ಯುವಕನ ಹತ್ಯೆ ಪ್ರಕರಣ: ಏಳು ಆರೋಪಿಗಳ ಬಂಧನ

Update: 2019-08-16 13:39 GMT

ಮಂಡ್ಯ, ಆ.16: ಮಳವಳ್ಳಿ ತಾಲೂಕಿನ ಹಲಗೂರಿನ ಪ್ರಾವಿಷನ್ ಸ್ಟೋರ್ ನಲ್ಲಿ ಹಾಡಹಗಲೇ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಏಳು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಹಲಗೂರು ಆಚಾರ ಬೀದಿಯ ಆರ್.ಪ್ರಮೋದ್(20), ಇಂದಿರಾ ಕಾಲನಿಯ ಜನಾರ್ಧನ ಅಲಿಯಾಸ್ ಜಾನು (20), ಮುಸ್ಲಿಂ ಬ್ಲಾಕ್ ನಿವಾಸಿ ಖಾಲಿದ್ ಅಹಮ್ಮದ್ (21), ಕನಕಪುರ ಕುವೆಂಪು ನಗರದ ರಾಹುಲ್ ನಾಯಕ (21), ಮೇಗಲ ಬೀದಿಯ ಸುಹಾಸ್ (20), ಮಳವಳ್ಳಿ ತಾಲೂಕಿನ ಹೊಸಪುರ ಗ್ರಾಮದ ಜೆ.ದರ್ಶನ್ (20) ಹಾಗು ಬಾಳೆಹೊನ್ನಿಗ ಗ್ರಾಮದ ಮುತ್ತುರಾಜ್ ಅಲಿಯಾಸ್ ಡಕಾಯಿತ (21) ಬಂಧಿತರು. 

ಹಲಗೂರಿನ ಬಿ.ಕೆ.ಪ್ರಾವಿಷನ್ ಸ್ಟೋರ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕಾಳೇಗೌಡನದೊಡ್ಡಿ ಗ್ರಾಮದ ಚಿಕ್ಕದ್ಯಾವಯ್ಯ ಎಂಬವರ ಮಗ ರಾಮು ಎಂಬಾತನನ್ನು ಆ.7ರ ಬೆಳಗ್ಗೆ 10.20ರ ಸಮಯದಲ್ಲಿ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿ ಪರಾರಿಯಾಗಿದ್ದರು.

ದೊಡ್ಡ ರೌಡಿಗಳೆಂದು ಬಿಂಬಿಸಿಕೊಳ್ಳಲು ಹಾಡಹಗಲೇ ಕೊಲೆ ಮಾಡಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಕೀರ್ತಿ, ಪ್ರಮೋದ, ಜೆ.ದರ್ಶನ, ರಾಹುಲ್ ನಾಯಕ ಎಂಬುವರ ಮೇಲೆ ಹಲವು ಪ್ರಕರಣ ದಾಖಲಾಗಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಘಟನೆಯನ್ನು ಸ್ಥಳೀಯರು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು, ಆರೋಪಿಗಳನ್ನು ಬಂಧಿಸಲು ಸಹಕಾರಿಯಾಯಿತು. ವೀಡಿಯೋ ಮಾಡಿದರವರಿಗೆ ರಕ್ಷಣೆ ಒದಗಿಸಲಾಗುವುದು ಎಂದು ಅವರು ಹೇಳಿದರು.

ಪ್ರಭಾರ ಎಎಸ್ಪಿ ಎಸ್.ಇ.ಗಂಗಾಧರಸ್ವಾಮಿ, ಮಳವಳ್ಳಿ ಡಿವೈಎಸ್ಪಿ ಶೈಲೇಂದ್ರ ಮಾರ್ಗದರ್ಶನದಲ್ಲಿ ಪಿಐ ಕೆ.ಎಂ.ದೊಡ್ಡಿ  ಸಿಪಿಐ ಎಂ.ಮಂಜುನಾಥ್, ಹಲಗೂರು ಪಿಎಸ್‍ಐ ಬಿ.ಎಸ್.ಶಿವರುದ್ರ ನೇತೃತ್ವದಲ್ಲಿ ತಂಡ ಚನ್ನಪಟ್ಟಣ ಸಾರಿಗೆ ಬಸ್ ನಿಲ್ದಾಣದಲ್ಲಿ ಆರೋಪಿಗಳನ್ನು ಬಂಧಿಸಿದರು ಎಂದರು.
ಡಿವೈಎಸ್ಪಿ ಶೈಲೇಂದ್ರ ಹಾಗು ಸಿಪಿಐ ಎಂ.ಮಂಜುನಾಥ್  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News