ಕೊಡಗಿನಲ್ಲಿ ಬಿಡುವು ನೀಡಿದ ಮಳೆ: ನಾಳೆಯಿಂದ ಶಾಲಾ ಕಾಲೇಜುಗಳು ಆರಂಭ

Update: 2019-08-15 14:34 GMT

ಮಡಿಕೇರಿ, ಆ.15 : ಮಹಾಮಳೆಯ ಪರಿಣಾಮ ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದ್ದ ಕೊಡಗು ಜಿಲ್ಲೆಯಲ್ಲಿ ಮಳೆ ಕೊಂಚ ಬಿಡುವು ನೀಡಿದ್ದು, ಸಾಧಾರಣ ಪ್ರಮಾಣದ ಮಳೆಯಷ್ಟೆ ಆಗುತ್ತಿದೆ. 

ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿರುವುದರಿಂದ ಆ.16 ರಿಂದ ಎಲ್ಲಾ ಶಾಲಾ, ಕಾಲೇಜುಗಳು ಹಾಗೂ ಅಂಗನವಾಡಿಗಳು ಪುನರ್ ಆರಂಭಗೊಳ್ಳಲಿವೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ. ಆದರೆ ಮಳೆಹಾನಿ ಸಂತ್ರಸ್ತರು ಆಶ್ರಯ ಪಡೆದಿರುವ ಶಾಲಾ, ಕಾಲೇಜುಗಳು ಹಾಗೂ ಅಂಗನವಾಡಿಗಳ ವಿದ್ಯಾರ್ಥಿಗಳಿಗೆ ರಜೆ ಇರುತ್ತದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆ.15 ರಿಂದ 16 ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿತ್ತಾರೂ, ಗುರುವಾರ ದೊಡ್ಡ ಪ್ರಮಾಣದ ಮಳೆ ಆಗಿಲ್ಲ. ಜಿಲ್ಲಾಡಳಿತದ ವತಿಯಿಂದ ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರ ಕೇಂದ್ರ ಮತ್ತು ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸಂತ್ರಸ್ತರಲ್ಲಿ ಧೈರ್ಯ ತುಂಬುತ್ತಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯರ ತಂಡ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರ ಆರೋಗ್ಯದ ಮೇಲೆ ನಿಗಾ ಇರಿಸಿದೆ.

ಅಯ್ಯಪ್ಪ ಬೆಟ್ಟಕ್ಕೆ ನಾಳೆ ಸರ್ವೇಕ್ಷಣಾಧಿಕಾರಿಗಳ ಭೇಟಿ
ಬಿರುಕು ಕಾಣಿಸಿಕೊಂಡಿರುವ ವಿರಾಜಪೇಟೆಯ ಅಯ್ಯಪ್ಪ ಬೆಟ್ಟ ಹಾಗೂ ನೆಹರು ನಗರದ ಪರಿಸ್ಥಿತಿಯ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಜಿಲ್ಲಾಡಳಿತ ಮನವಿ ಮಾಡಿಕೊಂಡಿರುವ ಮೇರೆಗೆ ಭಾರತೀಯ ಸರ್ವೇಕ್ಷಣಾ ಇಲಾಖೆಯ ಅಧಿಕಾರಿಗಳ ತಂಡ ಆ.16 ರಂದು ಈ ಪ್ರದೇಶಗಳಿಗೆ ಭೇಟಿ ನೀಡಲಿದೆ. ಅಯ್ಯಪ್ಪ ಬೆಟ್ಟದಲ್ಲಿ ಸುಮಾರು 25 ಮೀಟರ್ ನಷ್ಟು ಬಿರುಕು ಕಾಣಿಸಿಕೊಂಡಿದ್ದು, ನೀರು ನುಗ್ಗಿ ಹೆಚ್ಚಿನ ಅನಾಹುತವಾಗದಂತೆ ಸಿಮೆಂಟ್‍ನಿಂದ ಬಿರುಕನ್ನು ಮುಚ್ಚಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಇಲ್ಲಿರುವ ನಿವಾಸಿಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಆರು ಶವಗಳಿಗಾಗಿ ಶೋಧ
ವಿರಾಜಪೇಟೆಯ ತೋರ ಗ್ರಾಮದಲ್ಲಿ ಆ.9 ರಂದು ಗುಡ್ಡ ಕುಸಿದು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣ್ಣಿನಡಿ ಸಿಲುಕಿಕೊಂಡಿರುವ ಆರು ಮೃತದೇಹಗಳ ಶೋಧ ಕಾರ್ಯ ಚುರುಕುಗೊಂಡಿದೆ. ಸ್ಥಳಕ್ಕೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಹಾಗೂ ಜಿ.ಪಂ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯ ಪರಿಹಾರ ಕೇಂದ್ರಗಳಿಗೆ ತೆರಳಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಜಿಲ್ಲೆಗೆ ಶೇ.62.51 ರಷ್ಟು ಮಳೆ
ಜನವರಿಯಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ 2007.30 ಮಿ.ಮೀ ಮಳೆಯಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3211.08 ಮಳೆಯಾಗಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಇಲ್ಲಿಯವರೆಗೆ ಶೇ.62.51 ರಷ್ಟು ಮಳೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News