ಶಿವಮೊಗ್ಗ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಗಳ ಜೀವಕ್ಕೆ ಗ್ಯಾರಂಟಿಯಿಲ್ಲ: ಶಾಸಕ ಅಶೋಕನಾಯ್ಕ್

Update: 2019-08-16 17:31 GMT

ಶಿವಮೊಗ್ಗ, ಆ. 17: ರಾಜ್ಯದ ಅತೀ ದೊಡ್ಡ ಸರ್ಕಾರಿ ಆಸ್ಪತ್ರೆಗಳಲ್ಲೊಂದಾದ, ಶಿವಮೊಗ್ಗದ ಮೆಗ್ಗಾನ್ ಅವ್ಯವಸ್ಥೆ ಸದ್ಯಕ್ಕೆ ಪರಿಹಾರವಾಗುವ ಲಕ್ಷಣಗಳು ಗೋಚರವಾಗುತ್ತಿಲ್ಲ. 'ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗುವ ರೋಗಿಗಳು ಬದುಕುಳಿಯುವ ಖಾತ್ರಿಯಿಲ್ಲದಂತಹ ಸ್ಥಿತಿಯಿದೆ' ಎಂದು ಶಾಸಕ ಕೆ.ಬಿ.ಅಶೋಕನಾಯ್ಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಶುಕ್ರವಾರ ನಗರದ ತಾಲೂಕು ಪಂಚಾಯತ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮೆಗ್ಗಾನ್ ಆಸ್ಪತ್ರೆಯು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಬಡ ರೋಗಿಗಳ ಪಾಲಿಗೆ ನರಕವಾಗಿ ಪರಿಣಮಿಸಿದೆ. ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲ. ಅದೆಷ್ಟೋ ರೋಗಿಗಳು ಇಲ್ಲಿನ ಅವ್ಯವಸ್ಥೆ ಗಮನಿಸಿ, ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆಪಡೆಯುತ್ತಿದ್ದಾರೆ. ಮತ್ತೆ ಕೆಲವರು ದೂರದ ಮಣಿಪಾಲ್, ಮಂಗಳೂರಿನ ವೆನ್ಲಾಕ್‍ಗೆ ತೆರಳುವಂತಾಗಿದೆ ಎಂದು ದೂರಿದ್ದಾರೆ. 

ಮೆಗ್ಗಾನ್‍ಗೆ ಚಿಕಿತ್ಸೆಗೆಂದು ದಾಖಲಾದವರ ಜೀವ ಉಳಿಯುವುದೇ ಕಷ್ಟ ಎಂಬಂತಹ ಗಂಭೀರ ಸ್ಥಿತಿಯಿದೆ. ಇತ್ತೀಚೆಗೆ ಮಹಿಳೆಯೋರ್ವರ ಸಾವು ಸಾಕ್ಷಿಯಾಗಿದೆ. ಹೊಳೆಹೊನ್ನೂರಿನ ನಿವಾಸಿ ಶಾಂತಮ್ಮ ಎಂಬ ಮಹಿಳೆಯು ಗುದದ್ವಾರದ ಬಳಿಯಿದ್ದ ಗೆಡ್ಡೆಯ ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಆಸ್ಪತ್ರೆಯ ವೈದ್ಯರೋರ್ವರು ಸಮರ್ಪಕ ಚಿಕಿತ್ಸೆ, ನಿರ್ಲಕ್ಷ್ಯದಿಂದ ಅವರ ಸ್ಥಿತಿ ಗಂಭೀರ ಹಂತಕ್ಕೆ ತಲುಪಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲ್‍ಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು ಎಂದು ಆರೋಪಿಸಿದ್ದಾರೆ. 

ಆಸ್ಪತ್ರೆಯಲ್ಲಿ ಔಷಧಿಗಳು ಸಮರ್ಪಕವಾಗಿ ದೊರಕುತ್ತಿಲ್ಲ. ರೋಗಿಗಳ ಅಹವಾಲು ಕೇಳುವವರೇ ಯಾರೂ ಇಲ್ಲದಂತಹ ಸ್ಥಿತಿಯಿದೆ. ಈಗಾಗಲೇ ತಾವು ಆಸ್ಪತ್ರೆಯ ನಿರ್ದೇಶಕರ ಜೊತೆ ಚರ್ಚಿಸಿದ್ದೆನೆ. ಆದರೆ ಯಾವುದೇ ಸುಧಾರಣೆಯಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಆಸ್ಪತ್ರೆಗೆ ಕೋಟಿ ಕೋಟಿ ರೂ. ಅನುದಾನ ಬರುತ್ತದೆ. ಸರ್ಕಾರಿ ಮೆಡಿಕಲ್ ಕಾಲೇಜು ಬೋಧನಾ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿದೆ. ಇಂತಹ ಸನ್ನಿವೇಶದಲ್ಲಿ ಬಡ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರಕುತ್ತಿಲ್ಲವೆಂದರೇ ನಿಜಕ್ಕೂ ಶೋಚನೀಯ ಸಂಗತಿಯಾಗಿದೆ ಎಂದು ತಿಳಿಸಿದರು. 

ಆಸ್ಪತ್ರೆಯಲ್ಲಿ ಕೆಲ ವೈದ್ಯ, ಸಿಬ್ಬಂದಿಗಳು ಹಲವು ದಶಕಗಳಿಂದ ಬೀಡುಬಿಟ್ಟಿದ್ದಾರೆ. ಪ್ರಭಾವಿಗಳ ಬೆಂಬಲವಿರುವ ಕೆಲವರು ಇಡೀ ಆಸ್ಪತ್ರೆಯ ಆಡಳಿತವನ್ನೇ ಹೈಜಾಕ್ ಮಾಡಿದ್ದಾರೆ. ಇದರಿಂದ ಆಸ್ಪತ್ರೆಯಲ್ಲಿ ಯಾವುದೇ ಬದಲಾವಣೆ, ಸುಧಾರಣೆ ಕಂಡುಬರುತ್ತಿಲ್ಲ ಎಂದು ಹೇಳಿದರು. 

ಇಷ್ಟರಲ್ಲಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಜೊತೆಗೆ ಆಸ್ಪತ್ರೆಯ ಸರ್ವಾಂಗೀಣ ಸುಧಾರಣೆಗೆ ಕ್ರಮಕೈಗೊಳ್ಳುವಂತೆಯೂ ಕೋರಿಕೊಳ್ಳುತ್ತೆನೆ ಎಂದು ಶಾಸಕ ಕೆ.ಬಿ.ಅಶೋಕನಾಯ್ಕ್ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News