ಕಲಬುರ್ಗಿ ಹಂತಕರಿಗೆ ದ.ಕ ಜಿಲ್ಲೆಯ ಪಿಲಾತಬೆಟ್ಟು ಗ್ರಾಮದ ರಬ್ಬರ್ ತೋಟದಲ್ಲಿ ಬಂದೂಕು ತರಬೇತಿ: ಎಸ್ಐಟಿ

Update: 2019-08-17 13:40 GMT

ಬೆಂಗಳೂರು, ಆ.17: ಹಿರಿಯ ಸಾಹಿತಿ, ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪಣಾ ಪಟ್ಟಿಯನ್ನು ಶನಿವಾರ ನ್ಯಾಯಾಲಯಕ್ಕೆ ಸಿಟ್(ಎಸ್‌ಐಟಿಐ) ಸಲ್ಲಿಕೆ ಮಾಡಿದೆ.

ಮಹಾರಾಷ್ಟ್ರದ ಚಿಂಚವಾಡ್ ಮಾಣಿಕ್ ಕಾಲನಿ ನಿವಾಸಿ ಅಮೋಲ್ ಎ.ಕಾಳೆ(37), ಹುಬ್ಬಳ್ಳಿಯ ಚೈತನ್ಯ ನಗರದ ಗಣೇಶ್ ಮಿಸ್ಕಿನ್(27), ಶಹಾಪುರ ನಿವಾಸಿ ಪ್ರವೀಣ್ ಪ್ರಕಾಶ್ ಚತುರ್(26) ಯಾವಗಲ್ ತಾಲೂಕಿನ ಸಕಾಳಿ ಗ್ರಾಮದ ವಾಸುದೇವ್ ಭಗವಾನ್ ಸೂರ್ಯವಂಶಿ(29), ಔರಂಗಾಬಾದ್‌ನ ಕೇಶಾಪುರ ಗ್ರಾಮದ ಶರದ್ ಬಾಹುಸಾಹೇಬ್ ಕಳಾಸ್ಕರ್(25) ಹಾಗೂ ಹುಬ್ಬಳ್ಳಿಯ ಜನತಾ ಬಜಾರ್‌ನ ಅಮಿತ್ ಬುದ್ದಿ ಪ್ರಮುಖ ಆರೋಪಿಗಳಾಗಿದ್ದು, ಇವರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿರುವುದಾಗಿ ಸಿಟ್ ದೃಢಪಡಿಸಿದೆ.

ಹತ್ಯೆ ಸಂಚು ಹೇಗೆ?: 2015ನೇ ಸಾಲಿನ ಜನವರಿ, ಮೇ ಮಾಸದಲ್ಲಿ ಒಂದು ಕಡೆ ಜಮಾಯಿಸಿದ ಆರೋಪಿಗಳಾದ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್, ಪ್ರವೀಣ್ ಪ್ರಕಾಶ್ ಚತುರ್, ಅನೇಕ ಬಾರಿ ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಮನೆ ಉದ್ಯಾನವನದಲ್ಲಿ ಸೇರಿ ಡಾ.ಎಂ.ಎಂ.ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡುವ ಬಗ್ಗೆ ಸಂಚು ರೂಪಿಸಿದ್ದರು.

