ಸಾಲ ಮರುಪಾವತಿಗೆ ನೊಟೀಸ್ ಜಾರಿ ಬಗ್ಗೆ ಸ್ಪಷ್ಟನೆ ನೀಡಿದ ಕೊಡಗು ಡಿಸಿಸಿ ಬ್ಯಾಂಕ್

Update: 2019-08-16 11:22 GMT

ಮಡಿಕೇರಿ, ಆ.16 : ಕೊಡಗು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದರೂ, ಕೊಡಗು ಜಿಲ್ಲಾ ಸಹಕಾರ ಕೇಂದ್ರ (ಡಿಸಿಸಿ) ಬ್ಯಾಂಕ್ ಸಾಲ ವಸೂಲಾತಿಗಾಗಿ ಸಾಲಗಾರರಿಗೆ ಹಾಗೂ ಜಾಮೀನುದಾರರಿಗೆ ನೋಟೀಸ್ ನೀಡುತ್ತಿದೆ ಎಂಬ ಆರೋಪವನ್ನು ಬ್ಯಾಂಕ್‍ನ ಆಡಳಿತ ಮಂಡಳಿ ತಳ್ಳಿಹಾಕಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್‍ನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ (ಬಾಂಡ್) ಅವರು, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ರೈತ ಸ್ನೇಹಿ ಮತ್ತು ಗ್ರಾಹಕ ಸ್ನೇಹಿ ಎಂಬುದನ್ನು ಹಲವಾರು ಬಾರಿ ಸಾಬೀತುಪಡಿಸಿದ್ದು, ಕಳೆದ ಬಾರಿ ಪ್ರಕೃತಿ ವಿಕೋಪ ಸಂಭವಿಸಿದ ಸಂದರ್ಭದಲ್ಲೂ ಅನೇಕ ರೈತ ಕುಟುಂಬಗಳಿಗೆ ಬ್ಯಾಂಕ್ ನೆರವು ನೀಡಿದೆ ಎಂದು ತಿಳಿಸಿದರು. 

ವಾಯಿದೆ ಮೀರಿದ ಸಾಲವನ್ನು ವಸೂಲು ಮಾಡುವುದು ಬ್ಯಾಂಕ್‍ನ ಜವಾಬ್ದಾರಿಯಾಗಿದ್ದು, ಇದಕ್ಕೆಂದೇ ಇರುವ ಕೆಲವು ನಿಯಮಗಳನ್ನು ಪಾಲಿಸದಿದ್ದಲ್ಲಿ ಬ್ಯಾಂಕ್ ನಷ್ಟ ಅನುಭವಿಸಬೇಕಾಗುತ್ತದೆ ಮತ್ತು ಕಾನೂನು ಪ್ರಕ್ರಿಯೆಗಳನ್ನು ನಡೆಸುವುದಕ್ಕೂ ಅಡ್ಡಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಬ್ಯಾಂಕ್‍ನ ವಕೀಲರು ನೋಟೀಸ್ ನೀಡುವುದು ಅನಿವಾರ್ಯವಾಗುತ್ತದೆ ಎಂದೂ ಅವರು ಹೇಳಿದರು.

ಕೃಷಿಯೇತರ ಸಾಲದ ಪೈಕಿ ಬಹುತೇಕ ಪಿಗ್ಮಿ ಆಧಾರಿತ ಓವರ್ ಡ್ರಾಫ್ಟ್ ಸಾಲವಾಗಿದ್ದು, ಇದರಲ್ಲಿ ವಾಯಿದೆ ಮಿರಿದ ಸಾಲದ ಮೊತ್ತವೇ 6.54 ಕೋಟಿ ರೂ.ಗಳಷ್ಟಿದೆ. ಕಳೆದ 5-6 ವರ್ಷಗಳಿಂದ ಸಾಲ ಮರುಪಾವತಿಸದ ಗ್ರಾಹಕರಿಗೆ ಮಾತ್ರ ಬ್ಯಾಂಕ್‍ನಿಂದ ನಿಯಮ ಪ್ರಕಾರವೇ ನೋಟೀಸ್ ಜಾರಿ ಮಾಡಲಾಗಿದ್ದು, ಯಾವುದೇ ಸಂತ್ರಸ್ತ ರೈತರಿಗೆ ನೋಟೀಸ್ ಜಾರಿ ಮಾಡಿಲ್ಲ ಎಂದು ಗಣಪತಿ ಸ್ಪಷ್ಟಪಡಿಸಿದರು.

