ಮೈಸೂರು: ಸ್ವಾತಂತ್ರ್ಯೋತ್ಸವ ದಿನದಂದೇ ಕೇಸರಿ ಧ್ವಜ ಹಾರಿಸಿದ ಆರೆಸ್ಸೆಸ್ ಕಾರ್ಯಕರ್ತರು

Update: 2019-08-15 18:30 GMT

ಮೈಸೂರು, ಆ.15: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಇಡೀ ರಾಷ್ಟ್ರವೇ ರಾಷ್ಟ್ರ ಧ್ವಜ ಹಾರಿಸಿ ಸಂಭ್ರಮಿಸುತ್ತಿದ್ದರೆ, ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಕೇಸರಿ ಧ್ವಜವನ್ನು ಹಾರಿಸಿದ ಘಟನೆ ನಡೆದಿದೆ.

ನಂಜನಗೂಡು ಪಟ್ಟಣದ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಗುರುವಾರ ತಾಲೂಕು ಆಡಳಿತ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಗಿತ್ತು. ಜೊತೆಗೆ ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜ್ ವತಿಯಿಂದಲೂ ಸ್ವಾತಂತ್ರ್ಯೋತ್ಸವ ಆಚರಿಸಲಾಗಿತ್ತು. ಅದರ ಪಕ್ಕದಲ್ಲೇ ಆರೆಸ್ಸೆಸ್ ಕಾರ್ಯಕರ್ತರು ಸಂಜೆ 5 ಗಂಟೆ ಸಮಯದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ. ಅಲ್ಲದೇ, ಮೈದಾನದಲ್ಲಿ ಆಟವಾಡುತ್ತಿದ್ದ ಸಣ್ಣ ಮಕ್ಕಳನ್ನು ಕರೆದು ರಾಮಭಜನೆ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ ಅಲ್ಪ ದೂರದಲ್ಲೇ ಬುದ್ಧ ಪೌರ್ಣಿಮೆ ಆಚರಣೆಯಲ್ಲಿದ್ದ ದಲಿತ ಸಂಘಟನೆಯವರಿಗೆ ವಿಷಯ ತಿಳಿದಿದ್ದು, ಅವರು ಸ್ಥಳಕ್ಕೆ ಬಂದು, ತಹಶೀಲ್ದಾರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ.

ತಕ್ಷಣ ಸ್ಥಳಕ್ಕೆ ಬಂದ ಸಬ್ ಇನ್ಸ್ ಪೆಕ್ಟರ್ ಅವರು ಕಾರ್ಯಕ್ರಮದ ಬಗ್ಗೆ ಆರೆಸ್ಸೆಸ್ ಕಾರ್ಯಕರ್ತರಲ್ಲಿ ಪ್ರಶ್ನಿಸಿದ್ದು, ಇದನ್ನು ಲೆಕ್ಕಿಸದ ಅವರು ಜೈ ಶ್ರೀರಾಮ್ ಎಂಬ ಘೋಷಣೆ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ, ಸ್ಥಳದಲ್ಲೇ ಇದ್ದ ದಲಿತ ಸಂಘಟನೆ ಕಾರ್ಯಕರ್ತರು ಸೇರಿದಂತೆ ಇತರರು ಅಂಬೇಡ್ಕರ್ ಝಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಪರಿಸ್ಥಿತಿ ಕೈ ಮೀರುವುದನ್ನು ಅರಿತ ಪಿಎಸ್ಐ, ಆರೆಸ್ಸೆಸ್ ಕಾರ್ಯಕರ್ತರಲ್ಲಿ ಕಾರ್ಯಕ್ರಮ ಸ್ಥಗಿತಗೊಳಿಸಲು ಸೂಚಿಸಿದ್ದು, ಆದರೆ ಸ್ಥಳದಿಂದ ಕದಲದ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಭಜನೆಯನ್ನು ಮುಗಿಸಿದ ನಂತರವಷ್ಟೇ ಅಲ್ಲಿಂದ ತೆರಳಿದ್ದಾರೆ ಎನ್ನಲಾಗಿದೆ.

