ಪೋನ್ ಕದ್ದಾಲಿಕೆ ಆರೋಪ ಸತ್ಯಕ್ಕೆ ದೂರ: ವಿಧಾನಪರಿಷತ್ ಸದಸ್ಯ ಶರವಣ

Update: 2019-08-16 18:25 GMT

ದಾವಣಗೆರೆ, ಆ.16: ಪೋನ್ ಕದ್ದಾಲಿಕೆ ಮಾಡಿ ಸರ್ಕಾರ ಉಳಿಸಿಕೊಳ್ಳುವ ಅಗತ್ಯತೆ ನಮಗೆ ಇರಲಿಲ್ಲ, ಬಿಜೆಪಿ ಶಾಸಕರನ್ನು ಖರೀದಿ ಮಾಡಿದರೆ ಸಾಕಿತ್ತು. ಆದರೆ ಇಂತಹ ಹೀನ ಕೃತ್ಯಕ್ಕೆ ನಾವು ಇಳಿಯಲಿಲ್ಲ ಎಂದು ವಿಧಾನಪರಿಷತ್ ಸದಸ್ಯ ಶರವಣ ಹೇಳಿದ್ದಾರೆ. 

ನಗರದ ಸರ್ಕ್ಯೂಟ್ ಹೌಸ್ ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋನ್ ಕದ್ದಾಲಿಕೆ ಆರೋಪ ಸುಳ್ಳು. ನಮಗೆ ಅದರ ಅಗತ್ಯ ಇರಲಿಲ್ಲ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಿ 25 ದಿನವಾಗಿದೆ. ಇಲ್ಲಿಯವರೆಗೂ ಕ್ಯಾಬಿನೆಟ್ ರಚನೆಯಾಗಿಲ್ಲ, ಉತ್ತರ ಕರ್ನಾಟಕದ ಮಂದಿ ನೆರೆಯಿಂದ ತತ್ತರಿಸಿದ್ದಾರೆ. ಪ್ರಧಾನಿ ಮೋದಿಯವರು ಮಾತ್ರ ಈ ಬಗ್ಗೆ ಚಕಾರವೆತ್ತುತ್ತಿಲ್ಲ, ಕೇಂದ್ರ ಸರ್ಕಾರದಿಂದ ಬಿಡಿಗಾಸು ಹಣ ಬಿಡುಗಡೆಯಾಗಿಲ್ಲ ಎಂದು ಕಿಡಿಕಾರಿದರು. 

ಪರಿಹಾರ ನೀಡಲು ನೋಟ್ ಪ್ರಿಂಟ್ ಮಾಡುತ್ತಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿರುವುದು ದುರಂತ. ಸಂಸದರ ಕಿವಿಹಿಂಡಿ ಪರಿಹಾರ ತರಬೇಕು. ನೆರೆಹಾವಳಿಗೆ ತುತ್ತಾದ ಗ್ರಾಮಗಳಿಗೆ ಹತ್ತು ಕೋಟಿ ರೂ. ಕೊಟ್ಟರೆ ಅವರ ಹೆಸರನ್ನು ಆ ಗ್ರಾಮಕ್ಕೆ ನಾಮಕರಣ ಮಾಡಲಾಗುವುದು ಎಂದು ಸರ್ಕಾರ ಹೇಳಿದೆ. ಆದರೆ ಪ್ರತಿಯೊಂದು ಹಳ್ಳಿಗಳಿಗೂ ಅದರದ್ದೇ ಆದ ಪರಂಪರೆ ಇದೆ. ಹಣ ಕೊಟ್ಟ ಕೂಡಲೇ ಅವರ ಹೆಸರಿಡುವುದು ಸರಿಯಾದ ಕ್ರಮವಲ್ಲ, ಪರಂಪರೆಗಳನ್ನು ಮಾರಾಟ ಮಾಡಿ ತುಘಲಕ್ ದರ್ಬಾರ್ ಮಾಡಲು ಸರ್ಕಾರ ಹೊರಟಿದೆ ಎಂದು ಆರೋಪಿಸಿದರು. 

ನೆರವು ನೀಡಲು ನಾವು ಸಿದ್ದರಿದ್ದೇವೆ. ಆದರೆ ಈ ರೀತಿಯ ಕ್ರಮವನ್ನು ಸರ್ಕಾರ ಕೈಬಿಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News