ಕೆಲಸವಿಲ್ಲದೇ ಅತಂತ್ರರಾದ ಮಲೆನಾಡಿಗರು: ಖಾಸಗಿ ಸಾಲ ಸಂಸ್ಥೆಗಳಿಂದ ಸಾಲ ಮರುಪಾವತಿಗೆ ಕಿರುಕುಳ- ಆರೋಪ

Update: 2019-08-15 18:36 GMT

ಚಿಕ್ಕಮಗಳೂರು, ಆ.15: ಕಳೆದ 10 ದಿನಗಳ ಹಿಂದೆ ಜಿಲ್ಲೆಯ ಮಲೆನಾಡು ವ್ಯಾಪ್ತಿಯ ಐದು ತಾಲೂಕುಗಳಲ್ಲಿ ಸುರಿದ ಅತೀವೃಷ್ಟಿಯಿಂದ ಮಲೆನಾಡಿಗರ ಬದುಕು ಅತಂತ್ರಗೊಂಡಿದೆ. ಹೀಗೆ ಅತಂತ್ರಗೊಂಡಿರುವವರ ಪೈಕಿ ಸಣ್ಣ ರೈತರು, ಕೃಷಿ, ಕೂಲಿ ಕಾರ್ಮಿಕರೇ ಹೆಚ್ಚು ಅತೀವೃಷ್ಟಿಯಿಂದ ನೆಲೆ ಕಳೆದುಕೊಂಡಿದ್ದಾರೆ. ಹೀಗೆ ಅತಂತ್ರರಾಗಿರುವ ಈ ಕಾರ್ಮಿಕರು, ಬಡವರ ಬದುಕಿಗೆ ಅತೀವೃಷ್ಟಿ ಬಾರೀ ಗಾಯವನ್ನುಂಟು ಮಾಡಿದ್ದರೆ, ಎಲ್ಲವನ್ನೂ ಕಳೆದುಕೊಂಡ ದೈನೇಸಿಯಾಗಿರುವವರ ಬಳಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘ ಸೇರಿದಂತೆ ವಿವಿಧ ಖಾಸಗಿ ಗ್ರಾಮೀಣ ಸಂಸ್ಥೆಗಳು ಸಾಲ ವಸೂಲಿಗೆ ಪೀಡಿಸುತ್ತಿರುವುದು ಸಂತ್ರಸ್ತರ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಜಿಲ್ಲೆಯ ಮಲೆನಾಡು ಭಾಗದ ಮೂಡಿಗೆರೆ, ಕೊಪ್ಪ, ನರಸಿಂಹರಾಜಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕಿನ ಮಲೆನಾಡು ಹೋಬಳಿ ವ್ಯಾಪ್ತಿಯಲ್ಲಿ ಅತೀವೃಷ್ಟಿಯಿಂದಾಗಿ ಸಾವಿರಾರು ಕುಟುಂಬಗಳು ನೆಲ ಕಳೆದುಕೊಂಡಿವೆ. ತಲೆ ಮೇಲೊಂದು ಸೂರು ಕಟ್ಟಿಕೊಳ್ಳಲೂ ಜಾಗ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಉಟ್ಟಬಟ್ಟೆಯಲ್ಲೇ ಅತೀವೃಷ್ಟಿ ಬಾಧಿತರು ಗಂಜಿಕೇಂದ್ರಗಳ ಆಶ್ರಯ ಪಡೆದಿದ್ದಾರೆ. ಸಣ್ಣ ರೈತರ ಪೈಕಿ ಕೆಲ ರೈತರು ಸಂಪೂರ್ಣ ಜಮೀನು ಕಳೆದುಕೊಂಡಿದ್ದರೆ, ಇನ್ನು ಕೆಲ ರೈತರ ಹೊಲಗದ್ದೆಗಳು ನದಿಗಳ ಪ್ರವಾಹ, ಭಾರೀ ಮಳೆಗೆ ಸಿಕ್ಕು ಬೆಳೆ ಮಣ್ಣುಪಾಲಾಗಿದೆ.

