370ನೆ ವಿಧಿ ರದ್ದತಿ ಬಳಿಕ ಬಾಲಕರು ಸೇರಿ 21 ಜನರ ಮೇಲೆ ಪೆಲೆಟ್ ಗುಂಡಿನ ದಾಳಿ

Update: 2019-08-10 14:54 GMT

ಶ್ರೀನಗರ, ಆ.10: ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಸಿದೆ ಎಂದು ಒಂದು ವರ್ಗದ ಮಾಧ್ಯಮಗಳು ವರದಿ ಮಾಡಿವೆಯಾದರೂ ಅಲ್ಲಿನ ವಸ್ತುಸ್ಥಿತಿ ಬೇರೆಯೇ ಇದೆ. ಆ.5ರಂದು ಮೋದಿ ಸರಕಾರವು ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸಾಂವಿಧಾನಿಕ ಹಕ್ಕುಗಳ ರದ್ದತಿ ಮತ್ತು ಅದರ ರಾಜ್ಯ ಸ್ಥಾನಮಾನದ ಅಂತ್ಯವನ್ನು ಪ್ರಕಟಿಸಿದ ನಂತರದ ಮೊದಲ ಮೂರು ದಿನಗಳಲ್ಲಿ ಶ್ರೀನಗರದ ಎಸ್‌ಎಂಎಚ್‌ಎಸ್ ಆಸ್ಪತ್ರೆಗೆ ಪೆಲೆಟ್ ಗುಂಡುಗಳಿಂದಾದ ಗಾಯಗಳಿಗೆ ಚಿಕಿತ್ಸೆಗಾಗಿ ಕನಿಷ್ಠ 21 ಯುವಜನರು ಮತ್ತು ಬಾಲಕರನ್ನು ಕರೆತರಲಾಗಿದೆ. ಇದನ್ನು ದೃಢಪಡಿಸಿರುವ ‘ದಿ ವೈರ್’ ಸುದ್ದಿ ಜಾಲತಾಣವು ಅವರಲ್ಲಿ ಕೆಲವರನ್ನು ಖುದ್ದಾಗಿ ಭೇಟಿಯಾಗಿದೆ.

ಆಸ್ಪತ್ರೆಯ ಆಡಳಿತ ವರ್ಗವು ಯಾವುದೇ ಮಾಹಿತಿಯನ್ನು ನೀಡಲು ನಿರಾಕರಿಸಿದರೂ ಕಣ್ಣು ಮತ್ತು ಶರೀರದ ಇತರ ಭಾಗಗಳಿಗೆ ಪೆಲೆಟ್ ಗುಂಡೇಟಿನಿಂದ ಗಾಯಗಳಾಗಿರುವ 21 ಸಂತ್ರಸ್ತರನ್ನು ಕರೆ ತರಲಾಗಿದೆ ಎಂದು ಆಸ್ಪತ್ರೆಯ ವೈದ್ಯರು ಮತ್ತು ನರ್ಸ್‌ಗಳು ತಿಳಿಸಿದ್ದಾರೆ. ಅವರಲ್ಲಿ ಹಲವರು ತಮ್ಮ ಒಂದು ಕಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ. ಕೆಲವು ಪ್ರಕರಣಗಳಲ್ಲಿ ಎರಡೂ ಕಣ್ಣುಗಳಿಗೆ ಸರಿಪಡಿಸಲಾಗದ ಹಾನಿಯುಂಟಾಗಿದೆ ಎನ್ನಲಾಗಿದೆ.

ಚಿಕಿತ್ಸೆ ಫಲಕಾರಿಯಾಗದೆ ಓರ್ವ ಯುವಕ ಮೃತಪಟ್ಟಿದ್ದಾನೆ ಎಂಬ ವರದಿಗಳಿವೆಯಾದರೂ ಆಸ್ಪತ್ರೆಯ ಯಾರೂ ಇದನ್ನು ದೃಢಪಡಿಸುವ ಸ್ಥಿತಿಯಲ್ಲಿರಲಿಲ್ಲ.

