ಧಾರಾಕಾರ ಮಳೆಗೆ ಅತಂತ್ರವಾದ ಅಲೆಮಾರಿಗಳ ಬದುಕು: ಗಂಜಿ ಕೇಂದ್ರವೇ ಇವರಿಗೆ ಆಶ್ರಯ

Update: 2019-08-09 19:04 GMT

ಹಾವೇರಿ, ಆ.9: ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಹಲವು ಕಡೆಗಳಲ್ಲಿರುವ ಅಲೆಮಾರಿ ಸಮುದಾಯದವರ ಗುಡಿಸಲುಗಳು ನೀರುಪಾಲಾಗಿದ್ದು, ಇದೀಗ ಗಂಜಿ ಕೇಂದ್ರದಲ್ಲಿಯೇ ಆಶ್ರಯ ಪಡೆಯುವಂತಾಗಿದೆ.

ಜಿಲ್ಲೆಯ ಹಲವು ಕಡೆಗಳಲ್ಲಿ ವಾಸವಾಗಿದ್ದ ಅಲೆಮಾರಿ ಕುಟುಂಬಗಳಿಂದು ಮಹಾ ಮಳೆಯಿಂದಾಗಿ ನಿರಾಶ್ರಿತವಾಗಿವೆ. ಸ್ಥಳೀಯ ಜಿಲ್ಲಾಡಳಿತವು ಅವರನ್ನು ಗಂಜಿಕೇಂದ್ರಗಳಿಗೆ ಸ್ಥಳಾಂತರ ಮಾಡಿದ್ದಾರೆ. ಆದರೂ, ಗಂಜಿ ಕೇಂದ್ರಗಳಿಂದ ಹೊರ ಬಿದ್ದ ನಂತರ ನಮ್ಮ ಪಾಡು ಏನು ಎಂಬುದು ಅವರ ಚಿಂತೆಯಾಗಿ ಉಳಿದಿದ್ದು, ಪ್ರತಿಬಾರಿಯೂ ನಿವೇಶನದ ಆಸೆ ತೋರಿಸಿ ಮತ ಪಡೆಯುವ ಜನಪ್ರತಿನಿಧಿಗಳನ್ನು ಶಪಿಸುತ್ತಿದ್ದಾರೆ.

ನಾಗೇಂದ್ರನಮಟ್ಟಿ ಸರಕಾರಿ ಶಾಲೆಯಲ್ಲಿ ತೆರೆದಿರುವ ಗಂಜಿಕೇಂದ್ರ ಸೇರಿರುವ ಅಲೆಮಾರಿ ಕುಟುಂಬಕ್ಕೆ ಸೇರಿದ ಒಬ್ಬರಿಗೆ ವಾರದ ಹಿಂದಷ್ಟೇ ಮಗು ಜನಿಸಿದೆ. ತಾಯಿಯ ಅಪ್ಪುಗೆಯಲ್ಲಿ ಬೆಚ್ಚಗೆ ಮಲಗಬೇಕಿದ್ದ ಕೂಸಿನ ಜತೆಗೆ ಅಲ್ಲಿ ತಂಗಿದ್ದಾರೆ. ಅದೇ ಗಂಜಿಕೇಂದ್ರದ ಇನ್ನೊಂದು ಮೂಲೆಯಲ್ಲಿ ಎರಡು ವರ್ಷದ ಮಗುವೊಂದು ಜ್ವರ ಬಂದು ಮಲಗಿದೆ. ಅಲ್ಲೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದರೂ, ಜ್ವರ ಮಾತ್ರ ಕಮ್ಮಿ ಆಗಿಲ್ಲ. ಇಷ್ಟೆಲ್ಲ ಮನಕಲಕುವ ದೃಶ್ಯಗಳು ಹಲವು ಕಡೆಗಳಲ್ಲಿ ಕಂಡುಬರುತ್ತಿವೆ.

