ರೈತರ ಸಾಲದ ಬಗ್ಗೆ ಸಿಎಂ ಯಡಿಯೂರಪ್ಪ ಸ್ಪಷ್ಟ ಮಾಹಿತಿ ನೀಡಲಿ: ರೈತ ಸಂಘದ ಅಧ್ಯಕ್ಷ ಎನ್.ಎಸ್.ವರ್ಮ ಆಗ್ರಹ

Update: 2019-08-13 18:34 GMT

ಮೈಸೂರು,ಆ.13: ಹಿಂದಿನ ಮುಖ್ಯಮಂತ್ರಿ ರೈತರ ಸಾಲಮನ್ನಾ ಆಗಿದೆ ಎಂದು ಹೇಳುತ್ತಿದ್ದರು. ಆದರೆ ಈ ಬಗ್ಗೆ ಇದುವರೆವಿಗೂ ಸ್ಪಷ್ಟ ಮಾಹಿತಿ ಇಲ್ಲ. ಸಿಎಂ ಯಡಿಯೂರಪ್ಪ ಕೂಡಲೇ ಇದರ ಬಗ್ಗೆ ಸ್ಷಷ್ಟ ಮಾಹಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಎನ್.ಎಸ್ ವರ್ಮ ಆಗ್ರಹಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು,  ರಾಜ್ಯದಲ್ಲಿ ಪ್ರವಾಹದಿಂದಾಗಿ ತೊಂದರೆಗೊಳಗಾಗಿರುವ  ನೆರೆ ಸಂತ್ರಸ್ತರಿಗೆ ಅಧಿಕಾರಿಗಳು ಕೂಡಲೇ ಸರ್ವೆ ನಡೆಸಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಸಾಲಾಮನ್ನಾ ಬಗ್ಗೆ ಕಾಳಜಿ ಇಲ್ಲದಂತೆ ವರ್ತಿಸುತ್ತಿದೆ. ಕೂಡಲೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಸಾಲಮನ್ನಾ ಮಾಡಬೇಕು. ಕೇಂದ್ರ ನೀಡುವ 6ಸಾವಿರ ಭಿಕ್ಷೆ ನಮಗೆ ಬೇಡ. ಅದರ ಬದಲು ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನೀಡಲಿ ಎಂದು ಎನ್ ಎಸ್ ವರ್ಮಾ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಸಕ್ಕರೆ ಕಾರ್ಖಾನೆಗಳ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಹಸಿರು ಶಾಲಿನ ಅದರದ್ದೇ ಆದ ಪಾವಿತ್ರತೆ ಇದೆ. ರಾಜಕಾರಣಿಗಳು ಚುನಾವಣೆ ಸಂದರ್ಭದಲ್ಲಿ ಹಸಿರು ಶಾಲು ಹಾಕಿಕೊಂಡು ಓಡಾಡುತ್ತಿದ್ದಾರೆ. ಎಲ್ಲರೂ ಹಸಿರು ಶಾಲು ಹಾಕಿಕೊಂಡು ಓಡಾಡುತ್ತ ಅದರ ಪಾವಿತ್ರ್ಯತೆ ಹಾಳು ಮಾಡುತ್ತಿದ್ದಾರೆ. ಸ್ವಾರ್ಥಕ್ಕೆ ರಾಜಕಾರಣಿಗಳು ಇದನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಮಾತು ಮುಂದುವರೆಸಿದ ಎನ್ .ಎಸ್ ವರ್ಮಾ, ಬಡಗಲಪುರ ನಾಗೇಂದ್ರ ಶಾಂತಕುಮಾರ್ ಇವರೆಲ್ಲರೂ ಖಳನಾಯಕರು. ಅವರು ರೈತಪರ ಹೋರಾಟಗಾರರಲ್ಲ. ಅವರು ಯಾವುದೇ ಸಂಘಟನೆ ಮಾಡುವುದಿಲ್ಲ. ಹಳ್ಳಿ ಹಳ್ಳಿಗೆ ಹೋಗಿ ಸಂಘಟನೆ ಮಾಡುವುದಿಲ್ಲ. ಸ್ವಾರ್ಥಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ನಂಜುಂಡಸ್ವಾಮಿಯವರಂತಹ ಹೋರಾಟಗಾರರು ಇಲ್ಲದಂತಾಗಿದ್ದಾರೆ. ಇದರಿಂದ ರೈತರ ಪರಿಸ್ಥಿತಿ ಶೋಚನೀಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News