 ವಾರ್ಡ್ ನಂ.8ರಲ್ಲಿಯ ಕೆಲವು ಗಾಯಾಳುಗಳು ಮತ್ತು ಅವರ ಕುಟುಂಬವನ್ನು ಭೇಟಿಯಾಗುವಲ್ಲಿ ವರದಿಗಾರರು ಯಶಸ್ವಿಯಾಗಿದ್ದಾರೆ. ನಗರದಲ್ಲಿ ಪ್ರತಿಭಟನೆ ಸಂದರ್ಭ ತಮ್ಮ ಮೇಲೆ ಪೆಲೆಟ್ ಗುಂಡುಗಳನ್ನು ಹಾರಿಸಲಾಗಿತ್ತು ಎಂದು ಕೆಲವರು ಹೇಳಿದರೆ,ಆ ವೇಳೆ ಕಲ್ಲು ತೂರಾಟ ನಡೆಯುತ್ತಿರಲಿಲ್ಲವಾದರೂ ಭದ್ರತಾ ಸಿಬ್ಬಂದಿ ತಮ್ಮನ್ನು ಗುರಿಯಾಗಿಸಿಕೊಂಡಿದ್ದರು ಎಂದು ಇತರರು ಆರೋಪಿಸಿದರು.

ಗಾಯಾಳುಗಳ ಹೇಳಿಕೆಗಳು ಮೋದಿ ಸರಕಾರವು 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜನರ ಬದುಕನ್ನು ಅವರಿಸಿಕೊಂಡಿರುವ ಅನಿಶ್ಚಿತತೆಯ ಚಿತ್ರಣನ್ನು ನೀಡಿವೆ.

ಕೇಂದ್ರದ ನಿರ್ಧಾರಗಳ ಪ್ರಕಟಣೆಗೆ ಮುನ್ನವೇ ಹೇರಲಾಗಿದ್ದ ಭಾರೀ ಭದ್ರತೆಯು ಈಗಲೂ ಮುಂದುವರಿದಿದೆ. ಮೊಬೈಲ್ ಮತ್ತು ಸ್ಥಿರ ದೂರವಾಣಿ ಸೇವೆಗಳನ್ನು ಕಡಿತಗೊಳಿಸಲಾಗಿದೆ,ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ವೃತ್ತಪತ್ರಿಕೆಗಳ ಪ್ರಕಟಣೆಯನ್ನು ಅಮಾನತುಗೊಳಿಸಲಾಗಿದೆ. ನಿರಂತರ ಕರ್ಫ್ಯೂವನ್ನು ವಿಧಿಸಲಾಗಿದ್ದು ಇದರ ನಿಯಮಗಳನ್ನೂ ಸ್ಪಷ್ಟಪಡಿಸಲಾಗಿಲ್ಲ.