ಪಿಗ್ಮಿ ಸಂಗ್ರಾಹಕರ ಶಿಫಾರಸ್ಸಿನ ಮೇಲೆ ಓವರ್ ಡ್ರಾಫ್ಟ್ ಸಾಲವನ್ನು ನೀಡಲಾಗುತ್ತಿದ್ದು, ವಾಯಿದೆ ಮೀರಿದ ಪ್ರಕರಣಗಳಲ್ಲಿ ಪಿಗ್ಮಿ ಸಂಗ್ರಾಹಕರ ಮೂಲಕ ಸಾಲ ವಸೂಲಾತಿಗೆ ಒತ್ತಡವನ್ನು ಹೇರುತ್ತಿರುವುದು ಬ್ಯಾಂಕ್‍ನ ಆಂತರಿಕ ವಿಷಯವಾಗಿದ್ದು, ಇದರಿಂದ ಸಾಲಗಾರರ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ ಎಂದರು.

ಒಂದು ವೇಳೆ ಬ್ಯಾಂಕ್‍ನಿಂದ ಸಾಲ ಪಡೆದ ರೈತ ಹಾಲಿ ಪ್ರಕೃತಿ ವಿಕೋಪದಲ್ಲಿ ಅತಿಯಾದ ಸಂಕಷ್ಟವನ್ನು ಎದುರಿಸುತ್ತಿದ್ದು, ಭೂಕುಸಿತ, ಮನೆ, ಮಠ, ಆಸ್ತಿ, ಪಾಸ್ತಿ ಕಳೆದುಕೊಂಡಿದ್ದು, ಬ್ಯಾಂಕ್‍ನ ಸಾಲವನ್ನು ಮರುಪಾವತಿಸಲು ಕಷ್ಟಕರವಾಗಿದ್ದಲ್ಲಿ ಅಂತಹ ನೈಜ ಸಾಲಗಾರರು ನೇರವಾಗಿ ಸಾಲ ಪಡೆದ ಸಂಬಂಧಿಸಿದ ಶಾಖೆಗೆ ದೂರು ನೀಡಲು ಅವಕಾಶವಿದೆ. ಅಲ್ಲದೆ ರೈತರಲ್ಲದವರು ರೈತರ ಹೆಸರಿನಲ್ಲಿ ಬ್ಯಾಂಕ್‍ನ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಬ್ಯಾಂಕ್‍ನ ಹೆಸರಿಗೆ ಧಕ್ಕೆ ಉಂಟುಮಾಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದು ಗಣಪತಿ ಹೇಳಿದರು. 

