ಗೋಕಾಕರ ಬರವಣಿಗೆಯ ಮೇಲೆ ಅರವಿಂದರ ಪ್ರಭಾವ

Update: 2019-08-09 18:35 GMT

 ನವ್ಯ ಸಾಹಿತ್ಯದ ಪ್ರಸ್ತಾಪ ಬಂದಾಗ ಅಡಿಗರನ್ನು ನಾವು ಮೊದಲು ನೆನೆಯುತ್ತೇವೆ. ಆದರೆ ಗೋಕಾಕರೂ ನವ್ಯ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಇಷ್ಟಾದರೂ ಗೋಕಾಕರನ್ನು ನಾವು ಆಧುನಿಕ ಕನ್ನಡ ಸಾಹಿತ್ಯಕ್ಕಾಗಿಯಷ್ಟೇ ಗುರುತಿಸುವುದಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಅವರು ಕೈಯಾಡಿಸಿದ್ದಾರೆ. ಭಾರತ ಸಿಂಧೂ ರಶ್ಮೀ ಮಹಾಕಾವ್ಯಕ್ಕೆ ಅವರಿಗೆ ಜ್ಞಾನಪೀಠ ಸಿಕ್ಕಿತು. ಆದರೆ ಇಂದು ಈ ಕಾವ್ಯ ಮಾತ್ರ ಜನಮಾನಸದಿಂದ ದೂರ ಉಳಿದಿದೆ. ಬರೇ ಲೈಬ್ರರಿಗಳಿಗಷ್ಟೇ ಸೀಮಿತವಾಗಿದೆ. ಕುವೆಂಪು ಅವರ ಮಹಾಕಾವ್ಯದಷ್ಟು ಜನರನ್ನು ಇದು ತಲುಪಿಲ್ಲ. ಗೋಕಾಕರ ಚಿಂತನೆಗಳು ಅರವಿಂದರ ಪ್ರಭಾವದಿಂದ ರೂಪುಗೊಂಡಿದೆ. ಈ ನಿಟ್ಟಿನಲ್ಲಿ ಕನ್ನಡದ ಹಿರಿಯ ಕವಿ,ವಿದ್ವಾಂಸ ಜಿ. ವಿ. ಕುಲಕರ್ಣಿ ಅವರು ಗೋಕಾಕರ ಬರವಣಿಗೆಯ ಮೇಲೆ ಅರವಿಂದರ ಪ್ರಭಾವದ ಕುರಿತಂತೆ ಇಂಗ್ಲಿಷ್‌ನಲ್ಲಿ ಪಿಎಚ್‌ಡಿ ಮಹಾಪ್ರಬಂಧವನ್ನು ರಚಿಸಿದ್ದಾರೆ. ಅದರ ಸಂಗ್ರಹಾನುವಾದವನ್ನು ಸ್ವತಃ ಜೀವಿ ಕುಲಕರ್ಣಿಯವರೇ ಕನ್ನಡಕ್ಕೆ ತಂದಿ ದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಆ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯಲ್ಲಿ ಒಟ್ಟು ಒಂಬತ್ತು ಅಧ್ಯಾಯ ಗಳಿವೆ. 