ಗೃಹ ಪ್ರವೇಶಕ್ಕೆ ಸಿದ್ಧಗೊಂಡಿದ್ದ ಮನೆಯಲ್ಲೇ ಪ್ರವಾಹ ಸಂತ್ರಸ್ತರಿಗೆ ಆಶ್ರಯ

Update: 2019-08-17 16:37 GMT

ಚಿಕ್ಕಮಗಳೂರು, ಆ.17: ಮಹಾಮಳೆಯಿಂದಾಗಿ ಜಿಲ್ಲೆಯ ಮಲೆನಾಡು ಭಾಗದ ಜನರು ವರುಣನ ರೌದ್ರಾವತಾರಕ್ಕೆ ಮನೆ, ಜಮೀನುಗಳನ್ನು ಕಳೆದುಕೊಂಡು ತತ್ತರಿಸಿ ಹೋಗಿದ್ದಾರೆ. ಭಾರೀ ಮಳೆ, ನೆರೆಯ ಹೊಡೆತಕ್ಕೆ ಸಿಲುಕಿ ಸಂತ್ರಸ್ತರಾಗಿರುವ ಜನರಿಗೆ ಜಿಲ್ಲಾಡಳಿತ ವಿವಿಧ ತಾಲೂಕುಗಳ ಅಲ್ಲಲ್ಲಿ ಆರಂಭಿಸಿರುವ ಗಂಜಿಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಿದೆ. ಸಂತ್ರಸ್ತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ ಸರಕಾರಿ ನೆರವನ್ನೂ ಜಿಲ್ಲಾಡಳಿತ ಒದಗಿಸುತ್ತಿರುವುದು ಒಂದೆಡೆಯಾದರೆ, ಸಂತ್ರಸ್ತ ಜನರಿಗೆ ರಾಜ್ಯದ ವಿವಿಧ ಜಿಲ್ಲೆಗಳ ದಾನಿಗಳು, ಸಂಘಸಂಸ್ಥೆಗಳು, ಸ್ಥಳೀಯರು ನೆರವಿನ ಮಾಹಾಪೂರ ಒದಗಿಸುತ್ತಿದ್ದು, ದಾನಿಗಳು ಬಾಧಿತರಿಗೆ ನೀಡುತ್ತಿರುವ ಅಗತ್ಯ ವಸ್ತುಗಳನ್ನು ಸಂಗ್ರಹಿಸಿಡಲು ಜಿಲ್ಲಾಡಳಿತ ಬಳಿ ಸ್ಥಳಾವಕಾಶವೇ ಇಲ್ಲ ಎಂಬಷ್ಟರ ಮಟ್ಟಿಗೆ ನೆರವು ಹರಿದು ಬರುತ್ತಿದೆ.

