ಕೇಂದ್ರ ಸರಕಾರದಿಂದ ನಮ್ಮ ಫೋನ್ ಕದ್ದಾಲಿಕೆ ನಡೆಯುತ್ತಿದೆ: ದಿನೇಶ್ ಗುಂಡೂರಾವ್

Update: 2019-08-16 13:30 GMT

ಬೆಂಗಳೂರು, ಆ.16: ಕೇಂದ್ರ ಸರಕಾರದಿಂದ ಇಂದಿಗೂ ನಮ್ಮ ಫೋನ್ ಕರೆಗಳ ಕದ್ದಾಲಿಕೆ ನಡೆಯುತ್ತಿದೆ. ನಮ್ಮ ವಿರುದ್ಧ ಬಿಜೆಪಿಯವರು ಆರೋಪ ಮಾಡುವ ಬದಲು ಕೇಂದ್ರ ಹಾಗೂ ರಾಜ್ಯದಲ್ಲಿ ಅವರದೇ ಸರಕಾರವಿದೆ ತನಿಖೆ ಮಾಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸವಾಲು ಹಾಕಿದರು.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯೂ ಫೋನ್ ಕರೆಗಳ ಕದ್ದಾಲಿಕೆ ನಡೆದಿದೆ. ಕಾನೂನು ಬಾಹಿರವಾಗಿ ಯಾರಾದರೂ ಫೋನ್ ಕರೆಗಳನ್ನು ಕದ್ದಾಲಿಕೆ ಮಾಡಿದ್ದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದರು.

ಕೃಷಿ ಸಮ್ಮಾನ್ ಯೋಜನೆಗಾಗಿ ಅನ್ನಭಾಗ್ಯ ಯೋಜನೆಯ ಅನುದಾನವನ್ನು ಕಡಿತ ಮಾಡುವುದು ಸರಿಯಲ್ಲ. ನಮ್ಮ ಸರಕಾರದ ಅವಧಿಯಲ್ಲಿ ಜನಪರವಾದ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿತ್ತು. ಬಡವರ ಯೋಜನೆಗೆ ಕತ್ತರಿ ಹಾಕುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ರಾಜ್ಯ ಸರಕಾರ ಇದಕ್ಕೆ ಮುಂದಾಗಬಾರದು ಎಂದು ದಿನೇಶ್ ಗುಂಡೂರಾವ್ ಆಗ್ರಹಿಸಿದರು.

