ಕೇಸರಿ ಭಯೋತ್ಪಾದನೆ ಕುರಿತ ನಿವೃತ್ತ ಐಜಿಪಿ ಕೃತಿಗೆ ಸಂಘಪರಿವಾರದ ವಿರೋಧ

Update: 2019-08-14 08:22 GMT
Photo: indianexpress.com

ಪುಣೆ: ಮುಸ್ಲಿಮರನ್ನು ಉಗ್ರ ಪ್ರಕರಣಗಳಲ್ಲಿ ಆರೋಪಿಗಳೆಂದು ಟಾರ್ಗೆಟ್ ಮಾಡಲಾಗುತ್ತಿದೆಯೆಂಬ ಆರೋಪಗಳನ್ನಾಧರಿಸಿ ಮಹಾರಾಷ್ಟ್ರದ ನಿವೃತ್ತ ಐಜಿಪಿ ಎಸ್ ಎಂ ಮುಶ್ರಿಫ್ ಅವರು ಬರೆದಿರುವ "ಬ್ರಾಹ್ಮಿನಿಸ್ಟ್ಸ್ ಬಾಂಬ್ಡ್  ಮುಸ್ಲಿಮ್ಸ್ ಹ್ಯಾಂಗ್ಡ್'' ಎಂಬ ಕೃತಿ ಬಿಡುಗಡೆ ಸಮಾರಂಭ ಮಂಗಳವಾರ ನಗರದ ಬಾಲ್ ಗಂಧರ್ವ ಸಭಾಂಗಣದಲ್ಲಿ ನಡೆದಾಗ ಅಲ್ಲಿಗೆ ಪೊಲೀಸರ ಎಚ್ಚರಿಕೆಯನ್ನು ಧಿಕ್ಕರಿಸಿ ಆಗಮಿಸಿದ ಸಂಘಪರಿವಾರದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

"ನಮಗೆ ಸಮಾರಂಭ ಸ್ಥಳದಲ್ಲಿ ಯಾವುದೇ ಸಭೆ ಅಥವಾ ರ್ಯಾಲಿ ನಡೆಸಲು ಅನುಮತಿ ನಿರಾಕರಿಸಲಾಗಿತ್ತಾದರೂ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ನಿರ್ಬಂಧವಿರಲಿಲ್ಲ. ಕಾರ್ಯಕ್ರಮಕ್ಕೆ ಎಲ್ಲರಿಗೂ ಪ್ರವೇಶವಿದ್ದುದರಿಂದ ಭಾಗವಹಿಸುವುದು ನಮ್ಮ ಸಂವಿಧಾನದತ್ತ ಹಕ್ಕು ಆದರೂ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ,'' ಎಂದು ಅಖಿಲ ಭಾರತ ಬ್ರಾಹ್ಮಣ ಮಹಾಸಂಘದ ಆನಂದ್ ದವೆ ದೂರಿದ್ದಾರೆ.

ಮುಶ್ರಿಫ್ ಅವರ ಕೃತಿ ಬಿಡುಗಡೆ ಸಮಾರಂಭವನ್ನು ವಿರೋಧಿಸಿ ಬ್ರಾಹ್ಮಣ ಜಾಗೃತಿ ಸೇವಾ ಸಂಘ ಹಾಗೂ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಂಘ ಸೋಮವಾರ ಪುಣೆ ಪೊಲೀಸರಿಗೆ ದೂರು ಸಲ್ಲಿಸಿ ಕೃತಿಯಲ್ಲಿ 'ಸುಳ್ಳು ಆರೋಪಗಳನ್ನು' ಮಾಡಿರುವ ಮುಶ್ರಿಫ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ಸಮಾಜದಲ್ಲಿ ವಿವಿಧ ಜಾತಿ ಧರ್ಮಗಳ ಜನರ ನಡುವೆ ಈ ಕೃತಿ ವೈಷಮ್ಯ ಸೃಷ್ಟಿಸುವ ಸಾಧ್ಯತೆಯಿರುವುದರಿಂದ ಕೃತಿ ಬಿಡುಗಡೆ ಸಮಾರಂಭ ರದ್ದುಗೊಳಿಸುವಂತೆಯೂ ಸಂಘಟನೆಗಳು ಮನವಿ ಮಾಡಿದ್ದವು.

ಆದರೆ ತಮ್ಮ ಬೇಡಿಕೆಯೊಂದಿಗೆ ಕಾರ್ಯಕರ್ತರು ನ್ಯಾಯಾಲಯದ ಕದ ತಟ್ಟಬಹುದು ಆದರೆ ಸಮಾರಂಭಕ್ಕೆ ಅಡ್ಡಿಯುಂಟು ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆಯನ್ನೂ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News