ಎಐಐಎಂಎಸ್‌ನಲ್ಲಿ ಬೆಂಕಿ ಆಕಸ್ಮಿಕ

Update: 2019-08-18 06:23 GMT
ಫೋಟೊ : ANI

ಹೊಸದಿಲ್ಲಿ: ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್)ನ ಎರಡನೇ ಮಹಡಿಯಲ್ಲಿ ಶನಿವಾರ ಸಂಜೆ ಭೀಕರ ಅಗ್ನಿದುರಂತ ಸಂಭವಿಸಿದೆ. ಆಸ್ಪತ್ರೆಯ ಬೋಧನಾ ಬ್ಲಾಕ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿತು ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಹೇಳಿದ್ದಾರೆ.

ದುರಂತದಲ್ಲಿ ಯಾವುದೇ ಸಾವುನೋವು ಸಂಭವಿಸಿಲ್ಲ ಎಂದು ಎಐಐಎಂಎಸ್ ಸ್ಪಷ್ಟಪಡಿಸಿದೆ. ಶಾರ್ಟ್‌ಸರ್ಕ್ಯೂಟ್‌ನಿಂದ ಎರಡನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಎಸಿ ಕಂಪ್ರೆಷರ್ ಸ್ಫೋಟಗೊಂಡಾಗ ಅದು ಐದನೇ ಮಹಡಿಗೂ ಹಬ್ಬಿತು ಎಂದು ತಿಳಿದುಬಂದಿದೆ.

ಬೆಂಕಿ ಆಕಸ್ಮಿಕ ಸಂಭವಿಸಿದ ಪ್ರದೇಶ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಪ್ರದೇಶವಲ್ಲದಿದ್ದರೂ, ಹಲವು ವಾರ್ಡ್ ಹಾಗೂ ಕಾರಿಡಾರ್‌ಗಳಲ್ಲಿ ದಟ್ಟ ಹೊಗೆ ವ್ಯಾಪಿಸಿದ ಕಾರಣದಿಂದ ಅಕ್ಕಪಕ್ಕದ ವಾರ್ಡ್‌ಗಳಿಂದ ರೋಗಿಗಳನ್ನು ಸ್ಥಳಾಂತರಿಸಲಾಯಿತು. ಈ ಬೆಂಕಿ ಐದನೇ ಮಹಡಿಯ ಮೂರು- ನಾಲ್ಕು ಕೊಠಡಿಗಳಿಗಷ್ಟೇ ಸೀಮಿತವಾಗಿತ್ತು ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ. ಎನ್‌ಡಿಆರ್‌ಎಫ್ ತಂಡಗಳು ನೆರವಿಗೆ ಧಾವಿಸಿದವು.

ಅಗ್ನಿಶಮನ ಕಾರ್ಯ ರವಿವಾರ ಮುಂಜಾನೆಯವರೆಗೂ ಮುಂದುವರಿದಿದೆ. ಕಟ್ಟಡದ ಟೆರೇಸ್ ತಲುಪಲು ಸ್ಕೈಲಿಫ್ಟ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಪಕ್ಕದ ಎಬಿ ವಿಂಗ್‌ನಲ್ಲಿದ್ದ ರೋಗಿಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿದೆ.

ಸೂಕ್ಷ್ಮಜೀವಶಾಸ್ತ್ರ ವಿಭಾಗದ ವೈರಾಲಜಿ ಘಟಕದಲ್ಲಿ ಶಾರ್ಟ್‌ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿತು ಎಂದು ಮೂಲಗಳು ಹೇಳಿವೆ. ಪರೀಕ್ಷೆಗಾಗಿ ಇರಿಸಿದ್ದ ಹಲವು ಜೀವಶಾಸ್ತ್ರೀಯ ಮಾದರಿಗಳು ನಾಶವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News