ಜನರ ಭವಿಷ್ಯ ರೂಪಿಸುವಂತಹ ಬರವಣಿಗೆಗಳ ಅಗತ್ಯವಿದೆ: ಬಿ.ಟಿ.ಲಲಿತಾ ನಾಯ್ಕ್

Update: 2019-08-17 17:47 GMT

ಕೋಲಾರ, ಆ.17: ಜನರ ಭವಿಷ್ಯವನ್ನು ರೂಪಿಸುವಂತಹ ಬರವಣಿಗೆಗಳು, ಅನುಭವಗಳನ್ನು ರಚಿಸಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ರಾಜ್ಯ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಮ್ಮಿಕೊಂಡಿದ್ದ ದಲಿತ, ರೈತ ಮತ್ತು ಸ್ತ್ರೀ ಕುರಿತು ನಡೆದ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬುಡಗಟ್ಟು ಸಮಾಜದ ಜತೆಗೆ ಇತರೆ ಸಮಾಜದ ಹೆಣ್ಣು ಮಕ್ಕಳು ನೋವುಗಳನ್ನು ಅನುಭವಿಸುತ್ತಿದ್ದಾರೆ. ಪುರುಷ ಶ್ರಮ ಜೀವಿಯಾದರೂ ಮಹಿಳೆ ಸಾಮರ್ಥ್ಯದ ಪಾತ್ರವಹಿಸುತ್ತಾಳೆ’ ಎಂದು ಹೇಳಿದರು. 

ಬುಡಕಟ್ಟು ಜನಾಂಗದವರು ಜಾತಿಗಳಾಗಿ ನಾಗರಿಕತೆಯಿಲ್ಲದೆ ವಿಕೃತ ಮಾರ್ಗದಲ್ಲಿದ್ದು, ಬಂಡಾಯ ಸಾಹಿತ್ಯದ ಮೂಲಕ ಹೊಸ ಅಯಾಮವನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಸತ್ಯವನ್ನು ಕಂಡುಕೊಳ್ಳುವ ದಿಕ್ಕಿನಲ್ಲಿ ಶಿಕ್ಷಣ ಕೊಡಬೇಕಾಗಿದೆ. ಹೊಸ ಅಲೋಚನೆಗಳ ಹಾದಿ ತಪ್ಪದೆ ಇರುವ ಶಿಕ್ಷಣ ಪ್ರಸ್ತುತ ಬುಡಕಟ್ಟು ಜನಾಂಗಕ್ಕೆ ಅವಶ್ಯಕತೆಯಿದ್ದು, ಆರ್ಥಿಕತೆ ಮತ್ತು ಶಿಕ್ಷಣ ಬಂದಾಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.

‘ಸಿನಿಮಾ ನಟರು ಮೃತಪಟ್ಟರೆ ಸರ್ಕಾರಿ ಜಾಗದಲ್ಲಿ ಸ್ಮಾರಕ್ಕೆ ನಿರ್ಮಾಣ ಮಾಡುವ ಬದಲು ಆ ಜಾಗವನ್ನು ನಿರ್ಗತಿಕರಿಗೆ ವಸತಿ, ನಿವೇಶನ ಕಲ್ಪಿಸಲು ಮೀಸಲಿಡಬೇಕು. ಇದಕ್ಕೆ ಸರ್ಕಾರಗಳು ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಸಾಹಿತಿ ಡಾ.ಸಮತಾ ಬಿ.ದೇಶಮಾನೆ ‘ದಲಿತ ಮಹಿಳಾ ಸಾಹಿತ್ಯ’ ವಿಷಯ ಮಂಡಿಸಿ ಮಾತನಾಡಿ, ದಲಿತ ಸಾಹಿತ್ಯದಲ್ಲಿ ಕೇವಲ ಸೇಡು, ನೋವು, ಕಣ್ಣೀರಿನ ಕಥೆಗಳು ಮಾತ್ರ ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಅಂಬೇಡ್ಕರ್ ಅವರ ಬರಹ, ಭಾಷಣ ದಲಿತ ಮಹಿಳೆಯರ ಮಾನಸಿಕ ನೂರಾರು ವಿಧ್ವತ್ ಪೂರ್ಣವಾದ ಪ್ರಗತಿಯ ಪ್ರಖರತೆಯ, ಪ್ರಜ್ವಲತೆಯ ಚಿಂತನೆಗಳ ಸಾಹಿತ್ಯ ರಚಿಸಲು ಪ್ರೇರಣೆಯಾಯಿತು’ ಎಂದರು.

ದಲಿತರು ಮತ್ತು ದಲಿತೇತರರು ದಲಿತ ಪ್ರಜ್ಞೆಯನ್ನು ಒಳಗುಮಾಡಿಕೊಂಡು ರಚಿಸಿದ ಸಾಹಿತ್ಯವನ್ನು ದಲಿತ ಸಾಹಿತ್ಯವೆಂದು ವ್ಯಾಖ್ಯಾನಿಸಬಹುದಾಗಿದೆ. ಕನ್ನಡ ಸಾಹಿತ್ಯ ಮತ್ತು ಈ ನೆಲದ ಚಳವಳಿಗಳು ಪರಸ್ಪರ ಒಂದರೊಳಗೊಂದು ತೆಕ್ಕೆ ಹಾಕಿಕೊಂಡಿದೆ. ಅದರ ನಡಿಗೆಯು ವಚನ ಸಾಹಿತ್ಯ ಅಥವಾ ಚಳವಳಿಯ ಕಾಲಘಟ್ಟದಿಂದ ಇಲ್ಲಿಯವರೆಗೆ ಅವಿಚ್ಛಿನ್ನವಾಗಿ ಸಾಗಿ ಬಂದಿದೆ’ ಎಂದು ವಿವರಿಸಿದರು.

ಸಾಹಿತಿ ಬಿ.ಯು.ಸುಮಾ ಸ್ತ್ರೀ ಬಿಕ್ಕಟ್ಟು ಕುರಿತು ವಿಷಯ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News