1. ಸಮಸ್ಯೆ ಮತ್ತು ಸಂದರ್ಭ 2. ಶ್ರೀ ಅರವಿಂದರನ್ನು ಗೋಕಾಕರು ಅರ್ಥೈಸಿದ್ದೆಂತು 3. ಕಾವ್ಯ ಸ್ಪಂದನ 4. ಕಥನ ಕಾವ್ಯ ಮತ್ತು ಮಹಾಕಾವ್ಯದ ಪ್ರಯಾಸ 5. ನಾಟಕೀಯ ಅಂಶ 6. ಕಲ್ಪಿತ ಕಥನ ಪ್ರಯೋಗ 7. ಗದ್ಯದ ಇನ್ನೊಂದು ಏಕತಾನತೆ 8. ಸೌಂದರ್ಯ ಶಾಸ್ತ್ರ ಮತ್ತು ಸಾಹಿತ್ಯ ವಿಮರ್ಶೆ 9. ಸಿಂಹಾವಲೋಕನ. ಹೀಗೆ ಗೋಕಾಕ್ ಮತ್ತು ಅರವಿಂದರನ್ನು ಸುಲಭವಾಗಿ ಅರ್ಥೈಸುವುದಕ್ಕೆ ಸಾಧ್ಯವಾಗುವಂತೆ ಜೀವಿ ಕೃತಿಯನ್ನು ವಿಂಗಡಿಸಿ ದ್ದಾರೆ ಮತ್ತು ಮಹಾ ಅಧ್ಯಯನದ ತಿರುಳನ್ನು ಕನ್ನಡದಲ್ಲಿ ನೀಡಿದ್ದಾರೆ. ಸಂಶೋಧನಾ ಗ್ರಂಥಕ್ಕಿರುವ ಶಾಸ್ತ್ರೀಯ ಗುಣಗಳು ಕೆಡದಂತೆಯೇ ಕೃತಿಯನ್ನು ಅನುವಾದಿಸಲಾಗಿದೆ. ಬೇಂದ್ರೆಯವರ ಕುರಿತಂತೆಯೂ ಈ ಹಿಂದೆ ಅಪಾರ ವಿಷಯಗಳನ್ನು ಬರೆದಿರುವ ಜೀವಿ, ಈ ಕೃತಿಯಲ್ಲಿ ಬೇಂದ್ರೆ-ಗೋಕಾಕ್-ಅರವಿಂದರ ಸಂಬಂಧವನ್ನು ಕುತೂಹಲಕರವಾಗಿ ವಿವರಿಸುತ್ತಾರೆ. ‘‘....ಗೊೀಕಾಕರನ್ನು ಶ್ರೀ ಅರವಿಂದರ ಬಳಿಗೆ ಎಳೆದು ತಂದವರೇ ಅವರ ಕಾವ್ಯ ಗುರು ಬೇಂದ್ರೆಯವರು. ಗೋಕಾಕರು ವಿದ್ಯಾರ್ಥಿ ದೆಸೆಯಲ್ಲಿಯೇ ಬೇಂದ್ರೆಯವರಿಂದ ಪ್ರಭಾವಿತರಾಗಿದ್ದರು. ಅವರು ಮೊದಲು ಇಂಗ್ಲಿಷ್‌ನಲ್ಲಿ ಕಾವ್ಯ ರಚಿಸುತ್ತಿದ್ದರು. ಬೇಂದ್ರೆಯವರ ಸಂಪರ್ಕ ಬಂದ ಮೇಲೆ ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಬೇಂದ್ರೆಯವರು ಶ್ರೀ ಅರವಿಂದರ ಪರಮ ಭಕ್ತರಾಗಿದ್ದರು’ ಒಂದು ರೀತಿಯಲ್ಲಿ ನೋಡಿದರೆ ಬೇಂದ್ರೆಯ ಮೂಲಕವೇ ಗೋಕಾಕರು ಅರವಿಂದರನ್ನು ನೋಡಿದರು. ಅರವಿಂದರನ್ನು ಬರೆಯುವ ಸಂದರ್ಭದಲ್ಲಿ ಗೋಕಾಕರು ಈ ಕಾರಣಕ್ಕಾಗಿಯೇ ಬೇಂದ್ರೆಯನ್ನೂ ಎಳೆದು ತರುತ್ತಾರೆ. ಬೇಂದ್ರೆ-ಅರವಿಂದರ ನಡುವಿನ ಬೆಸುಗೆಯನ್ನು ಉಲ್ಲೇಖಿಸುತ್ತಾರೆ.
 74 ಪುಟಗಳ ಈ ಕೃತಿಯ ಮುಖಬೆಲೆ 100 ರೂಪಾಯಿ.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News