ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದಿದ್ದ ಪಾಕಿಸ್ತಾನ, ಚೀನಾಕ್ಕೆ ಭಾರೀ ಮುಖಭಂಗ

Update: 2019-08-17 14:21 GMT

ಹೊಸದಿಲ್ಲಿ, ಆ.17: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ವಿಧಿ 370ನ್ನು ರದ್ದುಗೊಳಿಸಿದ್ದರ ವಿರುದ್ಧ ವಿಶ್ವಸಂಸ್ಥೆಯ ಮೊರೆ ಹೋಗಿದ್ದ ಪಾಕಿಸ್ತಾನ ಮತ್ತು ಅದರ ಸಾರ್ವಕಾಲಿಕ ಆಪ್ತಮಿತ್ರ ಚೀನಾ ಭಾರೀ ಮುಖಭಂಗವನ್ನು ಅನುಭವಿಸಿವೆ.

15 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಶುಕ್ರವಾರ ಮುಚ್ಚಿದ ಕೊಠಡಿಯಲ್ಲಿ ಕಾಶ್ಮೀರ ವಿಷಯವನ್ನು ಚರ್ಚಿಸಿದ್ದು,ಇದು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಎಂಬ ಬಹುಮತದ ಅಭಿಪ್ರಾಯವು ವ್ಯಕ್ತವಾಗಿತ್ತು. ಸಭೆಯ ಬಳಿಕ ಭದ್ರತಾ ಮಂಡಳಿಯು ಯಾವುದೇ ಹೇಳಿಕೆಯನ್ನು ಹೊರಡಿಸಿಲ್ಲ. ಅದು ಅನೌಪಚಾರಿಕ ಸಭೆಯಾಗಿದ್ದರಿಂದ ಚರ್ಚೆಯು ವಿಶ್ವಸಂಸ್ಥೆಯ ಕಡತದಲ್ಲಿಯೂ ದಾಖಲಾಗಿಲ್ಲ.

ಚೀನಾದ ಕೋರಿಕೆಯ ಮೇರೆಗೆ ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಅನೌಪಚಾರಿಕ ಚರ್ಚೆಗಳ ಬಳಿಕ ವಿಶ್ವಸಂಸ್ಥೆಗೆ ಚೀನಾ ಮತ್ತು ಪಾಕಿಸ್ತಾನದ ರಾಯಭಾರಿಗಳಾಗಿರುವ ಝಾಂಗ್ ಜುನ್ ಮತ್ತು ಮಲೀಹಾ ಲೋಧಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರಾದರೂ ಅವರ ಯಾವುದೇ ಪ್ರಶ್ನೆಗಳಿಗೆ ಉತ್ತರಿಸದೆ ನಿರ್ಗಮಿಸಿದರು.

ಆಗಸ್ಟ್ ತಿಂಗಳಿಗೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿರುವ ಪೋಲಂಡ್ ನೇತೃತ್ವದಲ್ಲಿ ನಡೆದಿದ್ದ ಚರ್ಚೆಗಳ ಬಳಿಕ ಹೇಳಿಕೆಯನ್ನು ಹೊರಡಿಸಬೇಕೆಂದು ಚೀನಾ ಆಗ್ರಹಿಸಿತ್ತು. ಬ್ರಿಟನ್ ಕೂಡ ಅದನ್ನು ಬೆಂಬಲಿಸಿತ್ತು.

ಪಾಕಿಸ್ತಾನವು ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸುವುದರಲ್ಲಿ ಯಾರಿಗೂ ಆಸಕ್ತಿಯಿಲ್ಲ. ಈ ಬಾರಿಯೂ ಆ ಬಗ್ಗೆ ಯಾವುದೇ ಆಸಕ್ತಿ ವ್ಯಕ್ತವಾಗಲಿಲ್ಲ. ಚರ್ಚೆಗಳ ಬಳಿಕ ಯಾವುದೇ ನಿರ್ಧಾರ ಹೊರಬಿದ್ದಿಲ್ಲ,ಹೇಳಿಕೆಯನ್ನೂ ಹೊರಡಿಸಲಾಗಿಲ್ಲ ಎಂದು ಬೆಳವಣಿಗೆಯನ್ನು ನಿಕಟವಾಗಿ ಬಲ್ಲ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿದವು.

  ಯಾವುದೇ ಹೇಳಿಕೆಯನ್ನು ಹೊರಡಿಸಕೂಡದು ಎಂದು ಮಂಡಳಿಯ ಹೆಚ್ಚಿನ ಸದಸ್ಯ ರಾಷ್ಟ್ರಗಳ ಮಾತು ಮನ್ನಣೆ ಪಡೆದುಕೊಂಡಿದ್ದರಿಂದ,ಚೀನಾ ಅನಿವಾರ್ಯವಾಗಿ ತನ್ನ ರಾಷ್ಟ್ರೀಯ ಸಾಮರ್ಥ್ಯದಲ್ಲಿ ಹೇಳಿಕೆಯನ್ನು ನೀಡುವಂತಾಗಿತ್ತು ಮತ್ತು ಪಾಕಿಸ್ತಾನವು ಅದನ್ನು ಅನುಸರಿಸಿತ್ತು.

ಮಂಡಳಿಯ ಹೆಚ್ಚಿನ ಸದಸ್ಯ ರಾಷ್ಟ್ರಗಳು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ದ್ವಿಪಕ್ಷೀಯ ವಿಷಯವಾಗಿದೆ ಮತ್ತು ಅದನ್ನು ಅವೇ ಬಗೆಹರಿಸಿಕೊಳ್ಳಬೇಕು ಎಂದು ಪ್ರತಿಪಾದಿಸುವ ಮೂಲಕ ಕಾಶ್ಮೀರವನ್ನು ಜಾಗತಿಕ ಮಟ್ಟದಲ್ಲಿ ಪ್ರಸ್ತಾಪಿಸುವ ಪಾಕ್ ಪ್ರಯತ್ನಕ್ಕೆ ಆಘಾತವನ್ನು ನೀಡಿದವು ಎಂದು ಮೂಲಗಳು ಹೇಳಿದವು.

