ಪ್ರವಾಹ ಕಲಿಸಿದ ಮಾನವೀಯತೆಯ ಪಾಠ

Update: 2019-08-15 18:27 GMT

ಮಾನ್ಯರೇ,

ಕೆಲವು ದಿನಗಳಿಂದ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ತಲ್ಲಣಗೊಳಿಸಿದ ನೆರೆ ಹಲವಾರು ಮಾನವೀಯತೆಯ ಪಾಠಗಳನ್ನು ಕಲಿಸಿ ಹೋಗಿದೆ.

ಒಪ್ಪತ್ತಿನ ಗಂಜಿಗೂ ತತ್ವಾರ ಒದಗಿ ಬಂದ ಈ ಸಂದರ್ಭದಲ್ಲಿ ಯಾವ ಧರ್ಮಾಂಧತೆಯೂ ನೆನಪಿಗೆ ಬರಲಿಲ್ಲ. ಇದ್ದದ್ದು ಮಾನವೀಯತೆಯ ಧರ್ಮ ಒಂದೇ. ನೆರೆಯಿಂದ ಸಂತ್ರಸ್ತರಾದ ಅಬ್ಬುನಾಕನಿಗೆ ಉಳಿದುಕೊಳ್ಳಲು ದೇವಸ್ಥಾನದ ಜಗಲಿಯೂ ಆಯಿತು. ಶೇಖರಣ್ಣನಿಗೆ ಮಸೀದಿಯ ವಠಾರವೂ ಆಯಿತು. ಇಲ್ಲಿ ಯಾವುದೇ ಧರ್ಮ ಮೇಲಾಟ ನಡೆಸಲಿಲ್ಲ. ಸಿಗುವ ಗಂಜಿಯ ಮೂಲವೂ ಕೂಡ ಗಣನೆಗೆ ಬರಲಿಲ್ಲ. ಉಟ್ಟ ಬಟ್ಟೆಯ ಧರ್ಮದ ಹುಡುಕಾಟವೂ ಇರಲಿಲ್ಲ. ಧರ್ಮ-ಧರ್ಮದ ನಡುವೆ, ಜಾತಿ-ಜಾತಿಗಳ ನಡುವೆ ಕಂದಕ ಸೃಷ್ಟಿಸಿದ ವಿಷಪೂರಿತ ಭಾಷಣಗಳು ಮನಸ್ಸಿನೊಳಗೆ ಸುಳಿಯಲಿಲ್ಲ. ಪರಿಸ್ಥಿತಿ ಸರಿ ಇದ್ದಾಗ ಇದ್ದ ಮಡಿಮೈಲಿಗೆ ಮೇಲು ಕೀಳು ಎಂಬ ಭಾವನೆ ಆ ಸಂದರ್ಭದಲ್ಲಿ ಬರಲೇ ಇಲ್ಲ. ಆ ಧರ್ಮದವರ ಹೆಗಲಲ್ಲಿ ಕೂತು ದಡ ಸೇರಿದ ಈ ಧರ್ಮದ ವೃದ್ಧರು, ಈ ಧರ್ಮದ ಯುವಕರ ದೆಸೆಯಿಂದ ಬದುಕುಳಿದ ಅದೆಷ್ಟೋ ದನಕರುಗಳು... ಹೀಗೆ ಎಲ್ಲಿ ನೋಡಿದರಲ್ಲಿ ಮಾನವೀಯತೆಯೇ ಕಂಡುಬಂತೇ ಹೊರತು ಯಾವ ಧರ್ಮವೂ ಕೂಡ ಇಲ್ಲಿ ಅಡ್ಡಿಯಾಗಲಿಲ್ಲ. ಯಾಕೆಂದರೆ ಈ ಸಂದರ್ಭದಲ್ಲಿ ಬೇಕಾಗಿದ್ದದ್ದು ಕೇವಲ ಆಸರೆ ಹಾಗೂ ಹಸಿವು ನೀಗಿಸಲು ಒಂದೊತ್ತಿನ ಗಂಜಿ, ಉಡಲು ತುಂಡು ಬಟ್ಟೆ ಮಾತ್ರ.

ಆದರೆ ಇದು ಎಷ್ಟು ದಿನ ಇರಬಹುದು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಾಗ ಎಲ್ಲವನ್ನೂ ಮರೆತು ಬಿಡಬಹುದಾದ ದಿನಗಳಿವು. ನಾವು ಮರೆತು ಬಿಟ್ಟದ್ದನ್ನು ಸೃಷ್ಟಿಕರ್ತ ಪ್ರಕೃತಿಯ ಮೂಲಕ ನಮಗೆ ಮತ್ತೆ ನೆನಪಿಸಬೇಕು ಅಷ್ಟೇ.

Writer - -ಹಕೀಂ ಕೆಮ್ಮಾರ

contributor

Editor - -ಹಕೀಂ ಕೆಮ್ಮಾರ

contributor

Similar News