ಸಂಪುಟ ರಚನೆಗೆ ಹೈಕಮಾಂಡ್ ಹಸಿರು ನಿಶಾನೆ: ಆ.20ಕ್ಕೆ ನೂತನ ಸಚಿವರ ಪ್ರಮಾಣ

Update: 2019-08-17 16:14 GMT

ಹೊಸದಿಲ್ಲಿ, ಆ.17: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದ ಸಚಿವ ಸಂಪುಟ ರಚನೆಗೆ ಹೈಕಮಾಂಡ್ ಕೊನೆಗೂ ಹಸಿರು ನಿಶಾನೆ ತೋರಿಸಿದ್ದು, ಆ.20ರಂದು ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯುವ ಸಾಧ್ಯತೆಗಳಿವೆ.

ಶನಿವಾರ ರಾತ್ರಿ ಹೊಸದಿಲ್ಲಿಯ ನಾರ್ಥ್ ಬ್ಲಾಕ್‌ನಲ್ಲಿರುವ ಗೃಹ ಇಲಾಖೆ ಕಚೇರಿಯಲ್ಲಿ ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಸಿಎಂ ಯಡಿಯೂರಪ್ಪ, ಸಚಿವ ಸ್ಥಾನಾಕಾಂಕ್ಷಿಗಳ ಪಟ್ಟಿಯನ್ನು ಸಲ್ಲಿಸಿದರು.

ಮೊದಲ ಹಂತದಲ್ಲಿ 15 ಮಂದಿ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಗೆ ಒಪ್ಪಿಗೆ ಸೂಚಿಸುವಂತೆ ಸಿಎಂ ಯಡಿಯೂರಪ್ಪ ಕೋರಿದರು. ಅಲ್ಲದೆ, ಇದೇ ವೇಳೆ ಸಚಿವ ಸಂಪುಟ ಸೇರ್ಪಡೆಯ ಸ್ಥಾನಾಕಾಂಕ್ಷಿಗಳ ಸಂಪೂರ್ಣ ಮಾಹಿತಿಯನ್ನು ಅಮಿತ್ ಶಾ ನೀಡಿದರು.

ಸಚಿವ ಸಂಪುಟ ವಿಸ್ತರಣೆಗೆ ಅಮಿತ್ ಶಾ ಸೂಚನೆ ನೀಡಿದ ಹಿನ್ನೆಲೆಯಲ್ಲಿ ‘ಆ.20ರ ಮಂಗಳವಾರ ಬೆಳಗ್ಗೆ 10ಗಂಟೆಗೆ ವಿಧಾನಸೌಧದ ಮೂರನೆ ಮಹಡಿಯಲ್ಲಿನ ಸಮ್ಮೇಳನ ಸಭಾಂಗಣದಲ್ಲಿ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅನಂತರ ಮಧ್ಯಾಹ್ನ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ’ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ರಾಜ್ಯದಲ್ಲಿ ನೆರೆ ಹಾವಳಿಯಿಂದ 18ಜಿಲ್ಲೆಗಳ 100ಕ್ಕೂ ಹೆಚ್ಚು ತಾಲೂಕುಗಳಲ್ಲಿನ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರಿಗೆ ನೆರವಿಗೆ ಧಾವಿಸಲು ಸರಕಾರವೇ ಇಲ್ಲ ಎಂಬ ವಿಪಕ್ಷಗಳ ಆರೋಪಗಳ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ 22ದಿನಗಳು ಕಳೆದ ನಂತರ ಬಿಜೆಪಿ ಹೈಕಮಾಂಡ್ ಸಂಪುಟ ರಚನೆಗೆ ಸಮ್ಮತಿಸಿದೆ.

ಎರಡು ದಿನಗಳಿಂದ ದಿಲ್ಲಿಯಲ್ಲೆ ಬೀಡುಬಿಟ್ಟಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನೆರೆ ಸಂತ್ರಸ್ತರ ನೆರವಿಗೆ ಕೂಡಲೇ ಅನುದಾನ ಬಿಡುಗಡೆ ಕೋರಿ ಪ್ರಧಾನಿ ಮೋದಿ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಶನಿವಾರ ರಾತ್ರಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಂಪುಟ ರಚನೆ ಸಂಬಂಧ ಚರ್ಚಿಸಿದರು.

ರಾತ್ರಿ 8:40ಕ್ಕೆ ಹೊಸದಿಲ್ಲಿಯಿಂದ ತಡರಾತ್ರಿ 11:20ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಯಡಿಯೂರಪ್ಪ, ಆ.20ರಂದು ಶಾಸಕಾಂಗ ಪಕ್ಷದ ಸಭೆ ನಡೆಸಲಿದ್ದು, ಹೈಕಮಾಂಡ್ ಸೂಚನೆಯನ್ವಯ ಮೊದಲ ಹಂತದಲ್ಲಿ 12 ಅಥವಾ 13 ಮಂದಿ ನೂತನವಾಗಿ ಸಂಪುಟ ಸೇರ್ಪಡೆ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News