ವೀಟೊ ಅಧಿಕಾರದೊಂದಿಗೆ ಮಂಡಳಿಯ ಕಾಯಂ ಸದಸ್ಯನಾಗಿರುವ ಚೀನಾ ಸಭೆಯನ್ನು ನಡೆಸಲು ಕೋರಿತ್ತು. ಮಂಡಳಿಯ ವಿಧಿವಿಧಾನಗಳಂತೆ ಸದಸ್ಯ ರಾಷ್ಟ್ರಗಳು ಯಾವುದೇ ವಿಷಯವನ್ನು ಚರ್ಚೆಗಾಗಿ ಪ್ರಸ್ತಾಪಿಸಬಹುದು. ಇಂತಹ ಮುಚ್ಚಿದ ಕೊಠಡಿಗಳಲ್ಲಿ ನಡೆಯುವ ಅನೌಪಚಾರಿಕ ಚರ್ಚೆಗಳು ಕಡತಗಳಲ್ಲಿ ದಾಖಲಾಗುವುದಿಲ್ಲ ಮತ್ತು ಅವು ಯಾವುದೇ ನಡಾವಳಿಗಳನ್ನು ಹೊಂದಿರುವುದಿಲ್ಲ.

ಒಕ್ಕೂಟ ವ್ಯವಸ್ಥೆಯೊಂದು ಅದು ಹೇಗೆ ಗಡಿಯಾಚೆಗೆ ಪರಿಣಾಮವನ್ನುಂಟು ಮಾಡುತ್ತದೆ? ಅಲ್ಲದೆ ಕಾಶ್ಮೀರ ಕುರಿತಂತೆ ತಾನು ಶಿಮ್ಲಾ ಒಪ್ಪಂದಕ್ಕೆ ಬದ್ಧವಾಗಿದ್ದೇನೆ ಎಂದು ಭಾರತವು ಪದೇ ಪದೇ ಒತ್ತಿ ಹೇಳುತ್ತಿದೆ ಎಂದು ಮೂಲಗಳು ತಿಳಿಸಿದವು.

‘ಮಾನವ ಹಕ್ಕುಗಳ ಸಾರಾಸಗಟು ಉಲ್ಲಂಘನೆ’ ಆರೋಪಗಳ ಕುರಿತಂತೆ ಮೂಲಗಳು,ಚೀನಾ ‘ಮಾನವ ಹಕ್ಕುಗಳ’ ಬಗ್ಗೆ ಮಾತನಾಡುತ್ತಿರುವುದರಿಂದ ಪಾಕಿಸ್ತಾನವು ಈ ಹೋರಾಟದಲ್ಲಿಯೂ ಸೋತಿದೆ ಎಂದವು.

ಸಭೆ ಕರೆಯಲು ಚೀನಾ ಕೋರಲೇಬಾರದಿತ್ತು. ಆದರೆ ಮಂಡಳಿಯು ತನ್ನ ಕೋರಿಕೆಗೆ ಸ್ಪಂದಿಸುವಂತೆ ಮಾಡುವ ಮೂಲಕ ಅದು ಮತ್ತು ಪಾಕ್ ಅತಿಯಾದ ಬುದ್ಧಿವಂತಿಕೆ ಪ್ರದರ್ಶಿಸಿದ್ದವು ಮತ್ತು ಅವು ಎಲ್ಲ ಅವಕಾಶಗಳನ್ನೂ ಕಳೆದುಕೊಂಡವು ಎಂದು ಮೂಲಗಳು ಹೇಳಿದವು.

ವಿಧಿ 370 ರದ್ದತಿಯು ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯವಾಗಿದ್ದು,ಇದರಿಂದ ಇತರ ಯಾವುದೇ ದೇಶಕ್ಕೆ ತೊಂದರೆಯಿಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ರಾಯಭಾರಿಯಾಗಿರುವ ಸೈಯದ್ ಅಕ್ಬರುದ್ದೀನ್ ಸ್ಪಷ್ಟಪಡಿಸಿದರು.

ಆಫ್ರಿಕನ್ ಸದಸ್ಯ ರಾಷ್ಟ್ರಗಳಾದ ಕೋಟ್ ಡಿ’ಐವರಿ ಮತ್ತು ಈಕ್ವೆಟೋರಿಯಲ್ ಗಿನಿ, ಡೊಮಿನಿಕನ್ ರಿಪಬ್ಲಿಕ್, ಜರ್ಮನಿ, ಅಮೆರಿಕ,ಫ್ರಾನ್ಸ್ ಮತ್ತು ರಷ್ಯಾ ಭಾರತವನ್ನು ಬೆಂಬಲಿಸಿದ್ದವು.

ಪಾಕಿಸ್ತಾನವು ಬಹಿರಂಗ ಸಭೆಯನ್ನು ಬಯಸಿತ್ತಾದರೂ ಅದನ್ನು ಮಂಡಳಿಯು ಪುರಸ್ಕರಿಸಲಿಲ್ಲ. ಪಾಕಿಸ್ತಾನ ಸರಕಾರದ ಪ್ರತಿನಿಧಿ ಸಭೆಯಲ್ಲಿ ಉಪಸ್ಥಿತರಿರಲು ಅವಕಾಶ ನೀಡಬೇಕೆಂಬ ಕೋರಿಕೆಯನ್ನೂ ಮಂಡಳಿಯು ತಿರಸ್ಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News