ಹೀಗೆ ಅತಿವೃಷ್ಟಿಯಿಂದ ನೆಲೆ ಕಳೆದುಕೊಂಡು ಅತಂತ್ರರಾಗಿರುವ ಸಾವಿರಾರು ನಿರಾಶ್ರಿತರ ಪೈಕಿ ಬಹುತೇಕರು ಗ್ರಾಮೀಣ ಭಾಗದ ಕೃಷಿ, ಕೂಲಿ ಕಾರ್ಮಿಕರಾಗಿದ್ದು, ಗಂಜಿ ಕೇಂದ್ರಗಳಲ್ಲಿ ನೆಲ ಕಂಡುಕೊಂಡು ಅಳಿದದ್ದನ್ನು ನೆನೆಯುತ್ತಾ ಕಣ್ಣೀರಿಡುತ್ತಿದ್ದಾರೆ. ಮತ್ತೊಂದೆಡೆ ಭಾರೀ ಮಳೆಯಿಂದಾಗಿ ಹೊಲ, ಗದ್ದೆ, ಕಾಫಿ ತೋಟ, ಗಾರೆ ಕೆಲಸದಂತಹ ಉದ್ಯೋಗಾವಕಾಶಗಳಿಲ್ಲದೇ ಮಲೆನಾಡಿಗರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿರುವ ಸಾವಿರಾರು ಬಡ ಕುಟುಂಬಗಳನ್ನು ಇದೀಗ ಖಾಸಗಿ ಸಾಲದ ಸಂಸ್ಥೆಗಳಯ ಬೆನ್ನು ಬಿಡದಂತೆ ಕಾಡುತ್ತಿದ್ದು, ಸಾಲ ಮರುಪಾವತಿಸುವಂತೆ ಮನೆ ಬಾಗಿಲು, ಗಂಜಿಕೇಂದ್ರಗಳಿಗೂ ಬಂದು ಕಿರುಕುಳ ನೀಡುತ್ತಿದ್ದಾರೆಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ. 

ಮಲೆನಾಡಿನ ಬಹುತೇಕ ಬಡ ವರ್ಗದ ಜನರಿಗೆ ಸಾಲವಿಲ್ಲದ ಬದುಕನ್ನು ಊಹಿಸಲೂ ಅಸಾಧ್ಯವಾಗಿದೆ. ಮನೆ ನಿರ್ಮಾಣ, ಮದುವೆ, ವಾಹನ ಖರೀದಿ, ಕೃಷಿ ಕೆಲಸಗಳನ್ನು ಕೈಗೊಳ್ಳಲು ಈ ವರ್ಗದ ಜನರು ಒಕ್ಕೂಟಗಳನ್ನು ಮಾಡಿಕೊಂಡು ಖಾಸಗಿ ಸಾಲದ ಸಂಸ್ಥೆಗಳು ಮೊರೆ ಹೋಗುವುದು ಮಲೆನಾಡಿನಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲೆಗೆ ಕಾಲಿಟ್ಟಾಗಿನಿಂದ ಈ ಸಂಸ್ಥೆಯಲ್ಲಿ ಸಾಲ ಪಡೆಯದೇ ಇರುವ ಬಡ, ಕಾರ್ಮಿಕ ವರ್ಗದವರೂ ಯಾರೂ ಇಲ್ಲ ಎಂಬಂತಾಗಿದ್ದು, ಈ ಸಂಸ್ಥೆ ಮಲೆನಾಡಿಗರ ಪಾಲಿಗೆ ವರದಾನ ಎಂಬಂತಾಗಿತ್ತು.

