ಅತಿವೃಷ್ಟಿಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ 240 ಕೋಟಿ ರೂ. ನಷ್ಟ: ಜಿಲ್ಲಾಧಿಕಾರಿ

Update: 2019-08-15 12:03 GMT

ಚಿಕ್ಕಮಗಳೂರು, ಆ,15: ಜಿಲ್ಲಾದ್ಯಂತ ಅತಿವೃಷ್ಟಿಯಿಂದಾಗಿ ನೂರಾರು ಮನೆಗಳು, ರೈತರ ಜಮೀನು, ಸರಕಾರಿ ರಸ್ತೆ, ಸೇತುವೆಗಳಿಗೆ ಭಾರೀ ಹಾನಿಯಾಗಿದೆ. ಕಳೆದ ಮೂರು ದಿನಗಳಿಂದ ಜಿಲ್ಲಾದ್ಯಂತ ಸಹಜ ಸ್ಥಿತಿ ನಿರ್ಮಾಣವಾಗಿದ್ದು, ಪರಿಹಾರ ಕ್ರಮಗಳು ಭರದಿಂದ ಸಾಗಿದೆ. ಅತಿವೃಷ್ಟಿಯಿಂದಾಗಿ ಜಿಲ್ಲಾದ್ಯಂತ ಒಟ್ಟಾರೆ 240 ಕೋಟಿ ರೂ. ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಅತಿವೃಷ್ಟಿ ಹಾನಿ, ಪರಿಹಾರ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಆ.5ರಿಂದ ಜಿಲ್ಲಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ ಪ್ರಕೃತಿ ವಿಕೋಪಗಳ ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಈ ಭಾಗದ ಸುಮಾರು 500 ಕಿ.ಮೀ.ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಪರಿಶೀಲನೆ, ಸಮೀಕ್ಷೆ ನಡೆಸಿದ್ದು, ಸುಮಾರು 240 ಕೋ. ರೂ. ಹಾನಿ ಸಂಭವಿದೆ ಎಂದು ಮೇಲ್ನೋಟಕ್ಕೆ ಅಂದಾಜಿಸಲಾಗಿದ್ದು, ಈ ಹಾನಿಯ ಅಂದಾಜು ಮೊತ್ತ ನಿಖರ ಸಮೀಕ್ಷೆಯ ಬಳಿಕ ಮತ್ತಷ್ಟು ಹೆಚ್ಚಲಿದೆ. ಹಾನಿಗೊಳಗಾದ ಸ್ಥಳಗಳಲ್ಲಿ ಪರಿಹಾರ ಕ್ರಮಗಳು ಸಮರೋಪಾದಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ರಸ್ತೆ ಸಂಪರ್ಕ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದ ಅವರು, ಗಂಜಿಕೇಂದ್ರಗಳಲ್ಲಿರುವ ಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮವಹಿಸಿದೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳೂ ಸಂತ್ರಸ್ಥರ ನೆರವಿಗೆ ದಾವಿಸಿದ್ದಾರೆ ಎಂದರು.

