀಡದ ವಿಚಾರ: ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

Update: 2019-08-08 18:21 GMT

ಬೆಂಗಳೂರು, ಆ.8: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗಳಲ್ಲಿ ಪ್ರವೇಶ ಪಡೆದ ಮಕ್ಕಳು ಸೇರಿ ಆರ್‌ಟಿಇ ಕಾಯಿದೆ ವ್ಯಾಪ್ತಿಗೆ ಬರುವ ಶಾಲಾ ಮಕ್ಕಳಿಗೆ ಎರಡು ಜೊತೆ ಹೊಲಿದ ಸಮವಸ್ತ್ರಗಳನ್ನು ಪೂರೈಸಲು ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಈ ಕುರಿತು ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ದೇವಪ್ಪ ಬಸಪ್ಪ ಹರಿಜನ ಎಂಬುವರ 8 ವರ್ಷದ ಪುತ್ರ ಮಾಸ್ಟರ್ ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಅಜೀತ್ ಆನಂದ್‌ಶೆಟ್ಟಿ ಅವರು, 2019-20ನೆ ಸಾಲಿನ ಆರ್‌ಟಿಇ ಕಾಯಿದೆ ವ್ಯಾಪ್ತಿಗೆ ಬರುವ ಶಾಲಾ ಮಕ್ಕಳಿಗೆ ಶಾಲೆ ಪ್ರಾರಂಭವಾಗಿ ಹಲವು ವಾರಗಳು ಕಳೆದರು ಇನ್ನೂ ಸಮವಸ್ತ್ರಗಳನ್ನು ಪೂರೈಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಕೆಲ ಶಾಲೆಗಳಲ್ಲಿ ಹೊಲಿದ ಒಂದು ಜೊತೆ ಸಮವಸ್ತ್ರವನ್ನು ನೀಡಲಾಗಿದೆ. ಇನ್ನು ಕೆಲವು ಶಾಲೆಗಳಲ್ಲಿ ಒಂದು ಜೊತೆ ಸಮವಸ್ತ್ರವನ್ನು ನೀಡಿಲ್ಲ. ಇದರಿಂದ, ವಿದ್ಯಾರ್ಥಿಗಳಿಗೆ ಅನಾನುಕೂಲವಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು. ರಾಜ್ಯ ಸರಕಾರದ ಪರ ವಾದಿಸಿದ ವಕೀಲರು, ಈಗಾಗಲೇ ರಾಜ್ಯ ಸರಕಾರ ಶಾಲಾ ಮಕ್ಕಳಿಗೆ ಒಂದು ಜೊತೆ ಹೊಲಿದ ಸಮವಸ್ತ್ರವನ್ನು ನೀಡಲಾಗಿದೆ. ಆದರೆ, ಎರಡನೆಯ ಜೊತೆಯ ಸಮವಸ್ತ್ರವನ್ನು ನೀಡಲು ಕೇಂದ್ರ ಸರಕಾರ ಇನ್ನೂ ಹಣವನ್ನು ಬಿಡುಗಡೆ ಮಾಡಿಲ್ಲ. ಇದರಿಂದ, ಮತ್ತೊಂದು ಜೊತೆ ಸಮವಸ್ತ್ರವನ್ನು ಕೊಡಲು ತಡವಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ಕೇಂದ್ರ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News