ರಾಯಚೂರು: ಪ್ರವಾಹದ ನಡುವೆ ಆ್ಯಂಬುಲೆನ್ಸ್‌ಗೆ ದಾರಿ ತೋರಿಸಿದ ಬಾಲಕನಿಗೆ ಸಾಹಸ ಸೇವಾ ಪ್ರಶಸ್ತಿ

Update: 2019-08-15 12:56 GMT

ರಾಯಚೂರು, ಆ.15: ಕೃಷ್ಣಾ ನದಿ ಪ್ರವಾಹದ ನೀರಿನಲ್ಲಿ ಆ್ಯಂಬುಲೆನ್ಸ್‌ಗೆ ದಾರಿ ತೋರಿಸಿ ಸಾಹಸ ಮೆರೆದಿದ್ದ ಬಾಲಕನಿಗೆ ರಾಯಚೂರು ಜಿಲ್ಲಾಡಳಿತ ಸಾಹಸ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.

ರಾಯಚೂರಿನ ಪೊಲೀಸ್ ಕವಾಯತ್ ಮೈದಾನದಲ್ಲಿ ಗುರುವಾರ ನಡೆದ ಧ್ವಜಾರೋಹಣದ ವೇಳೆ ಬಾಲಕ ವೆಂಕಟೇಶ್‌ನಿಗೆ ಜಿಲ್ಲಾಧಿಕಾರಿ ಶರತ್ ಬಿ. ಪ್ರಶಸ್ತಿ ನೀಡಿ ಪ್ರೋತ್ಸಾಹಿಸಿದ್ದಾರೆ. ಕೃಷ್ಣಾ ನದಿಯಿಂದ ಉಂಟಾದ ಪ್ರವಾಹಕ್ಕೆ ದೇವದುರ್ಗ ತಾಲೂಕಿನ ಹಿರೇರಾಯಕುಂಪಿ-ಗೂಗಲ್ ಸೇತುವೆ ಮುಳುಗಡೆಯಾಗಿತ್ತು. ಈ ವೇಳೆ ಮುಳುಗಡೆಯಾದ ಸೇತುವೆಯಲ್ಲಿ ಮೃತದೇಹ ಹೊತ್ತು ಬರುತ್ತಿದ್ದ ಆ್ಯಂಬುಲೆನ್ಸ್ ಚಾಲಕನಿಗೆ ರಸ್ತೆ ಎಲ್ಲಿದೆ ಎಂಬುದು ತಿಳಿಯುತ್ತಿರಲಿಲ್ಲ. ಈ ಸಂದರ್ಭದಲ್ಲಿ ಬಾಲಕ ತನ್ನ ಜೀವದ ಹಂಗು ತೊರೆದು ನೀರಿನಲ್ಲಿ ನಡೆದು ದಾರಿ ತೋರಿಸುವ ಮೂಲಕ ಸಹಾಯ ಮಾಡಿದ್ದನು. ಚಿಕ್ಕವಯಸ್ಸಿನ ವೆಂಕಟೇಶ್ ಸಾಹಸಕ್ಕೆ ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News