ಅತಿವೃಷ್ಟಿಯಿಂದಾಗಿ ಸಂಭವಿಸಿದ ಭೂ ಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡು ದುರ್ಗಮ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಎಲ್ಲ ಸಂತ್ರಸ್ಥರನ್ನು ರಕ್ಷಣೆ ಮಾಡಲಾಗಿದೆ. ಸದ್ಯ ರಕ್ಷಣಾ ಕಾರ್ಯ ಮುಗಿದಿದ್ದು, ಪರಿಹಾರ, ಪುನರ್ವಸತಿ ಕೆಲಸಗಳಿಗೆ ಆದ್ಯತೆ ನೀಡಲಾಗುತ್ತಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಭವಿಸಿದ ಅತಿವೃಷ್ಟಿಗೆ ಸಿಲುಕಿ ಆ.1ರಿಂದ ಆ.14ರವರೆಗೆ 9 ಮಂದಿ ಮೃತಪಟ್ಟಿದ್ದು, ಇದುವರೆಗೂ ಮೃತಪಟ್ಟ 7ಮಂದಿಗೆ ತಲಾ 5 ಲಕ್ಷ ರೂ. ಪರಿಹಾರಧನದ ಚೆಕ್‍ಗಳನ್ನು ವಿತರಿಸಲಾಗಿದೆ. ಬಾಕಿ ಇರುವ ಮೃತರ ಕಟುಂಬಗಳಿಗೆ ಶೀಘ್ರ ವಿತರಿಸಲಾಗುವುದು ಎಂದ ಅವರು, ಚೆನ್ನಡ್ಲು ಗ್ರಾಮದಲ್ಲಿ ಮಣ್ಣಿನಡಿ ಸಿಲುಕಿದ್ದ ಸಂತೋಷ್ ಪೂಜಾರಿ ಅವರ ಮೃತ ದೇಹ ಬುಧವಾರ ಪತ್ತೆಯಾಗಿದೆ. ಮಧುಗುಂಡಿಯಲ್ಲಿ ನಾಪತ್ತೆಯಾಗಿರುವ ನಾಗಪ್ಪಗೌಡ ಅವರ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಮಧುಗುಂಡಿಯಲ್ಲಿ ಭಾರೀ ಭೂಕುಸಿತದಿಂದಾಗಿ ಇಡೀ ಗ್ರಾಮದಲ್ಲಿ ಮಣ್ಣು ಆವರಿಸಿದೆ. ಇದರೊಂದಿಗೆ ಕೆಸರಿನ ರಾಶಿ ಬಿದ್ದಿದ್ದು, ಶವದ ಹುಡುಕಾಟವೂ ಕಷ್ಟವಾಗಿದೆ. ಆದರೂ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಕಂದಾಯಾಧಿಕಾರಿಗಳ ತಂಡ ನಾಗಪ್ಪಗೌಡ ಅವರ ಪತ್ತೆಗೆ ಆ ಭಾಗದಲ್ಲಿ ತೀವ್ರ ಕಾರ್ಯಾಚರಣೆಯಲ್ಲಿ ನಿರತವಾಗಿದೆ. ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 10 ಜಾನುವಾರುಗಳು ಮೃತಪಟ್ಟಿದ್ದು, 2.73 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದರು. 

ಅತಿವೃಷ್ಟಿಗೆ ಸಿಲುಕಿ ಜಿಲ್ಲೆಯಲ್ಲಿ ಒಟ್ಟು 1454 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ 319 ಕಚ್ಚಾ ಮನೆಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. 820 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಪಕ್ಕಾ ಮನೆಗಳ ಪೈಕಿ 72 ಮನೆಗಳು ನೆಲಸಮವಾಗಿದ್ದರೆ, 243 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1454 ಮನೆಗಳ ಪೈಕಿ ಮೂಡಿಗೆರೆ ತಾಲೂಕೊಂದರಲ್ಲೇ 917 ಮನೆಗಳಿಗೆ ಹಾನಿಯಾಗಿದೆ. ಹಾನಿಗೊಳಗಾದ ಮನೆಗಳಿಗೆ ಎನ್‍ಡಿಆರ್‍ಎಫ್ ನಿಯಮದಂತೆ ಪರಿಹಾರ ವಿತರಣೆ ಮಾಡಲು ಸರಕಾರ ಆದೇಶ ನೀಡಿದೆ. ಸಂಪೂರ್ಣವಾಗಿ ಹಾನಿಗೊಳಗಾದ ಮನೆಗಳಿಗೆ ಹೆಚ್ಚು ಪರಿಹಾರ ಸಿಗಲಿದ್ದು, ಭಾಗಶಃ ಹಾನಿಗೊಳಗಾದ ಮನೆಗಳಿಗೆ ನಷ್ಟ ಪ್ರಮಾಣಕ್ಕನುಸಾರ ಪರಿಹಾರ ಸಿಗಲಿದೆ. ಮನೆ ನೆಲಸಮವಾದ ಕುಟುಂಬದವರು ಬಾಡಿಗೆ ಮನೆಗಳಲ್ಲಿ ವಾಸಮಾಡಲು ಸರಕಾರ 5 ಸಾವಿರ ರೂ. ನೆರವು ನೀಡಲಿದೆ ಎಂದರು.