ನೆರೆ ಸಂತ್ರಸ್ತರಿಗಾಗಿ ಜಿಲ್ಲಾಡಳಿತ ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳ ವ್ಯಾಪ್ತಿಯಲ್ಲಿ 26 ಗಂಜಿಕೇಂದ್ರಗಳನ್ನು ತೆರದಿದೆ. ಈ ಸಂತ್ರಸ್ತರ ಕೇಂದ್ರಗಳಲ್ಲಿ ಜಿಲ್ಲಾಡಳಿತ ವರದಿಯಂತೆ 1632 ಮಂದಿ ಆಶ್ರಯ ಪಡೆದಿದ್ದಾರೆ. ಅತಿವೃಷ್ಟಿ ಸಂದರ್ಭ ಅಪಾಯದ ಮುನ್ಸೂಚನೆ ಇದ್ದ ಸ್ಥಳಗಳಿಂದಲೂ ಜಿಲ್ಲಾಡಳಿತ ಭಾರೀ ಸಂಖ್ಯೆಯಲ್ಲಿ ಜನರನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡಿತ್ತು. ಸದ್ಯ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಜನರು ಕೆಲ ದಿನಗಳ ಹಿಂದೆ ಮರಳಿ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ. ಪ್ರಸಕ್ತ ಗಂಜಿ ಕೇಂದ್ರಗಳಲ್ಲಿರುವ ಬಾಧಿತರಿಗೆ ರಾಜ್ಯದ ವಿವಿಧ ಜಿಲ್ಲೆ ಹಾಗೂ ದಾನಿಗಳು, ಕಂಪೆನಿಗಳು, ಸಂಘ ಸಂಸ್ಥೆಗಳಿಂದ ಭಾರೀ ಪ್ರಮಾಣದಲ್ಲಿ ನೆರವು ಹರಿದು ಬರುತ್ತಿದ್ದು, ಸರಕಾರಿ ಅಧಿಕಾರಿಗಳು, ಪೊಲೀಸರು ಹಾಗೂ ಸ್ಥಳೀಯ ಸ್ವಯಂ ಸೇವಕರು ದಾನಿಗಳು ನೀಡುತ್ತಿರುವ ಈ ಅಗತ್ಯ ವಸ್ತುಗಳ ನೆರವನ್ನು ಸಂತ್ರಸ್ತರಿಗೆ ತಲುಪಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಇತ್ತೀಚೆಗೆ ಸುರಿದ ಭಾರೀ ಮಳೆಯ ಸಂದರ್ಭ ಕಳಸ ಹೋಬಳಿ ವ್ಯಾಪ್ತಿಯ ಹತ್ತಾರು ಗ್ರಾಮಗಳು ಭಾರೀ ತೊಂದರೆಗೆ ಸಿಲುಕಿದ್ದವು. ಈ ಪೈಕಿ ಕಳಸ ಪಟ್ಟಣ ಸಮೀಪದ ದೇವರಗುಡ್ಡ ಗ್ರಾಮಕ್ಕೆ ಹೊಂದಿಕೊಂಡಿರುವ ಬಿಳಗೋಡು ಗ್ರಾಮದಲ್ಲಿ 10ಕ್ಕೂ ಹೆಚ್ಚು ಕುಟುಂಬಗಳು ಭೂ ಕುಸಿತದಿಂದ ತೀವ್ರ ಸಮಸ್ಯೆಗೆ ತುತ್ತಾಗಿತ್ತು. ಗುಡ್ಡದ ಬದಿಯಲ್ಲೇ ಇರುವ ಈ ಗ್ರಾಮದ ಕುಟುಂಬಗಳ ಸುಮಾರು 40 ಮಂದಿ ಜೀವ ಉಳಿಸಿಕೊಳ್ಳುವ ಸಲುವಾಗಿ ಸುರಿಯುತ್ತಿದ್ದ ಮಳೆಯಲ್ಲಿ ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದು ನೆಲೆ ಇಲ್ಲದೇ ಸಂಕಷ್ಟಕ್ಕೆ ತುತ್ತಾಗಿದ್ದರು. ಇದನ್ನು ಗಮನಿಸಿದ ಕಳಸ ಪಟ್ಟಣದ ಗೋಪಾಲ್ ಶೆಟ್ಟಿ ಎಂಬವರು ಈ ಸಂತ್ರಸ್ತರನ್ನು ಪಟ್ಟಣದಲ್ಲಿ ತಮ್ಮ ಹೊಸ ಮನೆಗೆ ಕರೆ ತಂದು ಆಶ್ರಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಗೋಪಾಲ್‍ ಶೆಟ್ಟಿ ಅವರು ಈ ಮನೆಯನ್ನು ತಮ್ಮ ಮಗಳಿಗಾಗಿ ಖರೀದಿಸಿದ್ದು, ಅವರು ಗೃಹಪ್ರವೇಶ ಮಾಡುವ ಸಿದ್ಧತೆ ಕೈಗೊಂಡಿದ್ದರು. ಈ ಮಧ್ಯೆ ಅತೀವೃಷ್ಟಿ ಸಂಭವಿಸಿದ್ದರಿಂದ ಗೃಹ ಪ್ರವೇಶ ಕಾರ್ಯಕ್ರಮ ಮುಂದೂಡಿ ಸಂತ್ರಸ್ತರಿಗೆ ಅಲ್ಲಿ ಆಶ್ರಯ ನೀಡಿದ್ದಾರೆ. ಗೋಪಾಲ್ ಶೆಟ್ಟಿ ಅವರು ಈ ಮಾನವೀಯ ಅಂತಃಕರಣ ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಎಲ್ಲೆಡೆ ನಾಗರಿಕರಿಂದ ಪ್ರಶಂಸೆಗೆ ಒಳಗಾಗಿದೆ.