ಹೆರಿಗೆ ಮುಗಿಸಿಕೊಂಡು ಆಸ್ಪತ್ರೆಯಿಂದ ಹಟ್ಟಿಗೆ ಹೋಗುವಷ್ಟರಲ್ಲಿ ಗುಡಿಸಲು ಜಲಾವೃತವಾಗಿತ್ತು. ಅದೇ ಜಾಗದಲ್ಲಿ ಮುರಿದ ಮಂಚದ ಮೇಲೆ ನಾಲ್ಕು-ಐದು ದಿನ ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಹಸುಗೂಸನ್ನು ಆರೈಕೆ ಮಾಡಿಕೊಂಡೆ. ಸೋಮವಾರ ರಾತ್ರಿ ಗುಡಿಸಲು ಕೊಚ್ಚಿ ಹೋಯಿತು. ಅಲ್ಲೇ ಯಾರದ್ದೋ ಮನೆಯಲ್ಲಿ ಆಶ್ರಯ ಪಡೆದು ಮಂಗಳವಾರ ಗಂಜಿಕೇಂದ್ರಕ್ಕೆ ಬಂದಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ಮಗುವನ್ನು ಬೆಚ್ಚಗೆ ಇಡೋದು ಹೇಗೆ ಎಂದು ಬಾಣಂತಿ ಚನ್ನಮ್ಮ ದುಃಖ ತೋಡಿಕೊಂಡರು. ಈ ಕಡೆ ಪ್ರತಿ ಮಳೆಗಾಲದಲ್ಲಿಯೂ ಇಲ್ಲೊಂದು ಗಂಜಿ ಕೇಂದ್ರ ಆರಂಭ ಮಾಡಿಕೊಟ್ಟು, ಒಂದಿಷ್ಟು ದಿನ ಅಲ್ಲಿಯೇ ಕೂಡಿಟ್ಟು ಊಟ ಹಾಕುತ್ತಾರೆ. ಮಳೆಗಾಲ ಮುಗಿದಕೂಡಲೇ ಇಲ್ಲಿಂದ ಖಾಲಿ ಮಾಡಿಸುತ್ತಾರೆ. ಅನಂತರ ನಾವು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂಬುದೇ ಅರ್ಥವಾಗುವುದಿಲ್ಲ ಎಂದು ಅಲೆಮಾರಿ ಸಮುದಾಯದವರು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ.

ಮೊದಲು ಭಿಕ್ಷಾಟನೆ ಮಾಡಿ ಬದುಕುತ್ತಿದ್ದೆವು. ಆದರೆ, ಸರಕಾರ ಅಪರಾಧ ಎಂದಿದ್ದರಿಂದ ಕೂಲಿ ಕೆಲಸ ಹುಡುಕಿಕೊಂಡೆವು. ಜಾತ್ರೆಗಳಲ್ಲಿ ಆಟಿಕೆಗಳನ್ನು ಮಾರಲಾರಂಭಿಸಿದೆವು. ಸಿಕ್ಕಿದ ಎಲ್ಲ ಚಾಕರಿಗಳನ್ನು ಮಾಡಿಕೊಂಡೆವು. ಜೀವನದ ಜೊತೆ ಎಷ್ಟೇ ಹೋರಾಡಿದರೂ ಸ್ವಂತ ಸೂರು ಕಟ್ಟಿಕೊಳ್ಳುವ ತಾಕತ್ತು ನಮಗಿಲ್ಲ. ನಿವೇಶನ ನೀಡುವಂತೆ ಸ್ಥಳೀಯ ಅಧಿಕಾರಿಗಳಿಂದ ಹಿಡಿದು, ಮುಖ್ಯಮಂತ್ರಿಗಳವರೆಗೆ ಎಲ್ಲರಿಗೂ ಮನವಿಪತ್ರಗಳನ್ನು ಕೊಟ್ಟಿದ್ದೇವೆ. ಆದರೆ ಯಾರೂ ಕ್ರಮ ಕೈಗೊಳ್ಳಲಿಲ್ಲ ಎಂದು ನೊಂದ ಅಲೆಮಾರಿ ಸಮುದಾಯದ ಪೀರಪ್ಪ ಹೇಳಿದ್ದಾರೆ. 

ಪ್ರತಿಸಲವೂ ಭರವಸೆ

ಪ್ರತಿ ಸಲ ಚುನಾವಣೆ ಬಂದಾಗಲೂ ಜನಪ್ರತಿನಿಧಿಗಳು ನಮ್ಮ ಹಟ್ಟಿಗೆ ಬರುತ್ತಾರೆ. ಈ ಬಾರಿ ಖಂಡಿತಾ ನಿಮಗೆಲ್ಲ ನಿವೇಶನ ಮಂಜೂರು ಮಾಡ್ತೀವಿ ಎಂದು ಆಸೆ ಹುಟ್ಟಿಸುತ್ತಾರೆ. ತಟ್ಟೆ, ಚೊಂಬು, ಲೋಟ ಕೊಟ್ಟು ಬಡ ಜನರನ್ನು ಬುಟ್ಟಿಗೆ ಹಾಕಿಕೊಳ್ಳುತ್ತಾರೆ. ಆದರೆ, ಚುನಾವಣೆ ಮುಗಿದ ಬಳಿಕ ನಮ್ಮತ್ತ ಯಾರೂ ಬರಲ್ಲ.

-ಬಸವರಾಜ್ ಬಾದಗಿ, ಅಲೆಮಾರಿ ಸಮುದಾಯದ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News