ಜಿಲ್ಲೆಯ ಎಲ್ಲ ತಾಲೂಕುಗಳ ಹಳ್ಳಿ ಹಳ್ಳಿಗಳಲ್ಲೂ ಈ ಸಂಸ್ಥೆಯ ಶಾಖೆ ಇದ್ದು ಪ್ರತೀ ಹಳ್ಳಿಗಳ ನಿವಾಸಿಗಳು ಈ ಸಂಸ್ಥೆಯಿಂದ ಲಕ್ಷಗಟ್ಟಲೆ ಸಾಲ ಪಡೆದಿದ್ದಾರೆ. ಧರ್ಮಸ್ಥಳ ಸಂಘ ಮಾತ್ರವಲ್ಲದೇ ಮಲೆನಾಡಿನಲ್ಲಿ ನೂರಾರು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮನೆ ಬಾಗಿಲಿಗೆ ಬಂದು ಬೇಡ ಅಂದರೂ ಸಾಲ ನೀಡುತ್ತಾ ಬಡ್ಡಿ ವಸೂಲಿ ಮಾಡುತ್ತಿವೆ. ಈ ಸಂಸ್ಥೆಗಳಿಂದ ಸಾಲ ಪಡೆದ ಮಲೆನಾಡಿನ ಬಡವರ್ಗದ ಜನರು ವಾರವಿಡಿ ಕೂಲಿ ಕೆಲಸ ಮಾಡಿ ಸಂಘದ ಕಂತುಗಳನ್ನು ಮರುಪಾವತಿ ಮಾಡುತ್ತಿದ್ದರು. ಆದರೀಗ ಅತೀವೃಷ್ಟಿ ಇಡೀ ಮಲೆನಾಡನ್ನು ಕಾಡಿದ್ದು, ಮನೆ, ಮಠ, ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿರುವವರು ಒಂದೆಡೆಯಾದರೇ, ಭಾರೀ ಮಳೆಯಿಂದಾಗಿ ಕಾಫಿ, ಅಡಿಕೆ ತೋಟಗಳಿಗೆ ಹಾನಿ ಸಂಭವಿಸಿ ಕಾರ್ಮಿಕರಿಗೆ ಕೆಲಸ ನೀಡುವವರೇ ಇಲ್ಲ ಎಂಬಂತಾಗಿದೆ. ಕೆಲಸವಿಲದೇ ಹೊಟ್ಟೆ ತುಂಬಿಸಿಕೊಳ್ಳಲು ನ್ಯಾಯಬೆಲೆ ಅಂಗಡಿಗಳ ಅನ್ನಭಾಗ್ಯದ ಅಕ್ಕಿಗೆ ಮೊರೆ ಹೋಗುತ್ತಿರುವ ಮಲೆನಾಡಿನ ಜನರನ್ನು ಇದೀಗ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಸೇರಿದಂತೆ ಸಾಲ ನೀಡುರುವ ಎಲ್ಲ ಸಾಲದ ಸಂಸ್ಥೆಗಳ ಸಿಬ್ಬಂದಿ ಸಾಲಗಾರ ಎಲ್ಲಿದ್ದರೂ ಹುಡುಕಿಕೊಂಡು ಬಂದು ಸಾಲ ಮರುಪಾವತಿ ಮಾಡುವಂತೆ ಒತ್ತಾಯ ಹೇರುತ್ತಿದ್ದಾರೆಂದು ಆರೋಪಿಸಲಾಗುತ್ತಿದೆ.