ಅದಲ್ಲದೇ, ಮಲೆನಾಡಿನಲ್ಲಿರುವ ನೂರಾರು ವಾಟ್ಸ್ ಆಪ್ ಗ್ರೂಪ್‍ಗಳ ಸದಸ್ಯರೂ ಅಳಿಲು ಸೇವೆ ಎಂಬಂತೆ ಪರಸ್ಪರ ಪರಿಚಯಸ್ಥರು, ಸಂಬಂಧಿಕರು, ದಾನಿಗಳು, ಸರಿವಂತರಿಂದ ನೆರವು ಯಾಚಿಸುತ್ತಾ ಅವುಗಳನ್ನು ಸಂತ್ರಸ್ತರಿಗೆ ತಲುಪಿಸುವಲ್ಲಿ ಕಾಳಜಿ ವಹಿಸುತ್ತಿದ್ದಾರೆ. ಮಳೆಯ ಆರ್ಭಟಕ್ಕೆ ಎಲ್ಲವನ್ನು ಕಳೆದುಕೊಂಡ ಜನರಿಗೆ ರಾಜ್ಯದ ಮೈಸೂರು, ಉಡುಪಿ, ಬೆಂಗಳೂರು ನಗರ ಹಾಗೂ ಜಿಲ್ಲೆಯ ನಾನಾ ಕಡೆಗಳಿಂದ ನಿರಾಶ್ರಿತರ ನೆರವಿಗೆ ಸಹಾಯಹಸ್ತ ನೀಡಿದ್ದು, ಅವುಗಳನ್ನು ಜಿಲ್ಲಾ ಕೇಂದ್ರದಲ್ಲಿ ಸಂಗ್ರಹಿಸಿ ನಂತರ ನಿರಾಶ್ರಿತರಿಗೆ ತಲುಪಿಸುವ ಕೆಲಸವನ್ನು ಜಿಲ್ಲಾಡಳಿತ ನೇಮಿಸಿರುವ ತಂಡವೊಂದು ಮುತುವರ್ಜಿಯಿಂದ ಮಾಡುತ್ತಿದೆ.

ಇದುವರೆಗೂ ಜಿಲ್ಲಾಡಳಿತ ಸಂತ್ರಸ್ತರಿಗಾಗಿ ವಿವಿಧ ಜಿಲ್ಲೆಗಳಿಂದ ಬಂದಿರುವ 15 ಟನ್ ಅಕ್ಕಿ ಸ್ವೀಕರಿಸಲಾಗಿದ್ದು, ಈ ಪೈಕಿ ಮೂರೂವರೆ ಟನ್ ಅಕ್ಕಿಯನ್ನು ನಿರಾಶ್ರಿತರ ಕೇಂದ್ರಗಳಿಗೆ ತಲುಪಿಸಲಾಗಿದೆ. ಉಳಿದ ಅಕ್ಕಿಯನ್ನು ಅಗತ್ಯ ಬಿದ್ದ ಕಡೆಗಳಿಗೆ ನೀಡಲಾಗುತ್ತಿದೆ. 150 ಬಾಕ್ಸ್ ಬಿಸ್ಕೆಟ್ಸ್, 12 ಪಿಂಡಿ ಬೆಡ್‍ಶೀಟ್, 560 ಲೀಟರ್  ಬಾಟಲ್ ಕುಡಿಯುವ ನೀರು, ಹಾಲಿನ ಪುಡಿ, ಸಕ್ಕರೆ, ಗೋದಿಹಿಟ್ಟು, ಸೇರಿದಂತೆ ಅಗತ್ಯ ವಸ್ತುಗಳು ಬರಪೂರ ಹರಿದು ಬರುತ್ತಿದ್ದು ನಿರಾಶ್ರಿತರ ಕೇಂದ್ರಗಳಿಗೆ ನೀಡಲಾಗುತ್ತಿದೆ. ಇದುವರೆಗೂ ಸುಮಾರು 5 ಲಾರಿಗಿಂತ ಜಾಸ್ತಿ ಅಗತ್ಯ ವಸ್ತುಗಳನ್ನು ನಿರಾಶ್ರಿತರ ಕೇಂದ್ರಗಳಿಗೆ ನೀಡಲಾಗಿದೆ.

