ನಮ್ಮ ಸರಕಾರದ ಜನಪರ ಯೋಜನೆಗೆ ಕತ್ತರಿ ಹಾಕಿದರೆ ಹುಷಾರ್: ರಾಜ್ಯ ಸರಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

Update: 2019-08-17 13:01 GMT

ಬೆಂಗಳೂರು, ಆ. 17: ‘ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಸೇರಿ ನಮ್ಮ ಅವಧಿಯಲ್ಲಿ ಜಾರಿಗೆ ತಂದಿದ್ದ ಯೋಜನೆಗಳಿಗೆ ಅನುದಾನ ಕಡಿತ ಮಾಡಿದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ಹುಷಾರ್.’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ತನ್ನ ಕಾವೇರಿ ನಿವಾಸದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯ 7ಕೆ.ಜಿ. ಅಕ್ಕಿಯಲ್ಲಿ ಕಡಿತ ಮಾಡಿದರೆ ಸರಕಾರ ಬಡವರ ಹೊಟ್ಟೆ ಮೇಲೆ ಹೊಡೆದಂತಾಗುತ್ತದೆ. ಸಿಎಂ ಯಡಿಯೂರಪ್ಪ ವಿರುದ್ಧ ಸದನದ ಹೊರಗೆ ಮತ್ತು ಒಳಗೆ ಪ್ರತಿಭಟನೆ ನಡೆಸಲಾಗುವುದು ಎಂದರು.

ನಮ್ಮ ಸರಕಾರ ಬಿಪಿಎಲ್ ಕಾರ್ಡುದಾರರಿಗೆ 4 ಕೋಟಿ ಜನರಿಗೆ ತಲಾ 7 ಕೆಜಿ ಅಕ್ಕಿಯನ್ನ ಉಚಿತವಾಗಿ ನೀಡುತ್ತಿತ್ತು. ಬಿಜೆಪಿ ಸರಕಾರ ಅನ್ನಭಾಗ್ಯ ಅಕ್ಕಿ ಕಡಿಮೆ ಮಾಡಲು ಮುಂದಾಗಿದೆ ಎಂಬ ಮಾಹಿತಿ ಬಂದಿದೆ. ಕಡಿತ ಮಾಡಿದ ಅಕ್ಕಿ ಹಣವನ್ನ ಕಿಸಾನ್ ಸಮ್ಮಾನ್ ಯೋಜನೆಗೆ ಬಳಸಿಕೊಳ್ಳಲು ಹೊರಟಿದೆ. ಈ ಯೋಜನೆಯಲ್ಲಿ ರೈತರಿಗೆ 4 ಸಾವಿರ ರೂ. ನೀಡಲು ನಮ್ಮದೇನು ಅಭ್ಯಂತರವಿಲ್ಲ. ಆದರೆ, ಬಡವರ ಅಕ್ಕಿ ಕಡಿತ ಮಾಡಿ ಹಣ ನೀಡುತ್ತೇವೆ ಎನ್ನುವುದು ಬಡವರ ವಿರೋಧಿ ಧೋರಣೆ ಎಂದು ಟೀಕಿಸಿದರು.

ಅನ್ನಭಾಗ್ಯ ಅಕ್ಕಿ ಕಡಿತ ಮಾಡುವ ಯೋಚನೆ ಸರಕಾರದ ಮುಂದೆ ಇದ್ದರೆ ಅದನ್ನ ಕೂಡಲೇ ಕೈ ಬಿಡಬೇಕು. ಅನ್ನಭಾಗ್ಯ ಯೋಜನೆ ಜಾರಿಗೆ ಬಂದ ಮೇಲೆ ‘ಗುಳೆ ಪದ್ಧತಿ’ ಕಡಿಮೆ ಆಗಿದೆ. ಬಡವರು ಎರಡು ಹೊತ್ತು ಊಟ ಮಾಡುತ್ತಿದ್ದಾರೆ. ಇದು ಇಡೀ ದೇಶದಲ್ಲಿ ಮೆಚ್ಚುಗೆ ಪಡೆದಿರುವ ಕಾರ್ಯಕ್ರಮ ಎಂದು ಹೇಳಿದರು.