ಸ್ವಸಹಾಯ ಸಂಘಗಳ ಸಾಲದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಸ್ವಸಹಾಯ ಸಂಘಗಳಿಗೆ ಗರಿಷ್ಠ 5 ಲಕ್ಷದವರೆಗೆ ಶೇ.0 ಬಡ್ಡಿದರದಲ್ಲಿ ಸಾಲ ನೀಡಲು ಅವಕಾಶವಿದ್ದು, ಈ ಸಾಲವನ್ನು ಸ್ವಸಹಾಯ ಸಂಘಗಳು ಪ್ರತೀವಾರದ ಕಂತಿನಂತೆ ಪಾವತಿಸಬೇಕಾಗುತ್ತದೆ. ವಾರದ ಕಂತುಗಳನ್ನು ಪಾವತಿಸಲು ವಿಫಲವಾಗುವ ಸಂಘಗಳಿಗೆ ಶೇ.12ರ ಬಡ್ಡಿ ದರ ಅನ್ವಯವಾಗಲಿದ್ದು, ಇದು ರಿಸರ್ವ್ ಹಾಗೂ ನಬಾರ್ಡ್‍ನ ನಿಯಮಾವಳಿಯಾಗಿದೆ. ಈ ಸಾಲವನ್ನು ವಸೂಲಾತಿ ಮಾಡುವುದನ್ನು ತಡೆಹಿಡಿಯಬೇಕಾದರೆ ಅದಕ್ಕೆ ಸರಕಾರದ ಆದೇಶದ ಅಗತ್ಯವಿದೆ. ಆದುದರಿಂದ ಸ್ವಸಹಾಯ ಸಂಘಗಳು ಸಾಲದ ನಿಯಮಾವಳಿಗೆ ಅನುಗುಣವಾಗಿ ಸಾಲ ಮರುಪಾವತಿಸಿದಲ್ಲಿ ಸ್ವಸಹಾಯ ಸಂಘಗಳಿಗೆ ಲಾಭವೇ ಹೊರತು ಬ್ಯಾಂಕ್‍ಗೆ ಯಾವುದೇ ಲಾಭವಿಲ್ಲ ಎಂದರು.

ಕಳೆದ ಬಾರಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರದೇಶಗಳ ಸಹಕಾರ ಸಂಘಗಳ ಹಂತದಲ್ಲಿನ 1082 ರೈತ ಗ್ರಾಹಕರಿಗೆ ಮತ್ತು ಡಿಸಿಸಿ ಬ್ಯಾಂಕ್‍ನಿಂದ ತಮ್ಮ ಆಸ್ತಿ ಅಡಮಾನದ ಆಧಾರದಲ್ಲಿ ಸಾಲ ಪಡೆದ ಆ ವ್ಯಾಪ್ತಿಯ 113 ಗ್ರಾಹಕರ ಮಧ್ಯಮಾವಧಿ ಕೃಷಿ ಸಾಲದ ಕಂತಿನ 66.42 ಲಕ್ಷ ರೂ. ಗಳನ್ನು ಬ್ಯಾಂಕ್ ಭರಿಸಿದೆ ಎಂದು ಹೇಳಿದರು.

ಜಿಲ್ಲೆಯ ದ್ರವ್ಯ ಸಂಪತ್ತನ್ನು ಜಿಲ್ಲೆಯ ಜನತೆಯ ಶ್ರೇಯೋಭಿವೃದ್ಧಿಗಾಗಿ ವಿನಿಯೋಗಿಸುತ್ತಿರುವ ಎಕೈಕ ಬ್ಯಾಂಕ್ ಇದಾಗಿದ್ದು, ಸಾಲ ಮರುಪಾವತಿಸಲು ಅನಾಸಕ್ತಿ ತೋರುತ್ತಿರುವ ಕೆಲವು ಗ್ರಾಹಕರು ಬ್ಯಾಂಕ್‍ನ ಹೆಸರಿಗೆ ದಕ್ಕೆ ತರುವ ಉದ್ದೇಶದಿಂದ ಬ್ಯಾಂಕ್‍ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಜಿಲ್ಲೆಯ ರೈತರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಾಲ ನೀಡಿಕೆಯಲ್ಲಿ ರೈತರಿಗೇ ಪ್ರಥಮ ಆದ್ಯತೆ ನೀಡುತ್ತಿದೆ. ಅದರಂತೆ ಪ್ರಸಕ್ತ ಸಾಲಿನಲ್ಲಿ ಜೂನ್ ಅಂತ್ಯಕ್ಕೆ 890.28 ಕೋಟಿ ರೂ.ಗಳ ಸಾಲ ಹೊರಬಾಕಿ ನಿಂತಿದ್ದು, ಈ ಪೈಕಿ 24.35 ಕೋಟಿ ಸಾಲ ವಾಯಿದೆ ಮೀರಿದ್ದಾಗಿದೆ. ಇದರಲ್ಲಿ ಕೃಷಿ ಸಾಲದ ಮೊತ್ತ 2.98 ಕೋಟಿ ರೂ.ಗಳಾದರೆ ಕೃಷಿಯೇತರ ಉದ್ದೇಶಿತ ಸಾಲ 21.37 ಕೋಟಿ ರೂ.ಗಳಾಗಿದೆ ಎಂದು ಅವರು ವಿವರಿಸಿದರು.