ಜಿಲ್ಲೆಯ ನೆರೆ ನಿರಾಶ್ರಿತರಿಗೆ ಅಗತ್ಯ ವಸ್ತುಗಳ ಪ್ರಕ್ರಿಯೆಗೆ ಜಿಲ್ಲೆಯ ಎಂ.ಎನ್.ಗಂಗೇಗೌಡ ಅವರು ಬಿಸ್ಕೇಟ್, ಮಂಡಕ್ಕಿ ಪೇಸ್ಟ್ ನೀಡುವ ಮೂಲಕ ಆರಂಭಗೊಂಡು ಇದುವರೆಗೂ ಅನೇಕ ದಾನಿಗಳು ನೆರವಿನ ಹಸ್ತ ಚಾಚಿದ್ದಾರೆ. ಅಜ್ಜಂಪುರದ ಜೂನಿಯರ್ ಕಾಲೇಜು ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ, ವರ್ತಕರ ಸಂಘಗಳು, ಬೆಲೇನಹಳ್ಳಿ ಗ್ರಾಮಸ್ಥರು ಸೇರಿದಂತೆ ಅನೇಕರು ನೆರವು ನೀಡಿದ್ದಾರೆ. ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ನೆರವು ಸ್ವೀಕೃತಿಗೆ ಎಇಇ ಬಾಸ್ಕರ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದು, ಅವರೊಂದಿಗೆ ಸಂತೋಷ್, ದತ್ತಾತ್ರಿ, ಚೇತನ್, ಹಾಲೇಶ್ ಹಗಲುರಾತ್ರಿ ದಾನಿಗಳು ನೀಡಿದ ನೆರವನ್ನು ಸ್ವೀಕರಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಪ್ರತಿಯೊಬ್ಬ ದಾನಿಯೂ ನೀಡಿದ ನೆರವಿಗೆ ಸ್ವೀಕೃತಿ ಪತ್ರವನ್ನು ನೀಡಿ ಪಡೆದುಕೊಳ್ಳಲಾಗುತ್ತಿದೆ. 

ಇದು ಜಿಲ್ಲಾಡಳಿತದಿಂದ ನಡೆಯುತ್ತಿದ್ದರೇ ಇನ್ನೂ ಅನೇಕರು ಗ್ರಾಮದ ಮುಖ್ಯಸ್ಥರು ಸಂಘಸಂಸ್ಥೆಗಳು ದಾನಿಗಳು ನೇರವಾಗಿ ನೆರೆಪೀಡಿತ, ಗುಡ್ಡಕುಸಿತದಿಂದ ನಿರಾಶ್ರಿತರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಮಳೆಯಿಂದ ಎಲ್ಲವನ್ನು ಕಳೆದುಕೊಂಡ ಮಲೆನಾಡಿನ ಜನತೆಗೆ ಭರಪೂರ ನೆರವಿನ ಹಸ್ತ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

ಜಿಲ್ಲೆ ಹಾಗೂ ನೆರೆಯ ಜಿಲ್ಲೆಯಿಂದ ಅಪಾರ ಪ್ರಮಾಣದಲ್ಲಿ ಅಗತ್ಯ ವಸ್ತುಗಳ ನೆರವು ಬರುತ್ತಿದೆ. ಅದನ್ನು ಸ್ವೀಕರಿಸಿ ನಿರಾಶ್ರಿತರ ಕೇಂದ್ರಗಳಿಗೆ ಕಳಿಸಿಕೊಡಲಾಗುತ್ತಿದೆ. ಆಗಸ್ಟ್ 14ರ ಮಧ್ಯರಾತ್ರಿ ಉಡುಪಿಯಿಂದ ಒಂದು ಲಾರಿ ಅಗತ್ಯ ವಸ್ತುಗಳನ್ನು ಕಳಿಸಿಕೊಡಲಾಗಿತ್ತು. ಮಧ್ಯರಾತ್ರಿಯೇ ಅದನ್ನು ಸ್ವೀಕರಿಸಿದ್ದೇವೆ. ಹಗಲುರಾತ್ರಿಯೆನ್ನದೆ ನಮ್ಮ ತಂಡ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿದೆ. 

-ಬಾಸ್ಕರ್, ನೋಡಲ್ ಅಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News