ಅದರಂತೆ, ಅಮೋಲ್ ಕಾಳೆ, ಕಲಬುರ್ಗಿ ಅವರ ಚಲನವಲನಗಳ ಮೇಲೆ ನಿಗಾ ಇಡುವಂತೆ ಗಣೇಶ್ ಮಿಸ್ಕಿನ್‌ಗೆ ಸೂಚಿಸಿದ್ದ. ವಾಸುದೇವ್ ಭಗವಾನ್ ಸೂರ್ಯವಂಶಿಗೆ ಕೃತ್ಯಕ್ಕೆ ಬಳಸಲು ಬೈಕ್‌ವೊಂದನ್ನು ಕಳ್ಳತನ ಮಾಡಿ, ಗಣೇಶ್ ಮಿಸ್ಕಿನ್‌ಗೆ ನೀಡುವಂತೆಯೂ ಹೇಳಿದ್ದ. ಬಳಿಕ, ಕಳ್ಳತನದ ಬೈಕ್‌ನಲ್ಲಿ ಓಡಾಟ ನಡೆಸಿ, ಕಲಬುರ್ಗಿ ಅವರ ಚಲನವಲನಗಳನ್ನು ಪಟ್ಟಿ ಮಾಡಿ, ಅಮೋಲ್ ಕಾಳೆಗೆ ಒಪ್ಪಿಸಿದ್ದರು ಎಂದು ಸಿಟ್ ಹೇಳಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತರಬೇತಿ: 2015ನೇ ಸಾಲಿನ ಆಗಸ್ಟ್ ಎರಡನೆ ವಾರದಲ್ಲಿಯೇ ಅಮೋಲ್ ಕಾಳೆಯು, ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ್ ಚತುರ್‌ನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾತಬೆಟ್ಟು ಗ್ರಾಮದಲ್ಲಿರುವ ಒಂದು ರಬ್ಬರ್ ತೋಟದಲ್ಲಿ ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸುವ ತರಬೇತಿ ನೀಡಿ, ಕೊಲೆ ಮಾಡಲು ಸಜ್ಜುಗೊಳಿಸಿದ್ದ ಎನ್ನುವ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ. ತದನಂತರ, ಆ.30ರ ಬೆಳಗ್ಗೆ 7 ಗಂಟೆ ಸುಮಾರಿಗೆ ಹುಬ್ಬಳ್ಳಿಯ ಇಂದಿರಾಗಾಂಧಿ ಗಾಜಿನ ಮನೆ ಉದ್ಯಾನವನದ ಬಳಿ ಅಮೋಲ್ ಕಾಳೆ, ಗಣೇಶ್ ಮಿಸ್ಕಿನ್ ಮತ್ತು ಪ್ರವೀಣ್ ಪ್ರಕಾಶ್ ಚತುರ್ ಸೇರಿದ್ದರು.

ಬಳಿಕ, ಅಮೋಲ್ ಕಾಳೆ, ಬೈಕ್ ಅನ್ನು ಪ್ರವೀಣ್ ಪ್ರಕಾಶ್ ಚತುರ್‌ಗೆ ನೀಡಿ, ಗಣೇಶ್ ಮಿಸ್ಕಿನ್‌ಗೆ ಜೀವಂತ ಗುಂಡುಗಳು ತುಂಬಿದ್ದ ‘7.65 ಎಂಎಂಸಿ’ ನಾಡ ಪಿಸ್ತೂಲ್ ಇದ್ದ ಒಂದು ಬ್ಯಾಗ್ ನೀಡಿದ್ದ ಎನ್ನುವ ಮಾಹಿತಿ ತನಿಖೆಯಲ್ಲಿ ಗೊತ್ತಾಗಿದೆ. ಈ ಇಬ್ಬರು ಬೈಕ್‌ನಲ್ಲಿ ತೆರಳಿ, ಡಾ.ಎಂ.ಎಂ.ಕಲಬುರ್ಗಿ ಅವರ ಹಣೆಗೆ ಪಿಸ್ತೂಲಿನಿಂದ ಎರಡು ಗುಂಡು ಹಾರಿಸಿ ಹತ್ಯೆಗೈದಿದ್ದರು. ನಂತರ, ಪರಾರಿಯಾಗಿದ್ದರು ಎಂದು ಸಿಟ್ ಚಾರ್ಜ್‌ಶೀಟ್‌ನಲ್ಲಿ ವಿವರಿಸಿದೆ.

ಸನಾತನ ಸಿದ್ಧಾಂತವೇ ಹತ್ಯೆಗೆ ಪ್ರೇರಣೆ?