ಜಿಲ್ಲೆಯಲ್ಲಿ 565 ಹೆಕ್ಟೆರ್ ಕೃಷಿ ಭೂಮಿಗೆ ಹಾನಿಯಾಗಿದ್ದು, 129 ಕೋ. ರೂ. ಬೆಳೆ ಹಾನಿ ಸಂಭವಿಸಿದೆ. ಸಮೀಕ್ಷೆ ಇನ್ನೂ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಷ್ಟದ ಪ್ರಮಾಣ ಹೆಚ್ಚಾಗಲಿದೆ. ಮೂಡಿಗೆರೆ ತಾಲೂಕಿನಲ್ಲಿ 140 ಕೋ. ರೂ., ಚಿಕ್ಕಮಗಳೂರು ತಾಲೂಕಿನಲ್ಲಿ 20.32 ಕೋ. ರೂ., ನರಸಿಂಹರಾಜಪುರ ತಾಲೂಕಿನಲ್ಲಿ 16 ಕೋ. ರೂ., ಶೃಂಗೇರಿ ತಾಲೂಕಿನಲ್ಲಿ 20.47 ಕೋ. ರೂ. ಹಾಗೂ ಕೊಪ್ಪ ತಾಲೂಕಿನಲ್ಲಿ 40 ಕೋ. ರೂ. ಬೆಳೆ ನಷ್ಟ ಸಂಭವಿಸಿದೆ. ಕಾಫಿ, ಅಡಿಕೆ ಬೆಳೆ ಹಾನಿಗೆ ಪ್ರತೀ ಹೆಕ್ಟೆರ್‍ಗೆ 18 ಸಾವಿರ ರೂ., ಗದ್ದೆಗಳಿಗೆ ಪ್ರತೀ ಹೆಕ್ಟೆರ್ ಗೆ 13,500 ರೂ. ಪರಿಹಾರ ಧನ ನೀಡಲಾಗುವುದು. ಕೃಷಿ ಭೂಮಿಯಲ್ಲಿ ಮಣ್ಣು, ಮರಳು, ಹೂಳು ತುಂಬಿದ್ದರೇ ಅಂತಹ ಜಮೀನುಗಳಿಗೆ ಪ್ರತೀ ಹೆಕ್ಟೆರ್ ಗೆ 12 ಸಾವಿರ ರೂ. ಪರಿಹಾರ ಧನ ನೀಡಲಾಗುವುದು ಎಂದರು.

ಅತಿವೃಷ್ಟಿಯಿಂದ ಸಂತ್ರಸ್ತರಾದವರಿಗೆ ಜಿಲ್ಲಾದ್ಯಂತ 26 ಗಂಜಿಕೇಂದ್ರಗಳನ್ನು ತೆರೆದು ಆಶ್ರಯ ನೀಡಲಾಗಿದೆ. ಸದ್ಯ ಮಳೆ ನಿಂತಿರುವುದರಿಂದ ಗಂಜಿಕೇಂದ್ರಗಳಲ್ಲಿದ್ದ ಕೆಲ ಸಂತ್ರಸ್ಥರು ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ. ಸದ್ಯ 1631 ಸಂತ್ರಸ್ಥರು ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ಮೂಡಿಗೆರೆ ತಾಲೂಕಿನಲ್ಲಿ 1332 ಬಾಧಿತರು ಗಂಜಿಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದು, ನರಸಿಂಹರಾಜಪುರ ತಾಲೂಕಿನಲ್ಲಿ 120 ಮಂದಿ, ಚಿಕ್ಕಮಗಳೂರು ತಾಲೂಕಿನಲ್ಲಿ 179 ಮಂದಿ ಬಾಧಿತರಿಗೆ ಗಂಜಿಕೇಂದ್ರಗಳಿಗೆ ಆಶ್ರಯ ನೀಡಲಾಗಿದೆ. ಈ ಸಂತ್ರಸ್ಥರ ಪೈಕಿ 873 ಸಂತ್ರಸ್ಥರಿಗೆ ತಲಾ 3800 ರೂ. ನಂತೆ ಈಗಾಗಲೇ 33.17 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇದರೊಂದಿಗೆ ಸರಕಾರ ನೀಡುವ 6 ಸಾವಿರ ರೂ. ಸೇರಿದಂತೆ 10 ಸಾವಿರ ರೂ.ಪರಿಹಾರ ನೀಡುವಂತೆ ಸರಕಾರ ಆದೇಶಿಸಿದ್ದು, ಶೀಘ್ರ ವಿತರಿಸಲಾಗುವುದು ಎಂದರು.

ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದಾಗಿ 950 ಕಿ.ಮೀ. ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, 188.38 ಕೋ. ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಲಾಗಿದೆ. ಈ ರಸ್ತೆಗಳಲ್ಲಿ 300ಕ್ಕೂ ಭೂ ಕುಸಿತ ಸಂಭವಿಸಿದೆ. ಈ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಲಬ್ಯ ಇರುವ ಜೆಸಿಬಿಗಳನ್ನು ವಶಕ್ಕೆ ಪಡೆದು ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಅತಿವೃಷ್ಟಿಯಿಂದ 159 ಸೇತುವೆಗಳಿಗೆ ಹಾನಿಯಾಗಿದ್ದು, ಅಂದಾಜು 41.81 ಕೋ. ರೂ. ನಷ್ಟ ಸಂಭವಿಸಿದೆ. 3.8 ಕೋ. ರೂ. ನಷ್ಟು ಕರೆಗಳಿಗೆ ಹಾನಿಯಾಗಿದೆ ಎಂದರು.

