ಮನೆಗೆ ನುಗ್ಗಿ ‘ಗ್ರೇಟರ್ ಕಾಶ್ಮೀರ’ ಪತ್ರಕರ್ತನ ಬಂಧನ

Update: 2019-08-16 10:42 GMT

ಶ್ರೀನಗರ, ಆ.16: ‘ಗ್ರೇಟರ್ ಕಾಶ್ಮೀರ್' ಎಂಬ ಸ್ಥಳೀಯ ದೈನಿಕದ ಪತ್ರಕರ್ತ ಇರ್ಫಾನ್ ಅಮೀನ್ ಮಲಿಕ್ ಎಂಬವರನ್ನು  ಪುಲ್ವಾಮದ ಟ್ರಾಲ್ ಪಟ್ಟಣದಲ್ಲಿರುವ ಅವರ ನಿವಾಸದಿಂದ ಬುಧವಾರ ತಡರಾತ್ರಿ ಪೊಲೀಸರು  ಬಂಧಿಸಿದ್ದಾರೆಂದು ಅವರ ಕುಟುಂಬ ತಿಳಿಸಿದೆ.

ಪೊಲೀಸರು ರಾತ್ರಿ ಸುಮಾರು 11 ಗಂಟೆಗೆ ತಮ್ಮ ಮನೆಗೆ ನುಗ್ಗಿ ಯಾರ ಮಾತುಗಳನ್ನೂ ಆಲಿಸದೆ ಇರ್ಫಾನ್ ಅವರನ್ನು ಕರೆದುಕೊಂಡು ಹೋಗಿದ್ದಾಗಿ ಇರ್ಫಾನ್ ತಾಯಿ ಹಸೀನಾ ಜಾನ್ ತಿಳಿಸಿದ್ದಾರೆ.

ಇಪ್ಪತ್ತಾರು ವರ್ಷದ ಮಲಿಕ್ ಕಳೆದ ನಾಲ್ಕು ವರ್ಷಗಳಿಂದ ಗ್ರೇಟರ್ ಕಾಶ್ಮೀರ್ ದೈನಿಕದಲ್ಲಿ ಪತ್ರಕರ್ತರಾಗಿ ದುಡಿಯುತ್ತಿದ್ದಾರೆ. ಅವರನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿರುವ ಪೊಲೀಸ್ ಅಧಿಕಾರಿಗಳು ಕಾರಣ ಮಾತ್ರ ನೀಡಿಲ್ಲ.

ತಮ್ಮ ಪುತ್ರನ ಬಂಧನದ ಬಗ್ಗೆ ಇರ್ಫಾನ್ ಹೆತ್ತವರು ಗುರುವಾರ  ಶ್ರೀನಗರದಲ್ಲಿ ಸರಕಾರ ಸ್ಥಾಪಿಸಿರುವ ಮಾಧ್ಯಮ ಕೇಂದ್ರದಲ್ಲಿ ಪತ್ರಿಕಾ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಗುರುವಾರ ಬೆಳಗ್ಗೆ ತಾವು ಅವಂತಿಪೊರ ಎಸ್‍ಪಿ ತಾಹಿಲ್ ಸಲೀಂ ಅವರನ್ನು ಭೇಟಿಯಾದ ನಂತರ ಪುತ್ರನನ್ನು ಲಾಕ್-ಅಪ್ ನಲ್ಲಿ ಭೇಟಿಯಾಗಲು ಅನುಮತಿಸಲಾಯಿತಾದರೂ ಬಂಧನಕ್ಕೆ ಯಾರೂ ಕಾರಣ ತಿಳಿಸಿಲ್ಲ ಎಂದು ಅವರು ಹೇಳಿದ್ದಾರೆ.

ಆಗಸ್ಟ್ 5ರಂದು ಜಮ್ಮು ಕಾಶ್ಮೀರದಲ್ಲಿ ಸರಕಾರ 370ನೇ ವಿಧಿ ರದ್ದುಗೊಳಿಸಿದ ಕೂಡಲೇ ವಿಧಿಸಿರುವ ಅಭೂತಪೂರ್ವ ನಿರ್ಬಂಧಗಳ ನಂತರ ಹಲವಾರು ರಾಜಕಾರಣಿಗಳನ್ನು ಬಂಧಿಸಲಾಗಿದ್ದರೂ, ಇರ್ಫಾನ್ ಅವರು ರಾಜ್ಯದಲ್ಲಿ ನಿರ್ಬಂಧಗಳ ನಂತರ ಬಂಧನಕ್ಕೊಳಗಾಗಿರುವ ಪ್ರಥಮ ಪತ್ರಕರ್ತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News