ಕೆಲವು ಮುಖ್ಯ ರಸ್ತೆಗಳಲ್ಲಿ,ವಿಶೇಷವಾಗಿ ಪ್ರಮುಖ ಆಸ್ಪತ್ರೆಗಳ ಬಳಿ ಸಂಚಾರಕ್ಕೆ ಅನುಮತಿ ನೀಡಲಾಗಿದೆಯಾದರೂ ಮುಳ್ಳುತಂತಿಗಳ ಬ್ಯಾರಿಕೇಡ್‌ಗಳನ್ನು ಬಳಸಿಕೊಂಡು ಸಾಗಬೇಕಿದೆ. ಅಲ್ಲದೆ ಒಂದು ನಿರ್ದಿಷ್ಟ ಆಸುಪಾಸಿನ ಪ್ರದೇಶಕ್ಕೆ ಹೋಗಿ ಸುರಕ್ಷಿತವಾಗಿ ವಾಪಸ್ ಬರುವುದು,ವಿಶೇಷವಾಗಿ ಸ್ವಂತ ವಾಹನವಿಲ್ಲದವರಿಗೆ ಒಂದು ಸವಾಲೇ ಆಗಿದೆ. ಜನರು ತಮ್ಮ ಬಡಾವಣೆಗಳೊಳಗೆ ಆಚೀಚೆ ಹೋಗಿ ಬರುತ್ತಿದ್ದಾರೆ ಮತ್ತು ಸಂಜೆಯ ವೇಳೆ ಅಲ್ಲಲ್ಲಿ ಕೆಲವು ಕಿರಾಣಿ ಅಥವಾ ಹಣ್ಣಿನ ಅಂಗಡಿಗಳು ಮತ್ತು ಬೇಕರಿಗಳು ಸ್ವಲ್ಪ ಸಮಯ ತೆರೆದುಕೊಂಡು ವ್ಯಾಪಾರವನ್ನು ನಡೆಸುತ್ತಿವೆ. ಆದರೆ ಯಾವುದಕ್ಕೆ ಅವಕಾಶವಿದೆ ಮತ್ತು ಯಾವುದಕ್ಕೆ ಅವಕಾಶವಿಲ್ಲ ಎನ್ನುವ ಅನಿಶ್ಚಿತತೆಯಿಂದಾಗಿ ಸಾಮಾನ್ಯ ಚಟುವಟಿಕೆಗಳೂ ಕೆಲವೊಮ್ಮೆ ತುಂಬ ದುಬಾರಿಯಾಗಬಲ್ಲವು.

ಆ.7ರಂದು ಶ್ರೀನಗರದ ನಾಟಿಪೋರ ನಿವಾಸಿ ನದೀಮ್(15) ತನ್ನ ಸಹಪಾಠಿಯೊಂದಿಗೆ ಟ್ಯೂಷನ್‌ಗೆಂದು ಹೋಗುತ್ತಿದ್ದಾಗ ಪೆಲೆಟ್ ಗುಂಡೇಟಿಗೆ ಗುರಿಯಾಗಿದ್ದಾನೆ. ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತನಗೆ ಬಲಗಣ್ಣು ಕಾಣುತ್ತಿಲ್ಲ ಎಂದು ಆತ ತಿಳಿಸಿದ.

ಗಂಡೇರಬಾಲ್‌ನ ಇಬ್ಬರು ಯುವಕರೂ ಕಣ್ಣುಗಳ ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಒಬ್ಬ ತಿಳಿಸಿರುವಂತೆ ಅವರು ಬೇಕರಿಯೊಂದರ ನೌಕರರಾಗಿದ್ದಾರೆ. ಅವರು ಬೇಕರಿಯಲ್ಲಿ ಬ್ರೆಡ್‌ಗಳನ್ನು ತಯಾರಿಸುತ್ತಿದ್ದಾಗ ಅಲ್ಲಿಗೆ ಬಂದಿದ್ದ ಭದ್ರತಾ ಸಿಬ್ಬಂದಿಗಳು, “ನೀವು ಕಾಶ್ಮೀರಿಗಳಿಗೆ ಬ್ರೆಡ್‌ಗಳನ್ನು ತಿನ್ನಿಸುತ್ತಿದ್ದೀರಾ? ಅವರಿಗೆ ನೀವು ವಿಷವನ್ನುಣಿಸಬೇಕು” ಎಂದು ನಿಂದಿಸಿ ಅಂಗಡಿಯೊಳಗೆ ಗುಂಡುಗಳನ್ನು ಹಾರಿಸಿದ್ದರು, ಎಂದು ಆರೋಪಿಸಲಾಗಿದೆ.