ಡಿಸಿಸಿ ಬ್ಯಾಂಕ್ ರಿಸರ್ವ್ ಬ್ಯಾಂಕ್, ನಬಾರ್ಡ್ ಹಾಗೂ ಅಪೆಕ್ಸ್ ಬ್ಯಾಂಕ್ ಮಾರ್ಗಸೂಚಿಯಡಿ ಕೆಲಸ ಮಾಡಬೇಕಿದ್ದು, ಈ ಬ್ಯಾಂಕ್‍ಗಳು ಕಾಲಕಾಲಕ್ಕೆ ಹೊರಡಿಸುವ ಆದೇಶಗಳನ್ನು ಪಾಲಿಸಬೇಕಾಗುತ್ತದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಕೃತಿ ವಿಕೋಪದ ಸಂದರ್ಭ ಜಿಲ್ಲಾಧಿಕಾರಿಗಳು ಸಾಲ ವಸೂಲಾತಿ ಪ್ರಕ್ರಿಯೆಯನ್ನು ಆಗಸ್ಟ್ ತಿಂಗಳಿನಿಂದ ಡಿಸೆಂಬರ್ ತಿಂಗಳವರೆಗೆ ಸ್ಥಗಿತಗೊಳಿಸುವಂತೆ ಕೋರಿದ ಮೇರೆಗೆ ಬ್ಯಾಂಕ್ ಯಾವುದೇ ವಸೂಲಾತಿ ಪ್ರಕ್ರಿಯೆ ನಡೆಸಿಲ್ಲ. ಇದರ ಪರಿಣಾಮವಾಗಿ ಬ್ಯಾಂಕ್‍ನ ವಾಯಿದೆ ಮೀರಿದ ಸಾಲದ ಪ್ರಮಾಣ ಹೆಚ್ಚಲು ಕಾರಣವಾಗಿದೆ. ಕೃಷಿಯೇತರ ಸಾಲಗಳು 90ದಿನಕ್ಕಿಂತ ಮೇಲ್ಪಟ್ಟು ವಾಯಿದೆ ಮೀರಿದಲ್ಲಿ ಅದು ಎನ್‍ಪಿಎ ಆಗಲಿದ್ದು, ಈ ಮೊತ್ತ ಅಧಿಕವಾದಲ್ಲಿ ಬ್ಯಾಂಕ್ ಮುಂದಿನ ದಿನಗಳಲ್ಲಿ ಯಾವುದೇ ಬ್ಯಾಂಕ್‍ಗಳಿಂದ ಸಾಲ ಪಡೆಯುವ ಅರ್ಹತೆಯನ್ನು ಕಳೆದುಕೊಳ್ಳುತ್ತದೆ. ಇದರಿಂದಾಗಿ ಜಿಲ್ಲೆಯ ರೈತರಿಗೆ ತೊಂದರೆಯಾಗಲಿದೆ ಎಂದು ಗಣಪತಿ ಹೇಳಿದರು. 

ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‍ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಕನ್ನಂಡ ಸಂಪತ್, ಕಿಮ್ಮುಡಿರ ಜಗದೀಶ್, ಎಸ್.ಬಿ.ಭರತ್‍ ಕುಮಾರ್ ಹಾಗೂ ಪ್ರಬಾರ ವ್ಯವಸ್ಥಾಪಕ ನಿರ್ದೇಶಕ ಎನ್.ಕೆ.ಮೋಹನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News