ಇಂದಿರಾ ಕ್ಯಾಂಟೀನ್‌ಗೆ ಹಣ ನೀಡುತ್ತಿಲ್ಲ. ಬಿಬಿಎಂಪಿಯೇ ನಿರ್ವಹಿಸಬೇಕೆಂದು ಸರಕಾರ ಹೇಳುತ್ತಿದೆ. ಕ್ಯಾಂಟೀನ್ ನಿರಂತರವಾಗಿ ನಡೆಯಬೇಕಾದರೆ ಅಲ್ಲಿ ಗುಣಮಟ್ಟದ ಆಹಾರ ಸಿಗಬೇಕಾದರೆ ಇಂದಿರಾ ಕ್ಯಾಂಟೀನ್ ವೆಚ್ಚವನ್ನ ರಾಜ್ಯ ಸರಕಾರ ಭರಿಸಬೇಕು. ಬಡವರಿಗೆ ಕಡಿಮೆ ದರದಲ್ಲಿ ಪೌಷ್ಟಿಕ ಆಹಾರ ಸಿಗಬೇಕೇಂದು ಈ ಯೋಜನೆ ರೂಪಿಸಲಾಗಿದೆ. ಇದು ನಮ್ಮ ಸರಕಾರದ ಆದ್ಯತೆಯ ಕಾರ್ಯಕ್ರಮ ಎಂದರು.

ಸರಕಾರವೇ ಇಲ್ಲ: ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿ 22 ದಿನ ಕಳೆದವು. ಆದರೆ, ಇನ್ನು ರಾಜ್ಯದಲ್ಲಿ ಸರಕಾರ ಪೂರ್ಣ ಪ್ರಮಾಣದಲ್ಲಿಲ್ಲ. ಒಂದೆಡೆ ಪ್ರವಾಹ, ಇನ್ನೊಂದೆಡೆ ಬರ ಆವರಿಸಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ರಾಮನಗರ, ಬೆಂಗಳೂರು, ರಾಯಚೂರು, ಯಾದಗಿರಿ, ವಿಜಯಪುರ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ವಾಡಿಕೆಗಿಂತ ಶೇ.20 ಕಡಿಮೆ ಆಗಿದೆ. ಇವತ್ತಿನವರೆಗೆ ಬರ ಪೀಡಿತ ಪ್ರದೇಶಗಳ ಘೋಷಣೆ ಆಗಿಲ್ಲ. ಬರ ಪೀಡಿತ ಅಂತ ಘೋಷಣೆ ಮಾಡದೆ ಇದ್ದರೆ ಪರಿಹಾರ ಪಡೆಯಲು ಆಗುವುದಿಲ್ಲ ಎಂದು ಹೇಳಿದರು.

ಬರ ಪೀಡಿತ ಪ್ರದೇಶಗಳನ್ನು ಘೋಷಿಸಿ: ಮಳೆಯಾಗದೆ ಬಿತ್ತನೆ ಮಾಡಿರುವ ಬೆಳೆ ಹಾಳಾಗಿದೆ. ಕೆಲವೆಡೆ ಬಿತ್ತನೆಯೂ ಆಗುತ್ತಿಲ್ಲ. ಮಳೆ ಇಲ್ಲದೆ ಜಾನುವಾರುಗಳಿಗೆ ಮೇವು ಇಲ್ಲದಂತಾಗಿದೆ. ದನಕರುಗಳಿಗೆ ಮೇವು ನೀಡುತ್ತಿಲ್ಲ, ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ. ರೈತರಿಗೆ, ಬಡವರಿಗೆ ಸಹಾಯ ಮಾಡುತ್ತಿಲ್ಲ. ಹೀಗಿದ್ದರೆ ಸರಕಾರ ಏಕೆ ಇರಬೇಕು. ಬರ ಪೀಡಿತ ಪ್ರದೇಶಗಳನ್ನು ಘೋಷಿಸಬೇಕೆಂದು ಆಗ್ರಹಿಸಿದರು.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಜಿಲ್ಲಾ ಮಂತ್ರಿಗಳಿಲ್ಲದೆ ಸ್ವಾತಂತ್ರ್ಯ ದಿನಾಚರಣೆ ಮಾಡಲಾಗಿದೆ. ಇದನ್ನು ಪ್ರಜಾಪ್ರಭುತ್ವ ಎಂದು ಕರೆಯಬೇಕೇ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಅಧಿಕಾರಿಗಳು ಧ್ವಜಾರೋಹಣ ನೆರವೇರಿಸಿದ್ದಾರೆ ಎಂದು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News