ಪಿಒಪಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಪ್ರವೇಶಿಸದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ

Update: 2019-08-08 18:31 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.8: ಜಲಮೂಲಗಳನ್ನು ಮಾಲಿನ್ಯದಿಂದ ರಕ್ಷಿಸುವ ನಿಟ್ಟಿನಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ(ಪಿಒಪಿ) ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಪ್ರವೇಶಿಸದಂತೆ ಕ್ರಮವಹಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಡಳಿತಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚಿಸಿದೆ.

ಪಿಒಪಿ ವಿಗ್ರಹಗಳಿಗೆ ಬಳಸುವ ರಾಸಾಯನಿಕ ಬಣ್ಣಗಳು ಇಂತಹ ಮೂರ್ತಿಗಳನ್ನು ವಿಸರ್ಜಿಸುವ ಕೆರೆಗಳಲ್ಲಿ ಜಲಮಾಲಿನ್ಯ ಉಂಟುಮಾಡುತ್ತವೆ. ಜಲಮೂಲಗಳನ್ನೇ ಅವಲಂಬಿಸಿರುವ ಪ್ರಾಣಿಪಕ್ಷಿಗಳು ಮತ್ತು ಇತರೆ ಜಲಚರಗಳ ಜೀವಕ್ಕೆ ಇದರಿಂದ ಅಪಾಯ ಉಂಟಾಗುತ್ತದೆ. ಪರಿಸರ ಮತ್ತು ಸಾರ್ವಜನಿಕರ ಆರೋಗ್ಯಕ್ಕೂ ಧಕ್ಕೆಯಾಗುತ್ತದೆ ಎಂದು ಮಂಡಳಿಯು ತಿಳಿಸಿದೆ.

ಪಿಒಪಿ ಗಣೇಶ ವಿಗ್ರಹಗಳನ್ನು ತಯಾರಿಸದಂತೆ, ಜಲಮೂಲದಲ್ಲಿ ಇಂತಹ ವಿಗ್ರಹಗಳು ವಿಸರ್ಜನೆಯಾಗದ ರೀತಿಯಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದ್ದು, ಇದನ್ನು ಉಲ್ಲಂಘಿಸುವವರಿಗೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 1,860 ಪ್ರಕಾರ ಕ್ರಮ ತೆಗೆದುಕೊಳ್ಳಲು ಮಂಡಳಿ ತೀರ್ಮಾನಿಸಿದೆ.

ಪಿಒಪಿಯಿಂದ ತಯಾರಿಸಿದ ವಿಗ್ರಹಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕಳೆದ ವರ್ಷವೇ ಸೂಚಿಸಲಾಗಿತ್ತು. ಆದರೆ, ಸ್ಥಳೀಯ ಆಡಳಿತಗಳ ನಿರ್ಲಕ್ಷದಿಂದಾಗಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಆಗಿರಲಿಲ್ಲ. ಹಬ್ಬದ ಕೊನೆಯ ಕ್ಷಣದವರೆಗೆ ಸುಮ್ಮನಿದ್ದ ಅಧಿಕಾರಿಗಳು ನಂತರ ಕ್ರಮಕ್ಕೆ ಮುಂದಾಗಿದ್ದರು. ಇದರಿಂದ ಸಾರ್ವಜನಿಕರಿಂದ ಟೀಕೆ ವ್ಯಕ್ತವಾಗಿತ್ತು. ಈ ಬಾರಿ ನಿಷೇಧ ಕಟ್ಟುನಿಟ್ಟಾಗಿ ಜಾರಿಯಾಗಬೇಕು.

ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸುವಾಗ ಪ್ರತಿ ಗಣೇಶ ಸಮಿತಿಯು ಕಡ್ಡಾಯವಾಗಿ ಮಾಲಿನ್ಯ ನಿಯಂತ್ರಣ ಮಂಡಳಿ, ಬಿಬಿಎಂಪಿ(ಇತರೆಡೆ ಸ್ಥಳೀಯ ನಗರಾಡಳಿತ) ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿರಬೇಕು. ಯಾವುದೇ ಕಾರಣಕ್ಕೂ ಮೂರ್ತಿಗಳನ್ನು ಒಂದು ತಿಂಗಳ ಕಾಲ ಕೂರಿಸುವುದಕ್ಕೆ ಅವಕಾಶ ನೀಡಬಾರದು. ಒಂದು ಪ್ರದೇಶದಲ್ಲಿ ಪ್ರತಿಷ್ಠಾಪಿಸುವ ಮೂರ್ತಿಗಳನ್ನು ವಿಲೇವಾರಿ ಮಾಡಲು ನಿರ್ದಿಷ್ಟವಾದ ಜಲಮೂಲಗಳನ್ನು ನಿಗದಿಪಡಿಸಬೇಕು. ಹಾಗೆಯೇ ಈ ಕುರಿತು ಜನರಿಗೆ ಮಾಹಿತಿ ನೀಡಲು ಪ್ರಕಟನೆ ಹೊರಡಿಸಬೇಕು ಎಂದು ಮಂಡಳಿ ಸೂಚಿಸಿದೆ.

ಸೂಚನೆಗಳು

* ನಿಗದಿಪಡಿಸಿದ ಸ್ಥಳಗಳಲ್ಲೇ ಮೂರ್ತಿಗಳನ್ನು ವಿಸರ್ಜಿಸಬೇಕು.

* ಹೂವಿನ ಹಾರವನ್ನು ಪ್ರತ್ಯೇಕ ಪಡಿಸಿ ವಿಸರ್ಜಿಸಬೇಕು.

* ಕೆರೆಗಳು, ಕಲ್ಯಾಣಿಗಳನ್ನು ಗುರುತಿಸಿ ವಿಗ್ರಹಗಳ ವಿಸರ್ಜನೆಗೆ ಕ್ರಮ.

* ಗರಿಷ್ಠ 5 ಅಡಿ ಎತ್ತರದ ಮಣ್ಣಿನ ವಿಗ್ರಹಗಳಿಗೆ ಅನುಮತಿ.

* ಜಲಮೂಲಗಳನ್ನು ನಿಗದಿಪಡಿಸಿ ಪ್ರಕಟನೆ ಹೊರಡಿಬೇಕು.

* ಪಿಒಪಿ ಮೂರ್ತಿ ವ್ಯಾಪಾರಕ್ಕೆ ಪರವಾನಗಿ ನೀಡಕೂಡದು.

* ಬಣ್ಣರಹಿತ ಮಣ್ಣಿನ ಗಣೇಶ ಮೂರ್ತಿ ಗೌರಿ ಗಣೇಶ ಹಬ್ಬ.

ಹೊರ ರಾಜ್ಯ, ಜಿಲ್ಲೆಗಳಿಂದ ಪ್ರವೇಶಿಸುವ ಪಿಒಪಿ ಮೂರ್ತಿಗಳ ಮೇಲೆ ನಿಗಾ ಇಡುವಂತೆ ಚೆಕ್‌ಪೋಸ್ಟ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಅವುಗಳ ಮಾರಾಟ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ಕೆ.ಸುಧಾಕರ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News