ಜಿಲ್ಲೆಯಲ್ಲಿ 2065 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 1.29 ಕೋ. ರೂ. ನಷ್ಟ ಸಂಭವಿಸಿದೆ ಎಂದ ಅವರು, ಮಲೆನಾಡು ಭಾಗದ ತಾಲೂಕುಗಳಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಲು ಮೆಸ್ಕಾಂ ಇಲಾಖೆ ಅವಿರತ ಶ್ರಮಿಸಿದೆ. ಈ ತಾಲೂಕುಗಳ 45 ಗ್ರಾಮಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಬಿಎಸ್ಸೆನೆಲ್ ಸಂಸ್ಥೆಯ 43 ಟವರ್ ಗಳಿಗೆ ಹಾನಿಯಾಗಿದ್ದು, 200 ಟವರ್ ಗಳ ಪೈಕಿ 199 ಟವರ್ ಗಳು ಸದ್ಯ ಕಾರ್ಯಾರಂಭ ಮಾಡಿವೆ. ಸಂಸ್ಥೆಯ ಟವರ್ ಗಳಿಗೆ ಅಂದಾಜು 50.5 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದರು.

ಮೂಡಿಗೆರೆ ತಾಲೂಕಿನ ಮಧುಗುಂಡಿಯಲ್ಲಿ ಸುಮಾರು 70 ಕುಟುಂಬಗಳು, ಆಲೆಕಾನ್ ಹೊರಟ್ಟಿಯಲ್ಲಿ 40ರಿಂದ 50 ಕುಟುಂಬಗಳು ಹಾಗೂ ಮಲೆಮನೆಯಲ್ಲಿ 100 ಕುಟುಂಬಗಳು ಅತಿವೃಷ್ಟಿಯಿಂದ ಬಾಧಿತರಾಗಿದೆ. ಈ ಗ್ರಾಮಗಳಲ್ಲಿನ ಎಲ್ಲರನ್ನೂ ರಕ್ಷಣೆ ಮಾಡಿದ್ದು, ಈ ಗ್ರಾಮಗಳು ಸದ್ಯ ಜನವಸತಿಗೆ ಯೋಗ್ಯವಾಗಿಲ್ಲ. ನಾವು ಮತ್ತೆ ಅಲ್ಲಿಗೆ ಹೋಗುವುದಿಲ್ಲ, ಬೇರೆಡೆ ಜಮೀನು, ಮನೆ ನೀಡಿ ಎಂದು ಸಂತ್ರಸ್ತರು ಕೋರಿದ್ದಾರೆ. ಈ ಸಂಬಂಧ ಸರಕಾರ, ಜನಪ್ರತಿನಿಧಿಗಳ ಬಳಿ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದ ಅವರು, ಮೂಡಿಗೆರೆ ತಾಲೂಕಿನ ದೇವರಗುಡ್ಡ, ಕಾರ್‍ಗದ್ದೆ, ಬಲ್ಲಾಳರಾಯನ ದುರ್ಗ, ಸುಂಕಸಾಲೆ, ಇಡಕಣಿ, ಮಲ್ಲೇಶನಗುಡ್ಡ, ಕುಣಿಯಾಲ, ಕೋಟೆಮಕ್ಕಿ ಮತ್ತಿತರ ಗ್ರಾಮಗಳಲ್ಲಿ ಭೂ ಕುಸಿತದಿಂದ ಹಾನಿಯಾಗಿದ್ದು, ಕಂದಾಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸ್ಥಳಗಳು ವಾಸಯೋಗ್ಯವೇ ಎಂಬುದನ್ನು ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದರು.