ರಾಜ್ಯದಲ್ಲಿ ಶೇ.50ರಷ್ಟು ತಾಲೂಕುಗಳು ಬರಪೀಡಿತವಾಗಿವೆ. ಅನ್ನಭಾಗ್ಯ ಯೋಜನೆಗಳು ಬಡ ಕುಟುಂಬಗಳ ಜೀವನಕ್ಕೆ ಆಧಾರವಾಗಿದೆ. ಅನ್ನಭಾಗ್ಯ ಯೋಜನೆಯನ್ನು ರದ್ದುಪಡಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ರದ್ದುಪಡಿಸಿದರೆ, ಬಿಜೆಪಿ ಜನವಿರೋಧಿ ಎಂಬುದು ಸಾಬೀತಾಗುತ್ತದೆ. ಅಗತ್ಯವಿದ್ದರೆ ಕೇಂದ್ರ ಸರಕಾರದಿಂದ ಹೆಚ್ಚುವರಿ ಅನುದಾನ ತರಿಸಿಕೊಂಡು, ಈ ಯೋಜನೆಗಳನ್ನು ಯಥಾವತ್ತಾಗಿ ಮುಂದುವರೆಸಬೇಕು ಎಂದು ದಿನೇಶ್ ಗುಂಡೂರಾವ್ ಒತ್ತಾಯಿಸಿದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಗೂ ಈ ಹಿಂದಿನ ಸಮ್ಮಿಶ್ರ ಸರಕಾರ ಜಾರಿಗೆ ತಂದಿರುವ ಯೋಜನೆಗಳಿಗೆ ಕತ್ತರಿ ಹಾಕಲು ಮುಂದಾದರೆ ನಾವು ಸುಮ್ಮನೆ ಇರುವುದಿಲ್ಲ. ಸಿದ್ದರಾಮಯ್ಯ ಜಾರಿಗೆ ತಂದ ಯೋಜನೆಗಳು ಎಲ್ಲರಿಗೂ ಅನುಕೂಲವಾಗಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಇಂತಹ ಸಂದರ್ಭಗಳು ಬಂದಾಗ ಯಶಸ್ವಿಯಾಗಿ ಹಣ ಹೊಂದಾಣಿಕೆ ಮಾಡಿದ್ದಾರೆ. ಈಗಲೂ ಮುಖ್ಯಮಂತ್ರಿ ಯಡಿಯೂರಪ್ಪ ಅದನ್ನು ಮಾಡಲಿ. ನೆರೆ, ಬರ ಎಂದು ನೆಪ ಹೇಳಿಕೊಂಡು ಜನಪರವಾದ ಯೋಜನೆಗಳನ್ನು ಕಡಿತಗೊಳಿಸುವುದು ಬೇಡ. ಒಂದು ವೇಳೆ ಯೋಜನೆಗಳಿಗೆ ಕಡಿತ ಹಾಕಿದರೆ ನಾವು ಸರಕಾರದ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಪ್ರಧಾನಿ ನರೇಂದ್ರಮೋದಿ ಸರ್ವಾಧಿಕಾರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ರಾಜ್ಯದ ನೆರೆ ಪರಿಸ್ಥಿತಿಗೆ ಹೆಚ್ಚಿನ ಅನುದಾನ ಕೇಳಬೇಡ, ಇಂತಿಷ್ಟು ಕೊಡುತ್ತೇನೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪಗೆ ಹೇಳಿರಬೇಕು. ಆದುದರಿಂದಲೇ, ಅವರು ಹೆದರಿಕೊಂಡಿದ್ದಾರೆ ಎಂದು ದಿನೇಶ್‌ಗುಂಡೂರಾವ್ ಹೇಳಿದರು.

ಯಡಿಯೂರಪ್ಪ ಒಬ್ಬರೇ ತಿರುಗಾಡಿ ಎಲ್ಲವೂ ಸರಿ ಮಾಡುತ್ತೇನೆ ಎಂದರೆ ಸಾಧ್ಯವಾಗುವುದಿಲ್ಲ. ಸಂಪುಟವಿಲ್ಲದೆ ಆಡಳಿತ ನಡೆಸಿದ್ದು ಇದೇ ಮೊದಲು. 30 ವರ್ಷದಲ್ಲಿ ದಾಖಲೆ ನಿರ್ಮಿಸಿದ್ದೀರಾ. ಇದೀಗ ದಿಲ್ಲಿಗೆ ಹೋಗಿ ಪ್ರಧಾನಿ ಭೇಟಿಯಾಗಿದ್ದೀರಾ. ಆದರೆ, ಈವರೆಗೆ ಪರಿಹಾರದ ಬಗ್ಗೆ ನಿಮ್ಮ ಕಚೇರಿಯಿಂದ ಒಂದು ಮಾಹಿತಿಯೂ ಹೊರಬಿದ್ದಿಲ್ಲ ಎಂದು ಅವರು ಹೇಳಿದರು.

ಪ್ರಧಾನಿಯನ್ನು ಭೇಟಿಯಾದರೆ ಸಾಲದು, ಹೆಚ್ಚಿನ ಅನುದಾನವನ್ನು ತರುವ ಕೆಲಸ ಮಾಡಿ. ಪ್ರಧಾನಿಯನ್ನು ರಾಜ್ಯಕ್ಕೆ ಕರೆ ತಂದು ಪ್ರವಾಹ ಪೀಡಿತ ಸ್ಥಳಗಳ ಸಮೀಕ್ಷೆ ಮಾಡಿಸಿ. ರಾಜ್ಯದ ಬಗ್ಗೆ ಕೇಂದ್ರ ಸರಕಾರ ಮಲತಾಯಿ ಧೋರಣೆ ಅನುಸರಿಸುವುದು ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News