‘ಅಧಿಕಾರಿಗಳಿಂದ ಧ್ವಜಾರೋಹಣ’ ಪ್ರಜಾಪ್ರಭುತ್ವಕ್ಕೆ ಅಪಮಾನ: ಮಲ್ಲಿಕಾರ್ಜುನ ಖರ್ಗೆ

Update: 2019-08-15 15:15 GMT

ಕಲಬುರಗಿ, ಆ.15: ರಾಜ್ಯದಲ್ಲಿ ಸರಕಾರವಿದ್ದು, ಮುಖ್ಯಮಂತ್ರಿಯೂ ಇದ್ದು, ಜನಪ್ರತಿನಿಧಿಗಳ ಬದಲು ಅಧಿಕಾರಿಗಳ ಮೂಲಕ ಧ್ವಜಾರೋಹಣ ನಡೆಯುತ್ತಿರುವುದು ಇದೇ ಮೊದಲು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಗುರುವಾರ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಧ್ವಜಾರೋಹಣ ಮಾಡದೇ, ಅಧಿಕಾರಿಗಳಿಂದ ಆ ಕೆಲಸ ಮಾಡಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ದೊಡ್ಡ ಅಪಮಾನವಾಗಿದೆ ಎಂದು ಕಿಡಿಕಾರಿದರು.

ರಾಜ್ಯದ ಸುಮಾರು 22 ಜಿಲ್ಲೆಗಳಲ್ಲಿ ನೆರೆ ಹಾವಳಿ, ಅತಿವೃಷ್ಟಿಯಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಒಬ್ಬ ಮುಖ್ಯಮಂತ್ರಿಯಿಂದ ಎಲ್ಲ ವಿಚಾರಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಮಂತ್ರಿ ಮಂಡಲ ರಚನೆ ಮಾಡಲು ಅವರಿಗೆ ಇರುವ ಅಡೆತಡೆಯಾದರೂ ಏನು ಎಂದು ಅವರು ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಬಗ್ಗೆ ಬಿಜೆಪಿಯವರು ದೊಡ್ಡದಾಗಿ ಮಾತನಾಡುತ್ತಾರೆ. ಆದರೆ, ಬಿಜೆಪಿ ಪಕ್ಷ ಹಾಗೂ ಸರಕಾರದಲ್ಲಿ ಹೊಂದಾಣಿಕೆಯೇ ಇಲ್ಲವೇನೋ? ಎಂತಹ ಕಠಿಣ ಸಂದರ್ಭದಲ್ಲಿಯೂ ಮುಖ್ಯಮಂತ್ರಿ ಇದ್ದು, ಸಚಿವ ಸಂಪುಟ ಇಲ್ಲದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಆದರೆ, ಇವತ್ತು ಇಂತಹ ಸ್ಥಿತಿ ಎದುರಾಗಲು ಬಿಜೆಪಿಯವರೇ ಕಾರಣ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ರಾಜ್ಯದಲ್ಲಿ ನೆರೆ ಹಾವಳಿಯಿಂದ ಊಹಿಸಲಾಗದಷ್ಟು ಹಾನಿಯಾಗಿದೆ. ಜನಸಾಮಾನ್ಯರು ತಮ್ಮ ಮನೆ, ಮಠ, ಆಸ್ತಿ-ಪಾಸ್ತಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇತ್ತ ಗಮನಹರಿಸಿ, ರಾಜ್ಯಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಅಲ್ಲದೇ, ಈ ನೆರೆ ಹಾವಳಿಯು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕೆಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News