ಕುಮಾರಸ್ವಾಮಿ ಸರಕಾರದಿಂದ ಜನಪ್ರತಿನಿಧಿ, ಅಧಿಕಾರಿಗಳು, ಪತ್ರಕರ್ತರ ಫೋನ್ ಕದ್ದಾಲಿಕೆ: ಎಚ್. ವಿಶ್ವನಾಥ್ ಗಂಭೀರ ಆರೋಪ

Update: 2019-08-14 06:21 GMT

ಮೈಸೂರು, ಆ. 14: ರಾಜ್ಯದ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಪತ್ರಕರ್ತರು ಸೇರಿ 300ಕ್ಕೂ ಹೆಚ್ಚು ಜನರ ಟೆಲಿಫೋನ್ ಕದ್ದಾಲಿಕೆಯನ್ನು ಹಿಂದಿನ ಸರಕಾರದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿದ್ದಾರೆ ಎಂದು ಅನರ್ಹ ಶಾಸಕ ಅಡಗೂರು ಎಚ್. ವಿಶ್ವನಾಥ್ ಗಂಭೀರ ಆರೋಪ ಮಾಡಿದರು.

ಮೈಸೂರು ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾದ್ದ ಅವಧಿಯಲ್ಲಿ ಅವರದೇ ಪಕ್ಷದ ರಾಜ್ಯಾಧ್ಯಕ್ಷನಾಗಿದ್ದ ನನ್ನ ಮತ್ತು ನನ್ನ ಪತ್ನಿಯ ಟೆಲಿಫೋನ್ ಕದ್ದಾಲಿಕೆ ಮಾಡಿ ನನ್ನ ಸ್ವಾತಂತ್ರ್ಯ ಹರಣ ಮಾಡಲಾಗಿದೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.

ನಾವು 17 ಜನ ಶಾಸಕರ ಫೋನ್ ಗಳ ಜೊತೆ, ಕೆಲವು ಅಧಿಕಾರುಗಳು, ಜನಪ್ರತಿನಿಧಿಗಳು ಮತ್ತು ಪತ್ರಕರ್ತರ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಹಿಂದಿನ ಗುಪ್ತಚರ ಇಲಾಖೆಯನ್ನು ಕುಮಾರಸ್ವಾಮಿ ದುರುಪಯೋಗ ಪಡಿಸಿಕೊಂಡಿದ್ದಾರೆ. ಅಧಿಕಾರಿಗಳ ಸಹಕಾರವಿಲ್ಲದೆ ಈ ಕೆಲಸ ನಡೆದಿಲ್ಲ, ಇದಕ್ಕೆ ಕಾರಣರಾಗಿರುವ ಅಧಿಕಾರಿಗಳನ್ನು ಸೇವೆಯಿಂದ ವಜಾಮಾಡಬೇಕು ಎಂದು ಆಗ್ರಹಿಸಿದರು.

ಒಬ್ಬ ವ್ಯಕ್ತಿಯ ಚಾರಿತ್ರ್ಯಹರಣ ಮಾಡುವುದು ಅಪರಾಧ, ಆದರೆ ವಿಧಾನಸೌಧದಲ್ಲಿ ಎಚ್.ಡಿ.ಕುಮಾರಸ್ವಾಮಿ ನನ್ನ ಚಾರಿತ್ರ್ಯಹರಣ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿಯಾದ್ದ ವೇಳೆ ಕುಮಾರಸ್ವಾಮಿ ಸ್ವತಹ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ವೆಂಕಟೇಶ್ ಅವರ ಫೋನನ್ನು ಕದ್ದಾಲಿಕೆ ಮಾಡಿದ್ದಾರೆ. ಅದು ಏಕೆ ರಾಜ್ಯದ ಗೃಹ ಸಚಿವರಾಗಿದ್ದ ಎಂ.ಬಿ.ಪಾಟೀಲ್ ಅವರ ಫೋನ್ ನ್ನೂ  ಕದ್ದಾಲಿಕೆ ಮಾಡಲಾಗಿದೆ ಎಂದು ಆರೋಪಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News