ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಪುನರ್ವಸತಿ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2019-08-15 18:22 GMT

ಯಾದಗಿರಿ, ಆ.15: ಜಲ ಪ್ರವಾಹದಿಂದ ಮನೆ ಕಳೆದುಕೊಂಡಿರುವವರಿಗೆ ಸದ್ಯದ ಮಟ್ಟಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಸದ್ಯದ ಮಟ್ಟಿಗೆ ಮನೆ ಕಳೆದುಕೊಂಡವರಿಗೆ ಕೆಲ ತಾತ್ಕಾಲಿಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ಆಲೋಚಿಸುತ್ತಿದೆ. ಸರ್ವೆ ನಡೆಸಿದ ನಂತರ, ಮನೆ ಮಾಲಕರಿಗೆ ಪರಿಹಾರ ವಿತರಿಸಲಾಗುವುದು. ಮನೆಗಳು ವಾಸಿಸಲು ಯೋಗ್ಯವಾಗಿಲ್ಲವಾದರೆ, ಅಂತಹ ಕುಟುಂಬಗಳು ತಮ್ಮ ಮನೆಯನ್ನು ಪುನರ್ ನಿರ್ಮಿಸುವರೆಗೆ ತಾತ್ಕಾಲಿಕ ವಸತಿ ಕಲ್ಪಿಸಲಾಗುವುದು ಎಂದರು.

ಹೈದರಾಬಾದ್ ಕರ್ನಾಟಕದಲ್ಲಿ ನೆರೆ ಹಾವಳಿ ಕಡಿಮೆಯಾಗಿದ್ದು, ಬಸವಸಾಗರ ಜಲಾಶಯದ ನೀರಿನ ಒಳಹರಿವು ಇಳಿಮುಖವಾಗಿದೆಯಾದರೂ, ಯಾದಗಿರಿ, ರಾಯಚೂರು ಹಾಗೂ ಕಲಬುರಗಿ ಜಿಲ್ಲೆಗಳ ಬಹುತೇಕ ಪ್ರದೇಶಗಳು ಇನ್ನೂ ನೀರಿನಲ್ಲಿ ಮುಳುಗಿದ ಸ್ಥಿತಿಯಲ್ಲಿವೆ.

ಯಾದಗಿರಿ ಹಾಗೂ ರಾಯಚೂರಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳು ಜಲಾವೃತಗೊಂಡಿವೆ. ಕೃಷ್ಣಭಾಗ್ಯ ಜಲ ನಿಗಮದ ಮೂಲಗಳ ಪ್ರಕಾರ, ನಾರಾಯಣಪುರ ಬಸವಸಾಗರ ಜಲಾಶಯದ ಒಳಹರಿವು 5.40 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರಹರಿವು 5.20 ಲಕ್ಷ ಕ್ಯೂಸೆಕ್ಸ್ ಇದೆ. ಕೃಷ್ಣ ನದಿಗೆ ಅಡ್ಡಲಾಗಿ ಕಟ್ಟಿರುವ ಆಲಮಟ್ಟಿ ಜಲಾಶಯದ ಒಳಹರಿವು 5.38 ಲಕ್ಷ ಕ್ಯೂಸೆಕ್ಸ್ ಇದ್ದು, ಹೊರಹರಿವು 5.60 ಲಕ್ಷ ಕ್ಯೂಸೆಕ್ಸ್‌ನಷ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News