ಬಿಜೆಪಿ ನಾಯಕರ ಪಾಲಿಗೆ ಕರ್ನಾಟಕ ‘ಟೂರಿಂಗ್ ಸ್ಪಾಟ್’ ಆಗಿದೆ: ಮಾಜಿ ಸಚಿವ ಪ್ರಿಯಾಂಕ್ ಖರ್ಗೆ

Update: 2019-08-15 12:44 GMT

ಕಲಬುರಗಿ, ಆ. 15: ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೆರೆ ಸಂತ್ರಸ್ತರ ನೆರವಿಗೆ ಅನುದಾನ ಬಿಡುಗಡೆ ಮಾಡುವ ಬದಲಿಗೆ ರಾಜ್ಯವನ್ನು ಟೂರಿಂಗ್ ಸ್ಪಾಟ್ ಮಾಡಿಕೊಂಡಂತೆ ಆಗಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಗುರುವಾರ ಇಲ್ಲಿನ ಚಿತ್ತಾಪುರದಲ್ಲಿ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರವಾಹ ಪರಿಸ್ಥಿತಿ ಪರಿಶೀಲನೆ ನಡೆಸಿದ ಅಮಿತ್ ಶಾ ಮತ್ತು ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಕನಿಷ್ಟ 10ಸಾವಿರ ಕೋಟಿ ರೂ.ಘೋಷಣೆ ಮಾಡಬೇಕಿತ್ತು. ಆದರೆ, ಈವರೆಗೂ ಕೇಂದ್ರ ಸರಕಾರ ರಾಜ್ಯಕ್ಕೆ ಯಾವುದೇ ನೆರವು ನೀಡಿಲ್ಲ ಎಂದು ದೂರಿದರು.

ಅನ್ಯಾಯ: ಭಾರೀ ಮಳೆ ಮತ್ತು ಪ್ರವಾಹದಿಂದ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ನಾಲ್ಕು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ. 3ಲಕ್ಷ ಜನರನ್ನು ನಿರಾಶ್ರಿತರ ಶಿಬಿರದಲ್ಲಿ ಇರಿಸಲಾಗಿದೆ. ಹಲವಾರು ಸಾವು ನೋವುಗಳು ಉಂಟಾಗಿವೆ. 40 ಸಾವಿರ ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಆದರೆ, ಸಂತ್ರಸ್ತರ ನೆರವಿಗೆ ಧಾವಿಸಬೇಕಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಪರಿಹಾರ ಕೇಳಿದ ಸಂತ್ರಸ್ತರಿಗೆ ‘ನಮ್ಮ ಬಳಿ ನೋಟ್ ಪ್ರಿಂಟ್ ಮಾಡುವ ಯಂತ್ರವಿಲ್ಲ’ ಎಂದು ಹೇಳಿರುವುದು ಜನರಿಗೆ ಮಾಡಿದ ಘೋರ ಅನ್ಯಾಯ ಎಂದು ಅವರು ವಾಗ್ದಾಳಿ ನಡೆಸಿದರು.

‘ಆಪರೇಷನ್ ಕಮಲ’ ಮೂಲಕ ಹಿಂಬಾಗಿಲಿನಿಂದ ತರಾತುರಿಯಲ್ಲಿ ಸಿಎಂ ಆದ ಬಿಎಸ್‌ವೈ, ಸಂಪುಟ ರಚನೆ ಮಾಡದೆ ಇರುವುದರಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ಹಿನ್ನೆಡೆಯಾಗಿದೆ ಎಂದ ಅವರು, ಇದೇ ಮೊದಲ ಬಾರಿಗೆ ಉಸ್ತುವಾರಿ ಸಚಿವರಿಲ್ಲದೆ ಸ್ವಾತಂತ್ರೋತ್ಸವ ಆಚರಣೆ ಮಾಡಿದಂತೆ ಆಗಿದೆ ಎಂದು ಲೇವಡಿ ಮಾಡಿದರು.

ತಾರತಮ್ಯ: ಪ್ರವಾಹ ಪರಿಸ್ಥಿತಿಯಿಂದ ಹಾನಿಯಾಗಿರುವ ಕಲಬುರಗಿ ಜಿಲ್ಲೆಗೆ 5 ಕೋಟಿ ರೂ.ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ. ಆದರೆ. ಹಾನಿಗೆ ಒಳಗಾಗಿರುವ ಚಿತ್ತಾಪುರ ತಾಲೂಕನ್ನು ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಕೈಬಿಟ್ಟಿರುವುದು ತಾರತಮ್ಯದ ಪರಮಾವಧಿ ಎಂದು ಟೀಕಿಸಿದರು.

ಚಿತ್ತಾಪುರದಲ್ಲಿ ನಡೆದ ಇತ್ತೀಚಿನ ಘಟನೆಯನ್ನು ಉಲ್ಲೇಖಿಸಿದ ಅವರು, ಇಂತಹ ಘಟನೆಗಳು ಸಾಮರಸ್ಯ ಹಾಳು ಮಾಡುತ್ತವೆ. ನಾನು ಯಾರ ಹೆಸರನ್ನು ಅಥವಾ ಪಕ್ಷದ ಹೆಸರನ್ನು ಹೇಳಲು ಇಚ್ಛಿಸುವುದಿಲ್ಲ. ಆದರೆ ಇಂತಹ ಘಟನೆಗಳನ್ನು ಪ್ರೇರೇಪಿಸುವ ಶಕ್ತಿಗಳನ್ನು ಯಾವುದೇ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕೆಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News