ಸದ್ಯ ಜಿಲ್ಲಾದ್ಯಂತ ಮಳೆ ಆರ್ಭಟ ನಿಂತಿದ್ದು, ಬುಧವಾರ ಸಂಜೆ ಮತ್ತೆ ಭಾರೀ ಮಳೆಯಾಗಿದೆ. ಅತಿವೃಷ್ಟಿಗೆ ತುತ್ತಾಗಿ ನಲುಗಿರುವ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲೂಕುಗಳನ್ನು ಪ್ರವಾಹ ಪೀಡಿತ ತಾಲೂಕುಗಳೆಂದು ಸರಕಾರ ಘೋಷಿಸಿದೆ. ಚಿಕ್ಕಮಗಳೂರು ತಾಲೂಕನ್ನೂ ಪ್ರವಾಹ ಪೀಡಿತ ತಾಲೂಕು ಘೋಷಿಸಬೇಕೆಂದು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವ ಕಳಿಸಿದ್ದು, ಸರಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಿದೆ. ಗಂಜಿಕೇಂದ್ರಗಳಲ್ಲಿ ಅಗತ್ಯ ನೆರವು ಸೇರಿದಂತೆ ತುರ್ತು ಪರಿಹಾರ ಕ್ರಮಗಳಿಗೆ ಸರಕಾರ ಮುಂಗಡವಾಗಿ 5 ಕೋ. ರೂ. ಅನುದಾನ ಬಿಡಗಡೆ ಮಾಡಿದೆ. ಜಿಲ್ಲಾಡಳಿತದ ಬಳಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಹಣದ ಕೊರತೆ ಇಲ್ಲ. ಆವಶ್ಯಕತೆಗನುಗುಣವಾಗಿ ಹಣವನ್ನು ತಾಲೂಕುಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದರು.

ಚಾರ್ಮಾಡಿ ಘಾಟ್ ವ್ಯಾಪ್ತಿಯ ರಾ.ಹೆದ್ದಾರಿಯಲ್ಲಿ 60 ಕಡೆಗಳಲ್ಲಿ ಭೂ ಕುಸಿತ ಸಂಭವಿದೆ. ಈ ಪೈಕಿ 20 ಕಡೆಗಳಲ್ಲಿ ಭಾರೀ ಭೂಕುಸಿತ ಉಂಟಾಗಿ ರಸ್ತೆಗಳಿಗೆ ಭಾರೀ ಹಾನಿಯಾಗಿದೆ. 40 ಕಡೆಗಳಲ್ಲಿ ಸಂಭವಿಸಿರುವ ಭೂ ಕುಸಿತದಿಂದಾಗಿ ಕಡಿಮೆ ಪ್ರಮಾಣದ ಹಾನಿಯಾಗಿದೆ. ಸದ್ಯ ಈ ರಸ್ತೆಯಲ್ಲಿ ವಾಹನ ಸಂಚಾರ ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ದುರಸ್ತಿ, ಕಾಮಗಾರಿಗಳನ್ನು ಕೈಗೊಳ್ಳುವ ಉದ್ದೇಶದಿಂದ ರಾ.ಹೆದ್ದಾರಿ ಇಇ ಅವರ ಕೋರಿಕೆ ಮೇರೆಗೆ ಆ.14ರಿಂದ ಸೆ.15ರವರೆಗೆ ಕೊಟ್ಟಿಗೆಹಾರದ ಮೂಲಕ ಚಾರ್ಮಾಡಿ ಘಾಟ್ ಮಾರ್ಗದಲ್ಲಿ ಸಂಚರಿಸುವ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್ಪಿ ಹರೀಶ್ ಪಾಂಡೆ, ಜಿಪಂ ಸಿಇಒ ಅಶ್ವತಿ, ಎಡಿಸಿ ಕುಮಾರ್ ಉಪಸ್ಥಿತರಿದ್ದರು.

