ಬ್ಯಾಂಕ್ ವ್ಯವಹಾರಗಳ ಕುರಿತ ಪ್ರಾಥಮಿಕ ಮಾಹಿತಿ

Update: 2019-08-15 18:31 GMT

ಬ್ಯಾಂಕ್‌ಗಳ ಕುರಿತಂತೆ ಹತ್ತು ಹಲವು ತಪ್ಪು ಕಲ್ಪನೆಗಳು ಹರಡಿವೆ. ಬ್ಯಾಂಕುಗಳು ಗ್ರಾಹಕರನ್ನು ಸುಲಿಯುತ್ತಿವೆ ಎನ್ನುವುದು ಇತ್ತೀಚೆಗೆ ಕೇಳಿ ಬರುತ್ತಿರುವ ಆರೋಪಗಳು. ಬದಲಾದ ಆರ್ಥಿಕ ನೀತಿಗಳು ಬ್ಯಾಂಕ್‌ಗಳನ್ನು ಸುಲಿಗೆಕೋರ ಸಂಸ್ಥೆಗಳಾಗಿ ಪರಿವರ್ತಿಸಿವೆ. ಇದರಲ್ಲಿ ಎರಡು ಮಾತಿಲ್ಲ. ಈ ಹಿಂದಿನಿಂದಲೂ ಬ್ಯಾಂಕ್‌ಗಳು ಮಧ್ಯಮ ಮತ್ತು ಕೆಳವರ್ಗದ ಜನರಿಗೆ ಅರ್ಥವಾಗದ ವ್ಯವಹಾರಗಳು. ಇದನ್ನು ಸರಳವಾಗಿ ಪರಿಚಯಿಸುವ ಬರಹಗಳು ಬಂದಿರುವುದು ಅಪರೂಪ. ಈ ನಿಟ್ಟಿನಲ್ಲಿ ಯು. ಪಿ. ಪುರಾಣಿಕ್ ಅವರು ಬರೆದಿರುವ ‘ಯಾರಿಗೆ ಬೇಡ ದುಡ್ಡು!?’ ಕೃತಿ ಬ್ಯಾಂಕ್-ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿಗಳನ್ನು ನೀಡುತ್ತದೆ. ಜನಸಾಮಾನ್ಯರಲ್ಲಿ ಬ್ಯಾಂಕಿಂಗ್, ಹೂಡಿಕೆ, ಉಳಿತಾಯ ಹಾಗೂ ತೆರಿಗೆ ವಿಚಾರಗಳಲ್ಲಿ ಅರಿವು ಮೂಡಿಸಿ, ಹೆಚ್ಚಿನ ವರಮಾನ, ಕಮಿಷನ್, ಉಡುಗೊರೆ, ಹಣ ದ್ವಿಗುಣ ಆಮಿಷಗಳಿಗೆ ಬಲಿಯಾಗದಂತೆ ಜಾಗ್ರತೆಯನ್ನು ಮೂಡಿಸುವ ಉದ್ದೇಶವನ್ನು ಈ ಕೃತಿ ಹೊಂದಿದೆ.
ಬ್ಯಾಂಕುಗಳು ಪ್ರಾರಂಭಗೊಂಡ ಬಗೆ, ಬ್ಯಾಂಕ್ ಠೇವಣಿಗಳು, ಅಂಚೆ ಕಚೇರಿ ಠೇವಣಿಗಳು, ಇತರ ಉಳಿತಾಯ ಯೋಜನೆಗಳು, ಮ್ಯೂಚುವಲ್ ಫಂಡ್‌ಗಳು, ಷೇರು ಮಾರುಕಟ್ಟೆ, ಜೀವವಿಮೆ, ಆರೋಗ್ಯ ವಿಮೆ, ಸಾಲ ಮತ್ತು ಮುಂಗಡ, ಉನ್ನತ ವ್ಯಾಸಂಗಕ್ಕೆ ಸಾಲ ಸೌಲಭ್ಯಗಳು, ಅಡಮಾನ ಸಾಲ, ಗೃಹ ಸಾಲ-ಇನ್ನಿತರ ಸಾಲಗಳು, ಡಿಸ್ಕೌಂಟಿಂಗ್, ಬ್ಯಾಂಕ್-ಹಣಕಾಸು ಇತರೆ ಸಾಮಾನ್ಯ ವಿಷಯಗಳು, ಉಯಿಲು, ಸುರಕ್ಷಿತ ಬ್ಯಾಂಕ್ ವ್ಯವಹಾರಕ್ಕೆ ಕೆಲವು ಅಮೂಲ್ಯ ಸಲಹೆಗಳು, ವಿವಿಧ ರೀತಿಯ ತೆರಿಗೆಗಳು, ಗ್ರಾಹಕರಿಗೆ ಬ್ಯಾಂಕಿನ ವಚನ ಬದ್ಧತೆ, ಬ್ಯಾಂಕಿನಲ್ಲಿ ಬಳಸುವ ಪಾರಿಭಾಷಿಕ ಇಂಗ್ಲಿಷ್ ಶಬ್ದಾರ್ಥಗಳು ಇಷ್ಟು ವಿವರಗಳನ್ನು ಈ ಕೃತಿ ಹೊಂದಿದೆ. ಈ ಕೃತಿ 2008ರಲ್ಲಿ ಪ್ರಕಟಗೊಂಡಿವೆ. ಅಂದರೆ ಸುಮಾರು 10 ವರ್ಷಗಳ ಹಿಂದಿನ ಕೃತಿ. ಈ ನಡುವೆ ಬ್ಯಾಂಕ್ ವ್ಯವಹಾರಗಳಲ್ಲಿ ಭಾರೀ ಬದಲಾವಣೆಗಳು ನಡೆದಿವೆ. ಡಿಜಿಟಲ್ ಬ್ಯಾಂಕಿಂಗ್ ಇತ್ತೀಚೆಗೆ ಚಲಾವಣೆಯಲ್ಲಿರುವ ಪದ. ಜೊತೆಗೆ ಬ್ಯಾಂಕ್‌ಗಳ ತೆರಿಗೆಗಳಲ್ಲಿಯೂ ಭಾರೀ ವ್ಯತ್ಯಾಸಗಳಾಗಿವೆ. ನೋಟು ನಿಷೇಧದ ಬಳಿಕ ಬ್ಯಾಂಕ್‌ಗಳ ಉದ್ದೇಶವೇ ಬದಲಿಸಿದೆ. ಬ್ಯಾಂಕ್‌ಗಳಲ್ಲಿ ಹಣವಿಟ್ಟರೆ, ತೆರಿಗೆ ಕಡಿತವಾಗುತ್ತದೆ ಎನ್ನುವ ಭಯ ಜನರಲ್ಲಿ ಕಾಡ ತೊಡಗಿದೆ. ಆದುದರಿಂದ ಈ ಕೃತಿಯನ್ನು ಓದುಗರು ಒಂದು ಪ್ರಾಥಮಿಕ ಮಾಹಿತಿ ಎಂದಷ್ಟೇ ತಿಳಿದುಕೊಳ್ಳಬೇಕು. ಇಲ್ಲಿರುವ ಹಲವು ವಿಷಯಗಳು ಇದೀಗ ಅಪ್ರಸ್ತುತ ಎನ್ನಿಸಿವೆ. ಹಾಗೆಯೇ ಬ್ಯಾಂಕ್‌ಗಳ ಕುರಿತಂತೆ ಹೊಸ ಮಾಹಿತಿಗಳು ಜನರಿಗೆ ತಲುಪಬೇಕಾಗಿದೆ. ಆದುದರಿಂದ ಈ ಕೃತಿ, ಹೊಸದಾಗಿ ಬರೆಯಲ್ಪಡಬೇಕಾದ ಅಗತ್ಯವಿದೆ. ಪುರಾಣಿಕ್ ಅವರಿಂದ ಗ್ರಾಹಕ ಓದುಗರು ಇದನ್ನು ನಿರೀಕ್ಷಿಸುತ್ತಿದ್ದಾರೆ ಕೂಡ.
ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ ಶಿವಮೊಗ್ಗ ಈ ಕೃತಿಯನ್ನು ಹೊರತಂದಿದೆ. 160 ಪುಟಗಳ ಈ ಕೃತಿಯ ಮುಖಬೆಲೆ 140 ರೂಪಾಯಿ. ಆಸಕ್ತರು 97315 54955 ದೂರವಾಣಿಯನ್ನು ಸಂಪರ್ಕಿಸಬಹುದು.

Writer - -ಕಾರುಣ್ಯಾ

contributor

Editor - -ಕಾರುಣ್ಯಾ

contributor

Similar News