ಕಂಪ್ಲಿ-ಗಂಗಾವತಿ ಸೇತುವೆಗೆ ಹಾನಿ: ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ- ಡಿಸಿ ಎಸ್.ಎಸ್.ನಕುಲ್

Update: 2019-08-15 18:13 GMT

ಬಳ್ಳಾರಿ, ಆ.15: ಹಾನಿಗೊಳಗಾಗಿರುವ ಕಂಪ್ಲಿ-ಗಂಗಾವತಿ ಸೇತುವೆ ದುರಸ್ತಿ ಕುರಿತು ಕೊಪ್ಪಳ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.

ಸ್ವಾತಂತ್ರ ದಿನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೇತುವೆಗೆ ಹಾನಿಯಾಗಿರುವುದರಿಂದ ವಾಹನ ಸಂಚಾರ ಎಂದಿನಿಂದ ಆರಂಭಿಸಬೇಕು ಎಂಬುದನ್ನು ನಿರ್ಧರಿಸಿಲ್ಲ. ಸೇತುವೆಯ ಸದ್ಯದ ಗುಣಮಟ್ಟದ ಕುರಿತು ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಸೂಚಿಸಲಾಗಿದೆ. ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.

ನದಿ ದಡದ ಬಹುತೇಕ ಗ್ರಾಮಗಳ ಜಮೀನುಗಳು ಜಲಾವೃತಗೊಂಡಿವೆ. ಪ್ರವಾಹದಿಂದ ಸಂತ್ರಸ್ಥರಾದವರಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಅನ್ವಯ ಪರಿಹಾರ ನೀಡಲಾಗುವುದು. ಕಚ್ಚಾ ಮನೆ ಕುಸಿದಿದ್ದರೆ 95 ಸಾವಿರ ನೀಡಲಾಗುತ್ತದೆ. ಪ್ರತಿ ಹೆಕ್ಟೇರ್ ಬೆಳೆ ಹಾನಿಗೆ 13,500 ರೂ.ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಚ್ಚೊಳ್ಳಿ ಮತ್ತು ಹಡಗಲಿ ತಾಲೂಕಿನ ಬ್ಯಾಲ ಹುಣಸಿ ಗ್ರಾಮಗಳ ಸ್ಥಳಾಂತರ ಮಾಡಿ ಶಾಶ್ವತ ಪರಿಹಾರ ನೀಡಬೇಕು ಎಂಬ ಬೇಡಿಕೆ ಇದೆ. ಆ ಬಗ್ಗೆ ಚರ್ಚಿಸಲಾಗುತ್ತಿದೆ. ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಕಾರ್ಯ ಎರಡು ವರ್ಷದಿಂದ ಕುಂಟುತ್ತಿದೆ. ನಿರ್ಮಿತಿ ಕೇಂದ್ರಕ್ಕೆ ಹೊಸ ಯೋಜನಾ ನಿರ್ದೇಶಕರನ್ನು ನಿಯೋಜಿಸಲಾಗಿದೆ. ನೆರವು ನೀಡಲಿರುವ ಜಿಂದಾಲ್ ಜೊತೆಗೂ ಚರ್ಚಿಸಲಾಗುವುದು ಎಂದರು. ಸಂಸದ ವೈ.ದೇವೇಂದ್ರಪ್ಪ ಮಾತನಾಡಿ, ಸಂತ್ರಸ್ಥರಿಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳ ಗಮನ ಸೆಳೆದಿರುವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News