ಸನಾತನ ಸಂಸ್ಥೆ ಪ್ರಕಟಿಸಿರುವ ‘ಕ್ಷಾತ್ರ ಧರ್ಮ ಸಾಧನೆ’ ಎಂಬ ಪುಸ್ತಕದಲ್ಲಿ ವಿವರಿಸಿದ ಮಾರ್ಗಸೂಚಿಗಳು ಮತ್ತು ತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾ, ತಮ್ಮ ನಂಬಿಕೆ, ಸಿದ್ಧಾಂತ ವಿರೋಧಿಗಳನ್ನು ಗುರಿಯಾಗಿಸಿಕೊಂಡು ಆರೋಪಿಗಳು ಹತ್ಯೆ ಮಾಡುತ್ತಿದ್ದರು ಎನ್ನುವ ಮಾಹಿತಿ ಸಿಟ್ ಸಲ್ಲಿಸಿರುವ ದೋಷಾರೋಪಣ ಪತ್ರದಲ್ಲಿ ಉಲ್ಲೇಖಿಸಿದೆ.

ನಿಜನಾಮಧೇಯ ಮರೆಮಾಚಿದ್ದರು

ಅನಾಮಧೇಯ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದ ಆರೋಪಿಗಳು ಕರ್ನಾಟಕ ಮತ್ತು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಗೌಪ್ಯವಾಗಿ ಸಭೆ ಸೇರಿ ದೈಹಿಕ ಹಾಗೂ ಶಸ್ತ್ರಾಸ್ತ್ರ ತರಬೇತಿ ಪಡೆದುಕೊಳ್ಳುತ್ತಿದ್ದರು. ನಿರಂತರ ಸಂಕರ್ಪದಲ್ಲಿರುವ ಜೊತೆಗೆ ನಿಜವಾದ ಹೆಸರುಗಳನ್ನು ಮಾರೆಮಾಚಿದ್ದರು ಎನ್ನುವ ಮಾಹಿತಿಯೂ ಗೊತ್ತಾಗಿದೆ.

'ಕೆಲ ದಿನಗಳ ಮೊದಲು ಮಂಗಳೂರಿನ ಉದ್ಯಮಿಯೊಬ್ಬರಿಗೆ ಸೇರಿದ ರಬ್ಬರ್ ಎಸ್ಟೇಟ್‌ನಲ್ಲಿ ಹಂತಕರಿಗೆ ಅಂತಿಮ ತರಬೇತಿ ಶಿಬಿರವನ್ನು ನಡೆಸಿದ್ದರೆಂದು, ವಿಶೇಷ ತನಿಖಾ ತಂಡವು ನಡೆಸುತ್ತಿರುವ ವಿಚಾರಣೆಯು ಬಹಿರಂಗಪಡಿಸಿರುವುದಾಗಿ ‘INDIAN EXPRESS’ ವರದಿ ಮಾಡಿತ್ತು.

'ಕಲಬುರ್ಗಿ ಅವರ ಹಂತಕರಿಗೆ ತರಬೇತಿ ಶಿಬಿರ ನಡೆದ ಎಸ್ಟೇಟ್ ಮಂಗಳೂರಿನ ಉದ್ಯಮಿ ಕೆ.ಅನಂತ್ ಕಾಮತ್ ಅವರಿಗೆ ಸೇರಿದ್ದೆಂದು ಸಿಟ್ ಗುರುತಿಸಿದೆ. ಕಾಮತ್ ಅವರು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ಸಂಘಟನೆಗಳ ಜೊತೆ ಒಡನಾಟವನ್ನು ಹೊಂದಿದ್ದರೆಂದು ಪೊಲೀಸ್ ಮೂಲಗಳು ಹೇಳಿರುವುದಾಗಿ INDIAN EXPRESS ವರದಿ ತಿಳಿಸಿತ್ತು. ಆದರೆ ಈ ಆರೋಪವರನ್ನು ಅನಂತ್ ಕಾಮತ್ ನಿರಾಕರಿಸಿದ್ದರು.

ಇದೀಗ ಎಸ್ಐಟಿಯು ದೋಷಾರೋಪ ಪಟ್ಟಿಯಲ್ಲಿ ಬಂದೂಕು ತರಬೇತಿ ಬಗ್ಗೆ ಉಲ್ಲೇಖಿಸಿದ್ದು, ಪಿಲಾತಬೆಟ್ಟು ಗ್ರಾಮದ ರಬ್ಬರ್ ತೋಟದಲ್ಲಿ ತರಬೇತಿ ನೀಡಲಾಗಿತ್ತು ಎಂದು ಬಹಿರಂಗಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News