ಅ.29ರಿಂದ ದಿಲ್ಲಿಯ ಸರಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ: ಕೇಜ್ರಿವಾಲ್

Update: 2019-08-15 16:48 GMT

ಹೊಸದಿಲ್ಲಿ, ಆ. 15: ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ಹಾಗೂ ಸಮೂಹದ ಬಸ್‌ಗಳಲ್ಲಿ ಅಕ್ಟೋಬರ್ 29ರಿಂದ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಹೇಳಿದ್ದಾರೆ. ಛಾತ್ರಸಾಲ್ ಕ್ರೀಡಾಂಗಣದಲ್ಲಿ ದಿಲ್ಲಿ ಸರಕಾರ ಆಯೋಜಿಸಿದ ಸ್ವಾತಂತ್ರ ದಿನಾಚರಣೆಯಲ್ಲಿ ಮಾತನಾಡಿದ ಕೇಜ್ರಿವಾಲ್, ರಕ್ಷಾಬಂಧನ (ದಿಲ್ಲಿಯಲ್ಲಿ ಅ. 29ರಂದು)ದ ದಿನದಿಂದ ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ಹಾಗೂ ಸಮೂಹದ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಕೊಡುಗೆಯನ್ನು ನಾನು ನನ್ನ ಸಹೋದರಿಯರಿಗೆ ನೀಡಲು ಬಯಸುತ್ತೇನೆ ಎಂದರು.

ದಿಲ್ಲಿ ಮೆಟ್ರೋದಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ ಯೋಜನೆಯನ್ನು ತಾನು ಹೊಂದಿರುವುದಾಗಿ ಅರವಿಂದ್ ಕೇಜ್ರಿವಾಲ್ ಅವರು ಜೂನ್‌ನಲ್ಲಿ ಪ್ರಕಟಿಸಿದ ಬಳಿಕ ಈ ಘೋಷಣೆ ಹೊರಬಿದ್ದಿದೆ. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅರವಿಂದ ಕೇಜ್ರಿವಾಲ್, ಆಪ್‌ಗೆ ಮಹಿಳೆಯರ ಸುರಕ್ಷತೆ ತುಂಬಾ ಮುಖ್ಯವಾಗಿದೆ. ನಾವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ. ಮೊದಲನೆಯದಾಗಿ ದಿಲ್ಲಿಯಾದ್ಯಂತ ಸಿಸಿ ಕ್ಯಾಮೆರಾ ಅಳವಡಿಸಿದೆವು. ಎರಡನೆಯದಾಗಿ ಸರಕಾರಿ ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡುತ್ತಿದ್ದೇವೆ ಎಂದರು. ಈ ಕಾರ್ಯಕ್ರಮದ ಬಗ್ಗೆ ಕೇಂದ್ರ ಎತ್ತಿದ ಆಕ್ಷೇಪದ ಬಗ್ಗೆ ಪ್ರಶ್ನಿಸಿದಾಗ ಕೇಜ್ರಿವಾಲ್, ಸಬ್ಸಿಡಿಯ ವೆಚ್ಚವನ್ನು ದೆಹಲಿ ಭರಿಸುವುದರಿಂದ ನಮಗೆ ಕೇಂದ್ರ ಸರಕಾರದ ಅನುಮತಿ ಅಗತ್ಯ ಇಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News