ಬರಿಗಾಲಲ್ಲಿ 11 ಸೆಕೆಂಡ್‌ ಗಳಲ್ಲಿ 100 ಮೀ. ಓಡಿದ ಯುವಕ: ವಿಡಿಯೋ ವೈರಲ್

Update: 2019-08-17 15:35 GMT

ಭೋಪಾಲ್, ಆ.17: ಮಧ್ಯಪ್ರದೇಶದ ರೈತ ಕುಟುಂಬದ 19ರ ಹರೆಯದ ಯುವಕ ರಾಮೇಶ್ವರ್ ಗುರ್ಜರ್ 11 ಸೆಕೆಂಡ್‌ನಲ್ಲಿ 100 ಮೀ. ಓಟ ಪೂರ್ಣಗೊಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ರಾಮೇಶ್ವರ್ ಬರಿಗಾಲಲ್ಲಿ 100 ಮೀ.ಲ್ಯಾಪ್‌ ನ್ನು 11 ಸೆಕೆಂಡ್‌ನಲ್ಲಿ ಕ್ರಮಿಸಿರುವ ವಿಡಿಯೋ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ಇದಕ್ಕೆ ಶುಕ್ರವಾರ ರಾತ್ರಿ ಪ್ರತಿಕ್ರಿಯಿಸಿರುವ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು, 19ರ ಹರೆಯದ ಯುವಕನನ್ನು ದೇಶದ ಕ್ರೀಡಾ ಅಥ್ಲೆಟಿಕ್ಸ್ ಅಕಾಡಮಿಗೆ ಭರ್ತಿ ಮಾಡುವ ಕುರಿತು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಗುರ್ಜರ್ ಓಡಿರುವ ಲ್ಯಾಪ್ ಬಗ್ಗೆ 11 ಸೆಕೆಂಡ್ ಸಮಯದ ವಿಡಿಯೋ ಏಕೈಕ ಪುರಾವೆಯಾಗಿದ್ದು, ಇದರ ಹೊರತಾಗಿ ಯಾವುದೇ ಅಧಿಕೃತ ದಾಖಲೆಯಿಲ್ಲ. ಆದರೆ, ಗುರ್ಜರ್ ಮಿಂಚಿನ ಓಟವನ್ನು ನೋಡಿ ಎಲ್ಲರೂ ಪ್ರಭಾವಿತರಾಗಿದ್ದಾರೆ.

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ರಾತ್ರಿ ಈ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

‘‘ಭಾರತಕ್ಕೆ ಪ್ರತಿಭಾವಂತ ವ್ಯಕ್ತಿಗಳ ಆಶೀರ್ವಾದ ಪ್ರಾಪ್ತಿಯಾಗಿದೆ. ಸರಿಯಾದ ಅವಕಾಶ ಹಾಗೂ ಸರಿಯಾದ ವೇದಿಕೆ ಒದಗಿಸಿದ ಬಳಿಕ ಇತಿಹಾಸ ರಚಿಸಲು ಹಾರುವ ಬಣ್ಣಗಳ ಜೊತೆ ಹೊರಬರುತ್ತಾರೆ. ಈ ಮಹಾತ್ವಾಕಾಂಕ್ಷಿ ಅಥ್ಲೀಟ್ ತನ್ನ ಕೌಶಲ್ಯವನ್ನು ಬೆಳೆಸಲು ಕ್ರೀಡಾ ಸಚಿವರಾದ ಕಿರಣ್ ರಿಜಿಜು ಬೆಂಬಲ ನೀಡಬೇಕು’’ ಎಂದು ಚೌಹಾಣ್ ಟ್ವೀಟ್ ಮಾಡಿದ್ದರು.

ಕೆಲವೇ ನಿಮಿಷದಲ್ಲಿ ರಿಜಿಜು, ಚೌಹಾಣ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ್ದು, ಈ ವಿಚಾರದ ಕಡೆಗೆ ಗಮನ ನೀಡುವ ಭರವಸೆ ನೀಡಿದ್ದಾರೆ.

‘‘ಸರಿಯಾದ ತರಬೇತಿ, ಸಾಧನ ಲಭಿಸಿದರೆ ಈತ 100 ಮೀ. ದೂರವನ್ನು 9 ಸೆಕೆಂಡ್‌ನಲ್ಲಿ ತಲುಪಬಹುದು’’ ಎಂದು ಟ್ವೀಟ್ ಮಾಡಿರುವ ಮಧ್ಯಪ್ರದೇಶದ ಕ್ರೀಡಾ ಸಚಿವ ಜೀತು ಪಾಟ್ವಾರಿ, ರಾಮೇಶ್ವರ್ ಅವರನ್ನು ರಾಜ್ಯ ರಾಜಧಾನಿ ಭೋಪಾಲ್‌ಗೆ ಆಹ್ವಾನಿಸಿದ್ದಾರೆ.

ಸ್ಥಳೀಯ ಮಾಧ್ಯಮದ ವರದಿಗಳ ಪ್ರಕಾರ, ಗುರ್ಜರ್ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ರೈತ ಕುಟುಂಬದಿಂದ ಬಂದಿದ್ದಾರೆ.

 100 ಮೀ.ನ ರಾಷ್ಟ್ರೀಯ ದಾಖಲೆ ಅಮಿಯಾ ಮಲಿಕ್ ಹೆಸರಲ್ಲಿದೆ. ಅವರು 10.26 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದಾರೆ. 100 ಮೀ.ನ ವಿಶ್ವ ದಾಖಲೆ ಜಮೈಕಾದ ಓಟಗಾರ ಉಸೇನ್ ಬೋಲ್ಟ್ ಹೆಸರಲ್ಲಿದೆ. ಅವರು 9.58 ಸೆಕೆಂಡ್‌ನಲ್ಲಿ ಗುರಿ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News