ಶ್ರೀನಗರದಲ್ಲಿ ತ್ರಿವರ್ಣ ಧ್ವಜ ಅರಳಿಸಿದ ರಾಜ್ಯಪಾಲ ಸತ್ಯಪಾಲ್ ಮಲಿಕ್

Update: 2019-08-15 17:00 GMT

ಶ್ರೀನಗರ, ಆ. 15: ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬಳಿಕ ಜಮ್ಮು ಹಾಗೂ ಕಾಶ್ಮೀರದಲ್ಲಿ ಮೊದಲ ಸ್ವಾತಂತ್ರ ದಿನಾಚರಣೆ ನಡೆದಿದ್ದು, ಶ್ರೀನಗರದ ಶೇರ್-ಎ-ಕಾಶ್ಮೀರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ತ್ರಿವರ್ಣ ಧ್ವಜ ಆರೋಹಣಗೈದರು. ಧ್ವಜಾರೋಹಣಗೈದ ಬಳಿಕ ಮಲ್ಲಿಕ್ ಅವರು ಅರೆ ಸೇನಾ ಪಡೆ ಹಾಗೂ ಜಮ್ಮು ಹಾಗೂ ಕಾಶ್ಮೀರ ಪೊಲೀಸರ ಪರೇಡ್ ಅನ್ನು ವೀಕ್ಷಿಸಿದರು. ಈ ಸಂದರ್ಭ ಮಾತನಾಡಿದ ಮಲ್ಲಿಕ್, ಕೇಂದ್ರ ಸರಕಾರ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿ ವಿಭಜಿಸಿದ ಹಿನ್ನೆಲೆಯಲ್ಲಿ ತಮ್ಮ ಅಸ್ಮಿತತೆ ಬಗ್ಗೆ ಯಾರೂ ಕೂಡ ಚಿಂತಿಸುವ ಅಗತ್ಯ ಇಲ್ಲ ಎಂದರು. ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಸರಕಾರ ಕೈಗೆತ್ತಿಕೊಳ್ಳಲಿದೆ ಹಾಗೂ ಸತತ ಪ್ರಯತ್ನದಿಂದ ಭಯೋತ್ಪಾದಕರು ಸೋಲೊಪ್ಪಿಕೊಂಡಿರುವುದನ್ನು ಸೇನಾ ಪಡೆಗಳು ಖಚಿತಪಡಿಸಿವೆ ಎಂದು ಅವರು ಹೇಳಿದರು. ಭಯೋತ್ಪಾದಕ ಸಂಘಟನೆಗೆ ನಿಯೋಜನೆ ಹಾಗೂ ಕಲ್ಲು ತೂರಾಟದ ಘಟನೆಗಳು ತೀವ್ರ ಇಳಿಮುಖವಾಗಿವೆ ಎಂದು ಅವರು ತಿಳಿಸಿದರು. ಆದರೆ, ಕಣಿವೆಯಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡಲು ಸೂಕ್ತ ನಿರ್ಬಂಧ ಹೇರಲಾಗಿದೆ ಎಂದು ಮಲ್ಲಿಕ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News