ದೇಶಾದ್ಯಂತ ಮಳೆಗೆ ಸಾವಿರಕ್ಕೂ ಹೆಚ್ಚು ಮಂದಿ ಬಲಿ

Update: 2019-08-18 03:57 GMT

ಹೊಸದಿಲ್ಲಿ: ದೇಶಾದ್ಯಂತ ಮಳೆ ಅಬ್ಬರಕ್ಕೆ ಈ ಮುಂಗಾರಿನಲ್ಲಿ ಈಗಾಗಲೇ 1058 ಮಂದಿ ಬಲಿಯಾಗಿದ್ದಾರೆ. ಕಳೆದ ವರ್ಷ ಮಳೆ ಸಂಬಂಧಿ ಅನಾಹುತಗಳಿಂದ 1211 ಮಂದಿ ಸಾವನ್ನಪ್ಪಿದ್ದರು. ಕೇರಳದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 245 ಮಂದಿ ಜೀವ ಕಳೆದುಕೊಂಡಿದ್ದಾರೆ.

ಈ ಬಾರಿ ಕೂಡಾ ಕೇರಳದಲ್ಲಿ ಧಾರಾಕಾರ ಮಳೆಯಿಂದಾಗಿ ಅಧಿಕಾರಿಗಳು ಅಣೆಕಟ್ಟಿನ ನೀರನ್ನು ಬಿಡುವುದು ಅನಿವಾರ್ಯ ವಾದದ್ದು ಹೆಚ್ಚಿನ ಜೀವಹಾನಿಗೆ ಕಾರಣವಾಗಿದೆ. ಮಳೆಯಿಂದಾಗುವ ಜೀವಹಾನಿ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, 2016ರಲ್ಲಿ 936 ಮಂದಿ, 2017ರಲ್ಲಿ 1200 ಮಂದಿ ಸಾವನ್ನಪ್ಪಿದ್ದರು. ದೇಶಾದ್ಯಂತ ಈ ಬಾರಿ ಮಳೆಯ ಹಾನಿ ಮತ್ತಷ್ಟು ಹೆಚ್ಚಿದೆ.

ಮಹಾರಾಷ್ಟ್ರ (245) ಹಾಗೂ ಕೇರಳ (155) ಬಳಿಕ ಪಶ್ಚಿಮ ಬಂಗಾಳ (154)ದಲ್ಲಿ ಅತಿಹೆಚ್ಚು ಸಾವು ಸಂಭವಿಸಿದೆ. ಬಿಹಾರ (130), ಗುಜರಾತ್ (107) ಮತ್ತು ಅಸ್ಸಾಂ ಹಾಗೂ ಕರ್ನಾಟಕ (ತಲಾ 94) ನಂತರದ ಸ್ಥಾನಗಳಲ್ಲಿವೆ ಎಂದು ಗೃಹ ಸಚಿವಾಲಯ ಪ್ರಕಟಿಸಿದೆ.

ಇದುವರೆಗೆ ಕೇಂದ್ರ ಹಾಗೂ ರಾಜ್ಯದ ನೆರೆ ಪರಿಹಾರ ಅಧಿಕಾರಿಗಳು 18 ಲಕ್ಷ ಮಂದಿಯನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಿದ್ದಾರೆ. ಒಂಬತ್ತು ರಾಜ್ಯಗಳ 152 ಜಿಲ್ಲೆಗಳಲ್ಲಿ 7800 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರ 101 ಎನ್‌ಡಿಆರ್‌ಎಫ್ ತಂಡಗಳನ್ನು ನಿಯೋಜಿಸಿದೆ. ಸೇನೆ, ವಾಯುಪಡೆ ಮತ್ತು ನೌಕಾಪಡೆಯ 57 ತಂಡಗಳು ಆರು ಹೆಲಿಕಾಪ್ಟರ್‌ಗಳ ಮೂಲಕ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News