ಕಲಬುರ್ಗಿ ಹತ್ಯೆ ಪ್ರಕರಣ: 'ದೇವರ ಮೂರ್ತಿ ಮೇಲೆ ಮೂತ್ರ' ಹೇಳಿಕೆಗೆ ಪ್ರತಿಕಾರವಾಗಿ ಕೃತ್ಯ ?

Update: 2019-08-16 12:52 GMT

ಬೆಂಗಳೂರು, ಆ.16: ವಿಚಾರವಾದಿ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲು ಸಿಟ್ ತಯಾರಿ ನಡೆಸಿದೆ. ‘ದೇವರ ಮೂರ್ತಿ ಮೇಲೆ ಮೂತ್ರ’ ಕುರಿತು ಉಲ್ಲೇಖಿಸಿದ ಮಾತಿಗೆ ಪ್ರತೀಕಾರಗಾಗಿ ಕಲಬುರ್ಗಿ ಅವರ ಹಣೆಗೆ ದುಷ್ಕರ್ಮಿಗಳು ಗುಂಡೇಟು ಹೊಡೆದರು ಎನ್ನುವ ಅಂಶ ತನಿಖೆ ವೇಳೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಜ್ಞಾನಪೀಠ ಪುರಸ್ಕೃತ ಯು.ಆರ್.ಅನಂತಮೂರ್ತಿ ಅವರ ಕೃತಿಯಲ್ಲಿ ‘ದೇವರ ಮೂರ್ತಿ ಮೇಲೆ ಮೂತ್ರ ಮಾಡಿದ್ದರೆ, ಏನು ಆಗಲ್ಲ’ ಎನ್ನುವ ಸಾಲುಗಳನ್ನು ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡುವಾಗ ವಿಚಾರವಾದಿ ಡಾ.ಎಂ.ಎಂ. ಕಲಬುರ್ಗಿ ಉಲ್ಲೇಖಿಸಿದ್ದರು. ಬಳಿಕ, ಇದು ವಿವಾದ ಸ್ವರೂಪವನ್ನು ಪಡೆದ ಹಿನ್ನೆಲೆ, ಅವರನ್ನು ಕೊಲೆ ಮಾಡಿರುವುದಾಗಿ ಬಂಧಿತ ಆರೋಪಿಗಳ ಪೈಕಿ ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್ ಬಾಯಿಬಿಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ.

ಹಿಂದೂಗಳಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಸ್ಥಾನಮಾನ ಇದೆ. ಆದರೆ, ಬುದ್ಧಿಜೀವಿಗಳು ದೇವರನ್ನು ಕೀಳಾಗಿ ಬಿಂಬಿಸಿ, ಸಾರ್ವಜನಿಕವಾಗಿಯೇ ಹೇಳಿಕೆಗಳನ್ನು ನೀಡುತ್ತಾರೆ. ಹಾಗಾಗಿಯೇ, ಅವರನ್ನು ಕೊನೆಗೊಳಿಸಲಾಗಿದೆ ಎನ್ನುವ ವಿಚಾರವನ್ನು ಆತ ಬಹಿರಂಗ ಪಡಿಸಿದ್ದಾನೆ ಎಂದು ತಿಳಿದುಬಂದಿದ್ದು, ಇವೆಲ್ಲವೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದ ಮಹಾರಾಷ್ಟ್ರದ ಅಮೋಲ್ ಕಾಳೆ ಎಂಬಾತನೇ ಕಲಬುರ್ಗಿ ಹತ್ಯೆ ಮಾಡಿದ್ದ ತಂಡದ ರೂವಾರಿಯಾಗಿದ್ದು, ಈತ ಪ್ರವೀಣ್ ಮಿಸ್ಕಿನ್, ಅಮಿತ್ ಬುದ್ಧಿ ಜೊತೆ ಸಭೆ ನಡೆಸಿ, ಧರ್ಮ ರಕ್ಷಣೆಗಾಗಿ ಕೊಲೆ ಮಾಡಬೇಕು ಎಂದು ಹೇಳಿಕೊಟ್ಟಿದ್ದ. ತದನಂತರ, ಹಂತ ಹಂತವಾಗಿ, ತರಬೇತಿಗಳನ್ನು ನೀಡುತ್ತಿದ್ದ ಎನ್ನಲಾಗಿದೆ.

ಅಷ್ಟೇ ಅಲ್ಲದೆ, ಪೆಟ್ರೋಲ್ ಬಾಂಬ್ ಎಸೆತ ಪ್ರಕರಣದಲ್ಲಿ ಬಂಧಿತನಾಗಿದ್ದ ಚತುರ್, ಜಾಮೀನು ಪಡೆದುಕೊಂಡಿದ್ದ. ಆತ ಶಿವ ಪ್ರತಿಷ್ಠಾನ ಎನ್ನುವ ಸಂಘಟನೆಯ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿದ್ದ ಮಾಹಿತಿ ಇದ್ದು, ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ್ ಪ್ರಕಾಶ್ ಚತುರ್ ಯಾನೆ ಮಸಾಲವಾಲಾ ಇಬ್ಬರೂ ಬೈಕ್‌ನಲ್ಲಿ ಕಲಬುರ್ಗಿ ಮನೆಗೆ ಹೋಗಿ ಹತ್ಯೆ ಮಾಡಿ ಬಂದಿದ್ದರು ಎಂಬುದು ಸಿಟ್ ತನಿಖೆಯಲ್ಲಿ ದೃಢಪಟ್ಟಿದೆ ಎಂದು ತಿಳಿದುಬಂದಿದೆ.

ಧಾರವಾಡದಲ್ಲಿ ಡಾ.ಎಂ.ಎಂ.ಕಲಬುರ್ಗಿ ಮನೆಯಲ್ಲಿ 2015ರ ಆ.30ರಂದು ಪಿಸ್ತೂಲಿನಿಂದ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಸತತ ನಾಲ್ಕು ವರ್ಷಗಳಿಂದ ಹಂತ ಹಂತವಾಗಿ ತನಿಖೆ ನಡೆಸುತ್ತಿದ್ದು, ಹಲವು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳು

* ಮಹಾರಾಷ್ಟ್ರದ ಅಮೋಲ್ ಕಾಳೆ, ವಾಸುದೇವ್ ಸೂರ್ಯವಂಶಿ

* ಬೆಳಗಾವಿಯ ಪ್ರವೀಣ್, ಪ್ರಕಾಶ್ ಚತುರ್

* ಹುಬ್ಬಳ್ಳಿಯ ಗಣೇಶ್ ಮಿಸ್ಕಿನ್, ಅಮಿತ್ ಬದ್ದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News