ಶಿವಪುರ ಧ್ವಜ ಸತ್ಯಾಗ್ರಹ ಹೋರಾಟ ಅವಿಸ್ಮರಣೀಯ: ಮಂಡ್ಯ ಜಿಲ್ಲಾಧಿಕಾರಿ ಡಾ.ವೆಂಕಟೇಶ್

Update: 2019-08-15 18:41 GMT

ಮಂಡ್ಯ, ಆ.15: ದೇಶದ ಸ್ವಾತಂತ್ರ್ಯಕ್ಕಾಗಿ ಮದ್ದೂರಿನ ಶಿವಪುರದಲ್ಲಿ ನಡೆದ ಧ್ವಜಸತ್ಯಾಗ್ರಹ ಹೋರಾಟ ಅವಿಸ್ಮರಣೀಯ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೇಳಿದ್ದಾರೆ.

ನಗರದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ 73ನೇ ಸ್ವಾಂತ್ರಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಹೋರಾಟದಲ್ಲಿ ಭಾಗವಹಿಸಿದ್ದ ಎಚ್.ಕೆ.ವೀರಣ್ಣಗೌಡ, ಟಿ.ಸಿದ್ದಲಿಂಗಯ್ಯ, ಎಚ್.ಸಿ.ದಾಸಪ್ಪ, ಇಂಡುವಾಳು ಹೊನ್ನಯ್ಯ, ಮುಂತಾದವರನ್ನು ಸ್ಮರಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ರಾಜ್ಯದ ಆಲೂರು ವೆಂಕಟರಾವ್, ಬೆಳವಾಡಿ ಮಲ್ಲಮ್ಮ, ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೋಳಿ ರಾಯಣ್ಣ ಹಾಗೂ ಮೈಲಾರ ಮಹದೇವ, ಮೊದಲಾದವರ ತ್ಯಾಗ ಅವಿಸ್ಮರಣೀಯ ಎಂದರು.

ಅನೇಕ ಹಿರಿಯರ ತ್ಯಾಗ, ಬಲಿದಾನದಿಂದ ನಾವು ಸರ್ವ  ಸ್ವತಂತ್ರರಾಗಿದ್ದೇವೆ. ಕೋಟ್ಯಾನುಕೋಟಿ ದೇಶಭಕ್ತರ ಹೋರಾಟದ ಫಲವಾಗಿ ನಾವು ಪಡೆದುಕೊಂಡ ಸ್ವಾತಂತ್ರ್ಯಕ್ಕೀಗ 7 ದಶಕಗಳ ಇತಿಹಾಸ. ಇಷ್ಟೂ ವರ್ಷಗಳಲ್ಲಿ ಭಾರತ ಮತ್ತೆ ಮೈಕೊಡವಿ ಎದ್ದು ನಿಂತು ಜಾಗತಿಕ ನಾಯಕನಾಗುವ ಎಲ್ಲ ಗರಿಮೆ ತೋರಿದೆ ಎಂದು ಅವರು ಹೇಳಿದರು.

ಕೃಷಿ, ಕೈಗಾರಿಕೆ, ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಆರ್ಥಿಕ, ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರಗಲ್ಲಿ ದೇಶ ಅತ್ಯುತ್ತಮ ಸಾಧನೆ ಮಾಡಿದೆ. ಭಾರತ ಇಂದು ಜಾಗತಿಕ ಮಟ್ಟದಲ್ಲಿ ಬಲಾಢ್ಯ ರಾಷ್ಟ್ರವಾಗಲು ಕಾರಣೀಭೂತರಾದವರಿಗೆ ಅಭಿನಂದನೆ ಸಲ್ಲಿಸಬೇಕಿದೆ ಎಂದು ಅವರು ತಿಳಿಸಿದರು.

ಮಂಡ್ಯ ಜಿಲ್ಲೆಗೆ ಅದರದೆ ಆದ ಅಸ್ಮಿತೆಯಿದೆ, ವ್ಯಕ್ತಿತ್ವವಿದೆ, ವೈಶಿಷ್ಟ್ಯವೂ ಇದೆ. ನಾಲ್ವಡಿ ಕೃಷ್ಣರಾಜ ಒಡೆಯರ್, ದಿವಾನ್ ಮಿರ್ಜಾ ಇಸ್ಮಾಯಿಲ್, ಸರ್.ಎಂ.ವಿಶ್ವೇಶ್ವರಯ್ಯ, ಹಲವು ಪ್ರಮುಖರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಕೊಡುಗೆಗಳನ್ನು ನೀಡಿದ್ದಾರೆ ಎಂದು ಅವರು ವಿವರಿಸಿದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ದೇಶದ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳು ಪ್ರಯೋಜನ ಪಡೆದುಕೊಳ್ಳಬೇಕು. ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉದ್ಯೋಗವಕಾಶಗಳ ಕಡೆಗೆ ಗಮನಹರಿಸಬೇಕಾಗಿದೆ ಎಂದು ಅವರು ಹೇಳಿದರು. ಜಲಾಶಯಗಳು ಭರ್ತಿಯಾಗಿದ್ದು, ಹರಿಯುವ ಹೆಚ್ಚಿನ ನೀರನ್ನು ಕೆರೆಗಳಿಗೆ ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಲು ಕ್ರಮ ವಹಿಸಲಾಗುವುದು. ಕೃಷಿ ಚಟುವಟಿಕೆಗಳಿಗೆ ಬಳಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಪೊಲೀಸ್, ಎನ್‍ಸಿಸಿ, ವಿವಿಧ ಶಾಲಾ ವಿದ್ಯಾರ್ಥಿಗಳು ನಡೆಸಿದ ಪಥಸಂಚಲನ, ದೇಶಪ್ರೇಮ ಬಿಂಬಿಸುವ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು, ಕೃಷಿ, ತೋಟಗಾರಿಕೆ, ಇತರ ಇಲಾಖೆಗಳ ಸ್ತಬ್ಧಚಿತ್ರಗಳು ಪ್ರೇಕ್ಷಕರ ಗಮನ ಸೆಳೆದವು. ಶಾಸಕ ಎಂ.ಶ್ರೀನಿವಾಸ್, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮತ್ತಿತರ ಗಣ್ಯರು, ಜನಪ್ರತಿನಿಧಿಗಳು, ಅಧಿಕಾರಿವರ್ಗದವರು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News