ಭಾರೀ ಮಳೆ ಹಿನ್ನೆಲೆಯಲ್ಲಿ ಕಡೂರು, ತರೀಕೆರೆ ತಾಲೂಕು ಹೊರತು ಪಡಿಸಿ ಉಳಿದ ತಾಲೂಕಗಳಿಗೆ ಕಳೆದೊಂದು ವಾರ ರಜೆ ನೀಡಲಾಗಿತ್ತು. ಮಳೆ ನಿಂತಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಈ ತಾಲೂಕುಗಳ ವ್ಯಾಪ್ತಿಯಲ್ಲಿ ಗಂಜಿಕೇಂದ್ರಗಳಿರುವ ಶಾಲೆಗಳು ಹೊರತು ಪಡಿಸಿ ಉಳಿದ ಶಾಲಾ ಕಾಲೇಜುಗಳು ಎಂದಿನಂತೆ ನಡೆಯಲಿವೆ. ಗಂಜಿಕೇಂದ್ರಗಳಲ್ಲಿರುವ ಆಲೆಕಾನ್ ಹೊರಟ್ಟಿ, ಮಧುಗುಂಡಿ ಗ್ರಾಮಗಳ ಶಾಲಾ ಮಕ್ಕಳಿಗೆ ಬಿದರಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಚಿಕ್ಕಮಗಳೂರು ಜಿಲ್ಲೆಯ ವಾರ್ಷಿಕ ವಾಡಿಕೆ ಮಳೆ 1753 ಮಿಮೀ. ಆಗಿದ್ದು, ಆ.14ರವರೆಗೆ 1217 ಮಿಮೀ. ಆಗಿದೆ. ಆದರೆ ಆ.14ರವರೆಗೆ ಜಿಲ್ಲೆಯಲ್ಲಾಗಿರುವ ವಾರ್ಷಿಕ ಮಳೆ 1286 ಮಿಮೀ. ಆಗಿದ್ದು, ಶೇ.6ರಷ್ಟು ಹೆಚ್ಚು ಮಳೆಯಾಗಿದೆ. ಆ.1ರಿಂದ ಆ.14ರವರೆಗೆ ವಾಡಿಕೆ ಮಳೆ 199 ಮಿಮೀ. ಆಗಿದ್ದು, 631 ಮಿಮೀ ಹೆಚ್ಚುವರಿ ಮಳೆಯಾಗಿದೆ. ಈ ಅವಧಿಯಲ್ಲಿ ವಾಡಿಕೆಗಿಂತ ಮೂರು ಪಟ್ಟು ಮಳೆಯಾಗಿರುವುದರಿಂದ ಭಾರೀ ಪ್ರಾಕೃತಿಕ ವಿಕೋಪ ಸಂಭವಿಸಿದೆ.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ಬಾಬಾಬುಡನ್‍ಗಿರಿ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು, ಅಲ್ಲಲ್ಲಿ ಭೂ ಕುಸಿತದಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಸ್ಥಳಿಯರನ್ನು ಹೊರತು ಪಡಿಸಿ ಪ್ರವಾಸಿಗರ ವಾಹನಗಳಿಗೆ ಗಿರಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ರಸ್ತೆ ಸಂಪರ್ಕ ಪುನಾರಂಭವಾಗುವವರೆಗೂ ಈ ರಸ್ತೆಗಲ್ಲಿ ಪ್ರವಾಸಿಗರ ಪ್ರವಾಸಿಗರ ಹಿತದೃಷ್ಟಿಯಿಂದ ವಾಹನಗಳ ಸಂಚಾರವನ್ನು ಆ.30ರವರೆಗೆ ನಿಷೇದಿಸಲಾಗಿದೆ.
- ಹರೀಶ್ ಪಾಂಡೆ, ಎಸ್ಪಿ

ಅತೀವೃಷ್ಟಿ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ಸಂತ್ರಸ್ತರ ನೆರವಿಗೆ ಬಂದಿದ್ದಾರೆ. ಕಳಸ ಪಟ್ಟಣದಲ್ಲಿ ಗೋಪಾಲ್ ಶೆಟ್ಟಿ ಎಂಬವರು ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ತಮ್ಮ ಹೊಸ ಮನೆಯಲ್ಲೇ ನಿರಾಶ್ರಿತರಿಗೆ ಆಶ್ರಯ ನೀಡಿದ್ದಾರೆ. ಸೈನಿಕರು, ಪೊಲೀಸ್, ಅಗ್ನಿಶಾಮಕದಳ, ಕಂದಾಯ ಇಲಾಖೆ ಸಿಬ್ಬಂದಿಯೊಂದಿಗೆ ಸಂಘ ಸಂಸ್ಥೆಗಳು, ಸ್ವಯಂಸೇವಕರು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ. ನಿರಾಶ್ರಿತರ ಕೇಂದ್ರಗಳಿಗೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಾರೀ ಪ್ರಮಾಣದಲ್ಲಿ ನೆರವು ಹರಿದು ಬರುತ್ತಿದೆ. ಈ ನೆರವು ಸಂತ್ರಸ್ತರಿಗೆ ತಲುಪಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದ್ದು, ವಂಚನೆ ಕಂಡು ಬಂದಲ್ಲಿ ಕಾನೂನು ಕ್ರಮಕೈಗೊಳ್ಳಲಾಗುವುದು.
- ಡಾ.ಬಗಾದಿ ಗೌತಮ್, ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News