ಈ ಹೇಳಿಕೆಯನ್ನು ದೃಢಪಡಿಸಿಕೊಳ್ಳುವುದು ಅಸಾಧ್ಯವಾಗಿದ್ದರೂ,ಅವರಿಗೆ ಗಾಯಗಳಾಗಿರುವುದಂತೂ ನಿಜ ಮತ್ತು ಅವರು ಸಿಟ್ಟಿನಿಂದ ಕುದಿಯುತ್ತಿದ್ದರು ಎನ್ನುವುದರಲ್ಲಿಯೂ ಶಂಕೆಗಳಿಲ್ಲ.

ಹೆಚ್ಚೆಚ್ಚು ಜನರು ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವುದು ಈಗ ಉಳಿದುಕೊಂಡಿರುವ ಏಕೈಕ ಆಯ್ಕೆ ಎಂದು ಗಾಯಾಳುಗಳ ಪೈಕಿ ಓರ್ವ ಹೇಳಿದರೆ,ಪೆಲೆಟ್ ಗನ್‌ಗಳಿಂದ ಈ ರೀತಿ ಜನರನ್ನು ಗಾಯಗೊಳಿಸುವುದು ಸರಕಾರದ ನೀತಿಯ ಋಜುತ್ವವನ್ನು ಜನರಿಗೆ ಮನವರಿಕೆ ಮಾಡುವ ವಿಧಾನವಲ್ಲ ಎಂದು ಇನ್ನೋರ್ವ ಗಾಯಾಳುವಿನ ತಂದೆ ಹೇಳಿದರು.

  ದೂರವಾಣಿ ನಿಷೇಧಕ್ಕಾಗಿ ಸರಕಾರವನ್ನು ತರಾಟೆಗೆತ್ತಿಕೊಂಡ ಅವರು, “ಅಮಿತ್ ಶಾ 370ನೇ ವಿಧಿ ಕುರಿತಂತೆ ಏನು ಮಾಡಿದ್ದಾರೆ ಎನ್ನುವ ಬಗ್ಗೆ ನಾನೀಗ ಮಾತನಾಡುವುದಿಲ್ಲ,ಆದರೆ ಅವರು ತಂದೆಯನ್ನು ಮಗನಿಂದ,ಪತಿಯನ್ನು ಪತ್ನಿಯಿಂದ,ಸೋದರಿಯನ್ನು ಸೋದರನಿಂದ ಬೇರ್ಪಡಿಸಿದ್ದಾರೆ. ನಮ್ಮ ಸೋದರಿ ಎಲ್ಲಿದ್ದಾಳೆ,ತಾಯಿ ಎಲ್ಲಿದ್ದಾಳೆ ಎಂಬ ಕುರಿತು ಯಾವುದೇ ಮಾಹಿತಿಯನ್ನು ಪಡೆಯಲು ನಮಗೆ ಸಾಧ್ಯವಾಗುತ್ತಿಲ್ಲ. ಅವರು ಅಂತರ್ಜಾಲವನ್ನು ಸ್ಥಗಿತಗೊಳಿಸಿದ್ದರೂ ದೂರವಾಣಿಯ ತಂಟೆಗೆ ಹೋಗಬಾರದಿತ್ತು. ಇದು ಒಂದು ರೀತಿಯಲ್ಲಿ ಝಿಯಾನಿಸ್ಟ್‌ಗಳ (ಇಸ್ರೇಲಿಗಳು) ವಿಧಾನವಾಗಿದೆ. ಶಾ ಮೂಲತಃ ಹಿಂದುವಲ್ಲ ಎನ್ನುವುದು ನನಗೆ ಖಚಿತವಿದೆ,ಓರ್ವ ಹಿಂದು ಹೀಗೆಂದೂ ಮಾಡುವುದಿಲ್ಲ. ಶಾ ಝಿಯಾನಿಸ್ಟ್‌ನಂತೆ ವರ್ತಿಸುತ್ತಿದ್ದಾರೆ” ಎಂದು ಕಿಡಿಕಾರಿದರು.

Full View

Similar News