ಪ್ರವಾಹ ಸಂತ್ರಸ್ತರಿಗೆ ಚಿಕಿತ್ಸೆ: ಎಂ.ಬಿ.ಪಾಟೀಲ್

Update: 2019-08-17 14:22 GMT

ವಿಜಯಪುರ, ಆ.17: ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆರು ತಂಡಗಳು ನೆರೆ ಹಾವಳಿ ಪೀಡಿತ ಪ್ರದೇಶಗಳಲ್ಲಿ ಸಂಚರಿಸಿ, ಸಂತ್ರಸ್ತರಿಗೆ ಚಿಕಿತ್ಸೆ ನೀಡಿವೆ ಎಂದು ಶಾಸಕ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೈದ್ಯರ 56 ತಂಡಗಳನ್ನು ರಚಿಸಲಾಗಿತ್ತು. ಜಿಲ್ಲಾಡಳಿತ ಬಯಸಿದಲ್ಲಿ ಅವರು ಭೇಟಿ ನೀಡಿ ಸೇವೆ ನೀಡಿದ್ದಾರೆ. ಇದನ್ನು ಮುಂದುವರಿಸಿಕೊಂಡು ಹೋಗಲಾಗುವುದು. ಇದು ನಮ್ಮ ಸಾಮಾಜಿಕ ಬದ್ಧತೆ ಮತ್ತು ಕರ್ತವ್ಯವಾಗಿದೆ ಎಂದು ತಿಳಿಸಿದರು.

ಚಿಕ್ಕಗಲಗಲಿ, ಬಬಲಾದ ಸೇರಿ 34 ಹಳ್ಳಿಗಳಲ್ಲಿ ಬೆಳೆ ಹಾಗೂ 60 ಮನೆಗಳಿಗೆ ಹಾನಿಯಾಗಿದೆ. ಭೂಸ್ವಾಧೀನವಾಗದ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡಿರುವುದರಿಂದ ಅವರಿಗೆ ಪರಿಹಾರ ನೀಡಬೇಕಾಗಿರುವುದು ಸರಕಾರದ ಕರ್ತವ್ಯವಾಗಿದೆ ಎಂದು ಹೇಳಿದರು. 1995ರಲ್ಲಿ ಭೂಸಂತ್ರಸ್ತರಿಗೆ ಪರಿಹಾರ ನೀಡಲಾಗಿತ್ತು. ಆದರೆ, ಅವರು ಹಣವನ್ನು ಖರ್ಚು ಮಾಡಿದ್ದಾರೆ. ಹೀಗಾಗಿ ಅವರೆಲ್ಲರಿಗೂ ಈಗ ಪುನರ್ವಸತಿ ಕಲ್ಪಿಸಬೇಕಾಗಿದೆ ಎಂದು ಪಾಟೀಲ್ ಆಗ್ರಹಿಸಿದರು.

ಮುಳುಗಡೆ ಪ್ರದೇಶಗಳ ಶಾಶ್ವತ ಸ್ಥಳಾಂತರದ ಅವಶ್ಯಕತೆ ಇದೆ. ಸಂತ್ರಸ್ತರು ತಾತ್ಕಾಲಿಕವಾಗಿ 18x17 ಅಡಿ ಶೆಡ್ ನಿರ್ಮಿಸಿಕೊಡುವಂತೆ ಕೇಳುತ್ತಿದ್ದಾರೆ. ಶೌಚಾಲಯ, ಸ್ನಾನಗೃಹ, ಶುದ್ಧ ಕುಡಿಯುವ ನೀರು ಒದಗಿಸಬೇಕಾಗಿದೆ. ಈ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ, ಮುಖ್ಯಮಂತ್ರಿ ಜತೆ ಚರ್ಚೆ ನಡೆಸುತ್ತೇನೆ. ನಾನು ವಿರೋಧ ಪಕ್ಷದಲ್ಲಿದ್ದರೂ ಸರಕಾರಕ್ಕೆ ಸಹಕಾರ ನೀಡುತ್ತೇನೆ ಎಂದರು.

ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಕೇಂದ್ರ ಸರಕಾರ ಪಾತ್ರ ಮಹತ್ವದ್ದಾಗಿದೆ. 40 ಸಾವಿರ ಕೋಟಿ ಬೆಳೆಹಾನಿಯಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಸಮೀಕ್ಷೆ ಪೂರ್ಣಗೊಂಡಿಲ್ಲವಾದರೂ, ಅವರಿಗೆ ಮಾಹಿತಿ ಇದ್ದೇ ಇರುತ್ತದೆ. ಹೀಗಾಗಿ ಪಕ್ಷ ಭೇದ ಮರೆತು ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News