ಘಟನೆ ಬಗ್ಗೆ ದಲಿತ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ದೇಶದ ಕೆಂಪು ಕೋಟೆ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವ ಸಂದರ್ಭದಲ್ಲಿ ಕೆಲವು ಆರೆಸ್ಸೆಸ್ ಕುತಂತ್ರಿಗಳು ಕೇಸರಿ ಧ್ವಜವನ್ನು ಹಾರಿಸುವ ಮೂಲಕ ಅಪಮಾನ ಮಾಡಿದ್ದಾರೆ ಆರೋಪ ಮಾಡಿವೆ.

ಈ ಕುರಿತು ಜನಸಂಗ್ರಾಮ ಪರಿಷತ್ ವಿಭಾಗೀಯ ಸಂಚಾಲಕ ನಗರ್ಲೆ ವಿಜಯ್ ಕುಮಾರ್ ಮಾತನಾಡಿ, ಇಡೀ ದೇಶವೇ ರಾಷ್ಟ್ರ ಧ್ವಜವನ್ನು ಹಾರಿಸುತ್ತಿದ್ದರೆ ಕೆಲವು ಕಿಡುಗೇಡಿಗಳು ರಾಖಿ ಹಬ್ಬದ ಹೆಸರಿನಲ್ಲಿ ಮೈದಾನದಲ್ಲಿ ಆಟ ಆಡುತ್ತಿದ್ದ ಸಣ್ಣ ಸಣ್ಣ ಹುಡುಗರನ್ನು ಸೇರಿಸಿಕೊಂಡು ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂದು ಆರೋಪಿಸಿದರು.

ಅವರು ಅವರ ಸಿದ್ದಾಂತವನ್ನು ಹಂಚಿಕೊಳ್ಳಬೇಕು ಎಂದರೆ ಖಾಸಗಿ ಜಾಗದಲ್ಲೊ ಅಥವಾ ನಾಲ್ಕು ಗೋಡೆಗಳ ಮಧ್ಯೆ ಹೇಳಿಕೊಳ್ಳಲಿ. ಆದರೆ ಸರಕಾರಿ ಜಾಗದಲ್ಲಿ, ಅದೂ ಕೂಡಾ ಸ್ವಾತಂತ್ರ್ಯ ದಿನದಂದು ಕೇಸರಿ ಧ್ವಜ ಹಾರಿಸುವ ಅಗತ್ಯವಿತ್ತೆ ಎಂದು ಪ್ರಶ್ನಿಸಿದರು. ಇದು ಕೋಮು ಉದ್ವಿಘ್ನತೆಗೆ ಕಾರಣವಾಗುತ್ತದೆ. ಹಾಗಾಗಿ ನಾವೇ ತಹಶೀಲ್ದಾರ್ ಅವರಿಗೆ ಮಾಹಿತಿ ನೀಡಿದೆವು ಎಂದು ಹೇಳಿದರು.

ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಂಜನಗೂಡು ತಹಶೀಲ್ದಾರ್ ಮಹೇಶ್, ಕೆಲವು ಹುಡುಗರು ರಾಖಿ ಹಬ್ಬ ಎಂದು ಅಲ್ಲಿ ಕೇಸರಿ ಧ್ವಜ ಇಟ್ಟು ರಾಖಿ ಕಟ್ಟುತ್ತಿದ್ದರು. ಅವರು ಪ್ರತಿ ವರ್ಷ ರಾಖಿ ಹಬ್ಬ ಆಚರಿಸುತ್ತಿದ್ದಾರೆ ಎಂದಿದ್ದಾರೆ. ಅದರಂತೆ ಇಂದು ಸಹ ರಾಖಿ ಕಟ್ಟುವ ಸಲುವಾಗಿ ಮುಂದಾಗಿದ್ದರು. ವಿಷಯ ತಿಳಿದು ಪೊಲೀಸರು ಹೋಗಿ ಅಲ್ಲಿಂದ ಹೋಗುವಂತೆ ಸೂಚಿಸಿದರು. ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News