ನಾಲ್ಕು ಬಾರಿಯ ಕಮ್ಯುನಿಸ್ಟ್ ಶಾಸಕನಿಗೆ ಈಗ ಎರಡು ಹೊತ್ತಿನ ಊಟಕ್ಕೆ ಗತಿಯಿಲ್ಲ !

Update: 2019-08-16 12:54 GMT
ಫೋಟೊ: thenewindianexpress.com

ಕೋಲ್ಕತಾ, ಆ.16: ಬಂಗಾಳ ವಿಧಾನಸಭೆಗೆ ನಿರಂತರ ನಾಲ್ಕು ಬಾರಿ ಆಯ್ಕೆಯಾಗಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾವೋವಾದಿ)ದ ಮಾಜಿ ಶಾಸಕ ಇಂದು ಎರಡು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ.

ಬಂಗಾಳದಲ್ಲಿ ಬದುಕಿರುವ ಕೆಲವೇ ನೈಜ ಕಮ್ಯುನಿಸ್ಟರಲ್ಲಿ ಓರ್ವರು ಎಂದು ಪರಿಗಣಿಸಲ್ಪಟ್ಟಿರುವ ದಕ್ಷಿಣ 24 ಪರಗನ ಜಿಲ್ಲೆಯ ಬಂಗರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸದ್ಯ ಅನಾರೋಗ್ಯಪೀಡಿತರಾಗಿರುವ ಬಾದಲ್ ಜಮದಾರ್ ಅವರು ಎರಡೊತ್ತಿನ ಊಟಕ್ಕೂ ಇತರರತ್ತ ಕೈಚಾಚುವಂತಾಗಿದೆ ಎಂದು ಅವರ ಪತ್ನಿ ರಿಝಿಯ ದುಃಖ ವ್ಯಕ್ತಪಡಿಸುತ್ತಾರೆ.

2011ರಲ್ಲಿ ಎಡರಂಗದ 34 ವರ್ಷಗಳ ಆಳ್ವಿಕೆಯನ್ನು ಕೊನೆಗಾಣಿಸಿ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಮಯದಲ್ಲೂ ಜಮದಾರ್ ತನ್ನ ಕ್ಷೇತ್ರದಲ್ಲಿ ಜಯಗಳಿಸಿದ್ದರು. ಆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಅವರೂ ಸೇರಿದಂತೆ ಕಮ್ಯುನಿಸ್ಟ್ ಪಕ್ಷದ ಅನೇಕ ಘಟಾನುಘಟಿಗಳು ಸೋಲನುಭವಿಸಿದ್ದರು. 2016ರಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಜಮದಾರ್ ಚುನಾವಣೆಯಗೆ ಸ್ಪರ್ಧಿಸಿರಲಿಲ್ಲ. ಇಷ್ಟರವರೆಗೂ ಪಕ್ಷದ ಯಾವೊಬ್ಬ ನಾಯಕ ಕೂಡಾ ಜಮದಾರ್ ಅವರನ್ನು ಭೇಟಿಯಾಗಿಲ್ಲ. ಅವರ ಮನೆಯೂ ಸದ್ಯ ಕುಸಿಯುವ ಹಂತದಲ್ಲಿದೆ ಎಂದು ಮಾಜಿ ಶಾಸಕರ ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಜಮದಾರ್ ಅವರನ್ನು ಜಾತಿ, ಧರ್ಮ ಅಥವಾ ಪಕ್ಷಾತೀತವಾಗಿ ಎಲ್ಲರೂ ಸಮಾನವಾಗಿ ಗೌರವಿಸುತ್ತಾರೆ. ಅವರು ಸಚಿವ ಸಂಪುಟಲ್ಲಿ ಸ್ಥಾನ ಪಡೆದಿದ್ದರೂ ತನ್ನ ಬಟ್ಟೆಗಳನ್ನು ತಾವೇ ಒಗೆಯುತ್ತಿದ್ದರು. ಜನರ ರಾಜಕೀಯ ಹಿನ್ನೆಲೆ ನೋಡದೆ ಅವರು ಬಡವರಿಗೆ ನೆರವು ನೀಡುತ್ತಿದ್ದರು. ಅವರು ಸ್ಥಳೀಯ ಅಂಚೆ ಕಚೇರಿ ಮತ್ತು ಬ್ಯಾಂಕ್‌ಗಳಲ್ಲಿ ಜನಸಾಮಾನ್ಯರೊಡನೆ ಸರತಿಯಲ್ಲಿ ನಿಂತಿರುವುದನ್ನು ನಾನು ಕಂಡಿದ್ದೇನೆ ಎಂದು ಜಮದಾರ್ ಮನೆ ಸಮೀಪದ ನಿವಾಸಿಯೂ ಆಗಿರುವ ತೃಣಮೂಲ ಕಾಂಗ್ರೆಸ್‌ನ ಯುವ ನಾಯಕರೊಬ್ಬರು ತಿಳಿಸಿದ್ದಾರೆ.

ಸದ್ಯ ಜಮದಾರ್ ಅವರಿಗೆ ಮಾಸಿಕ 9,500ರೂ. ಪಿಂಚಣಿ ಲಭಿಸುತ್ತಿದ್ದು ಆ ಸಂಪೂರ್ಣ ಮೊತ್ತ ಅವರ ಔಷಧಿಗೆ ವೆಚ್ಚವಾಗುತ್ತದೆ. ಹಾಗಾಗಿ ನಾವು ಎರಡು ಹೊತ್ತಿನ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ನಮ್ಮನ್ನು ಭೇಟಿಯಾಗಲೂ ಈವರೆಗೂ ಪಕ್ಷದ ಯಾರೊಬ್ಬನೂ ಬಂದಿಲ್ಲ ಎಂದು ರಿಝಿಯ ದುಃಖ ತೋಡಿಕೊಳ್ಳುತ್ತಾರೆ.

ಜಮದಾರ್ ಅವರ ಓರ್ವ ಪುತ್ರ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಜಮದಾರ್ ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಅಲ್ಲಿ 1.5 ಲಕ್ಷ ರೂ. ಬಿಲ್ ಪಡೆದ ಕುಟುಂಬಸ್ಥರು ಆ ಮೊತ್ತವನ್ನು ಪಾವತಿಸಲು ಸಾಧ್ಯವಾಗದೆ ತಮ್ಮ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡಿದ್ದರು ಮತ್ತು ಜಮದಾರ್ ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News