ಸದ್ಯ ಭಾರೀ ಮಳೆಯಿಂದಾಗಿ ಕೆಲಸ ಇಲ್ಲ. ಕೆಲಸ ಕೇಳಿಕೊಂಡು ಹೋದರೂ ಕೆಲಸ ಸಿಗುತ್ತಿಲ್ಲ. ಕೆಲಸ ನೀಡುತ್ತಿದ್ದ ಮಾಲಕರೇ ಜಮೀನು, ಮನೆ ಕಳೆದುಕೊಂಡು ಕೂತಿದ್ದಾರೆ. ಸಾಲ ವಸೂಲಿ ಮಾಡುವುದನ್ನು ಕನಿಷ್ಠ 2 ತಿಂಗಳಾದರೂ ಮುಂದೂಡಿ, ಬಡ್ಡಿಯನ್ನಾದರೂ ಮನ್ನಾ ಮಾಡಿ ಎಂದು ಸಂಘದ ಸದಸ್ಯರು ಮನವಿ ಮಾಡುತ್ತಿದ್ದಾರೂ ಒಪ್ಪದ ಸಾಲದ ಸಂಸ್ಥೆಗಳು ವಾರದ ಕಂತು, ಬಡ್ಡಿ, ವಿಮೆ, ಪತ್ರಿಕೆಗಳ ಚಂದಾ ಹೆಸರಿನಲ್ಲಿ ಸಾಲಗಾರರನ್ನು ಬೆಂಬಿಡದ ಭೂತಗಳಂತೆ ಕಾಡುತ್ತಿದ್ದಾರೆ. ಇದರಿಂದಾಗಿ ಸಾಲಗಾರರ ಕಾಟ ತಪ್ಪಿಸಿಕೊಳ್ಳಲು ಜನರು ಹಣಕ್ಕಾಗಿ ಅವರಿವರ ಮುಂದೆ ಕೈಚಾಚುತ್ತಾ ಅಂಗಲಾಚುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಕಾರ, ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಸಾಲಗಾರರ ಕಾಟದಿಂದ ತಮ್ಮನ್ನು ಪಾರು ಮಾಡಬೇಕೆಂಬ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಜಿಲ್ಲಾದ್ಯಂತ ಕಾರ್ಯನಿರ್ವಹಿಸುತ್ತಿದೆ. ಲಕ್ಷಾಂತರ ಮಂದಿಗೆ ಸಂಸ್ಥೆ ಸಾಲ ನೀಡುತ್ತ ಅವರ ಆರ್ಥಿಕಾಭಿವೃದ್ಧಿಗೆ ಸಹಕಾರ ನೀಡಿದೆ. ಆದರೆ ಮಲೆನಾಡಿನಲ್ಲಿ ಈ ಬಾರಿ ಅತೀವೃಷ್ಟಿಗೆ ಸಿಲುಕಿ ಬಡವರ್ಗದ ಜನರು ಅತಂತ್ರರಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಸಿಗುತ್ತಿಲ್ಲ. ಆಲೆಕಾನ್ ಹೊರಟ್ಟಿ, ಚೆನ್ನಡ್ಲು, ಕಳಸ, ಮಲೆಮನೆ, ಸುಂಕಸಾಲೆ, ದುರ್ಗದಹಳ್ಳಿ, ಹಿರೇಬೈಲು, ಬಾಳೆಹೊನ್ನೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಜಯಪು, ಮಾಗುಂಡಿಯಂತಹ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಕಟ್ಟಿದ ಮನೆಗಳೇ ನೆಲಕಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಅತಂತ್ರಸ್ಥಿತಿಯಲ್ಲಿರುವ ಮಂದಿ ಸಾಲ ಮರುಪಾವತಿ ಮಾಡುವುದಾದರೂ ಹೇಗೆ, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಮಲೆನಾಡಿನಲ್ಲಿ ಧರ್ಮಸ್ಥಳ ಸಂಘದಿಂದ ಸಾಲ ಪಡೆದವರ ಸಾಲ ಮನ್ನಾ ಮಾಡಬೇಕು. ಇದಾಗದಿದ್ದರೇ ಬಡ್ಡಿ ಮನ್ನಾ ಮಾಡಿ ಸಾಲ ವಸೂಲಾತಿಯನ್ನು ಕನಿಷ್ಠ 2 ತಿಂಗಳಾದರೂ ಮುಂದೂಡಬೇಕು. ಸರಕಾರ ಎಲ್ಲ ಸಾಲದ ಸಂಸ್ಥೆಗಳಿಗೂ ಈ ಸಂಬಂಧ ತಿಳುವಳಿಕೆ ನೀಡಿ ಕಿರುಕುಳ ನೀಡಿ ಸಾಲ ವಸೂಲಾತಿ ಮಾಡುವುದನ್ನು ನಿಯಂತ್ರಿಸಬೇಕು.
- ಸಂದೀಪ್, ಗೋಣಿಬೀಡು ಗ್ರಾಮಸ್ಥರು

ಮಲೆನಾಡಿನಲ್ಲಿ ಭಾರೀ ಮಳೆ ಬಂದರೆ ತಿಂಗಳುಗಟ್ಟಲೆ ಕೆಲಸ ನೀಡುವುದಿಲ್ಲ. ಈ ಬಾರೀ ಭಾರೀ ಮಳೆಗೆ ನನ್ನ ಮನೆಗೆ ಭಾರೀ ಹಾನಿಯಾಗಿದೆ. ಧರ್ಮಸ್ಥಳ ಸಂಘದಿಂದ ಸಾಲ ಪಡೆದು ಕಟ್ಟಿದ ಮನೆಯೇ ಈಗ ನೆಲಸಮವಾಗುವ ಹಂತದಲ್ಲಿದೆ. ಮಳೆಯಿಂದಾಗಿ ಸದ್ಯಕ್ಕೆ ಯಾರೂ ಕೆಲಸ ನೀಡುತ್ತಿಲ್ಲ. ಸಂಘಕ್ಕೆ ಪ್ರತೀ ವಾರ 1000 ರೂ. ಸಾಲ ಕಟ್ಟಬೇಕು. ಇದರೊಂದಿಗೆ ವಿಮೆಯನ್ನೂ ಕಟ್ಟಬೇಕು. ಎಲ್ಲವೂ ಮಣ್ಣು ಪಾಲಾದ ಚಿಂತೆ ಒಂದೆಡೆಯಾದರೆ ಸಾಲ ಕಟ್ಟುವ ಚಿಂತೆ ಬದುಕುವುದೇ ಬೇಡ ಎಂಬ ಭಾವನೆಯನ್ನು ಮೂಡಿಸುತ್ತಿದೆ.

- ರಮೇಶ್, ಧರ್ಮಸ್ಥಳ ಸಂಘದ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News