370ನೇ ವಿಧಿ ರದ್ದತಿ ಪ್ರಶ್ನಿಸಿ ಸುಪ್ರೀಂ ಕದ ತಟ್ಟಿದ ಮಾಜಿ ಐಎಎಸ್ ಅಧಿಕಾರಿಗಳು, ಸೇನಾಧಿಕಾರಿಗಳು

Update: 2019-08-18 17:35 GMT

ಹೊಸದಿಲ್ಲಿ, ಆ. 18: ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ 370 ರದ್ದುಗೊಳಿಸಿದ ಹಾಗೂ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ವಿಭಜಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಜಮ್ಮುಕಾಶ್ಮೀರದಲ್ಲಿ ಸೇವೆ ಸಲ್ಲಿಸಿದ ಮಾಜಿ ರಕ್ಷಣಾ ಸಿಬ್ಬಂದಿ ಹಾಗೂ ಅಧಿಕಾರಿಗಳ ಗುಂಪು ಶನಿವಾರ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದೆ.

 ಕೇಂದ್ರ ಗೃಹ ಸಚಿವಾಲಯದಿಂದ 2011ರಲ್ಲಿ ನಿವೃತ್ತರಾದ ಗೃಹ ಸಚಿವಾಲಯದ ಜಮ್ಮುಕಾಶ್ಮೀರದ ಸಂಧಾನಕಾರರ ಗುಂಪಿನ ಮಾಜಿ ಸದಸ್ಯ ಪ್ರೊ. ರಾಧಾ ಕುಮಾರ್, ಜಮ್ಮುಕಾಶ್ಮೀರ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಹಿಂದಲ್ ಹೈದರ್ ತೈಯಾಬಜಿ, ನಿವೃತ್ತ ಏಯರ್ ವೈಸ್ ಮಾರ್ಷಲ್ ಕಪಿಲ್ ಕಾಕ್, ನಿವೃತ್ತ ಮೇಜರ್ ಜನರಲ್ ಅಶೋಕ್ ಕುಮಾರ್ ಮೆಹ್ತಾ, ಪಂಜಾಬ್ ಕೇಡರ್‌ನ ಮಾಜಿ ಐಎಎಸ್ ಅಧಿಕಾರಿ ಅಮಿತಾಭ್ ಪಂದೆ ಹಾಗೂ ಕೇರಳ ಕೇಡರ್‌ನ ಮಾಜಿ ಐಎಐಸ್ ಅಧಿಕಾರಿ ಗೋಪಾಲ ಪಿಳ್ಳೈ ಈ ಹೊಸ ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದಾರೆ.

ಆಗಸ್ಟ್ 5ರಂದು ರಾಷ್ಟ್ರಪತಿ ನೀಡಿದ ಆದೇಶ ‘ಅಸಾಂವಿಧಾನಿಕ, ಅಸಿಂಧು ಹಾಗೂ ಕಾರ್ಯರೂಪಕ್ಕೆ ತರಲು ಅನರ್ಹ’ ಎಂದು ಘೋಷಿಸುವಂತೆ ನಿರ್ದೇಶಿಸಲು ಮನವಿ ಕೋರಿದೆ.

ಈ ಕಾಯ್ದೆಯನ್ನು ಸಂವಿಧಾನಾತ್ಮಕಗೊಳಿಸುವ ಪ್ರಯತ್ನ ಸ್ವೀಕಾರಾರ್ಹವಲ್ಲ. 367ನೇ ವಿಧಿಗೆ ತಿದ್ದುಪಡಿ ತರುವ ಮೂಲಕ ಜಮ್ಮು ಕಾಶ್ಮೀರದ ಸಂವಿಧಾನವನ್ನು ರದ್ದುಗೊಳಿಸುವ ಮತ್ತು 370ನೆ ವಿಧಿಯ ಪರಿಣಾಮವನ್ನು ಸಂಪೂರ್ಣ ನಿಷ್ಪಲಗೊಳಿಸುವ 370 (3) ವಿಧಿಯನ್ನಾಗಿ ಬದಲಾಯಿಸಲು ಯತ್ನಿಸಲಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

  ಜಮ್ಮು ಹಾಗೂ ಕಾಶ್ಮೀರವನ್ನು ರಾಜ್ಯದ ಸ್ಥಾನದಿಂದ ಕೇಂದ್ರಾಡಳಿತ ಪ್ರದೇಶದ ಸ್ಥಾನಕ್ಕೆ ಇಳಿಸುವ ಮೂಲಕ ಹಾಗೂ ಇದರ ಒಂದು ಭಾಗವನ್ನು ಲಡಾಖ್ ಎಂಬ ಪ್ರತ್ಯೇಕವಾಗಿಸುವ ಮೂಲಕ ರಾಜ್ಯವನ್ನು ಛಿದ್ರಗೊಳಿಸಲಾಗಿದೆ. ಅಲ್ಲದೆ, ಈ ಸಂಪೂರ್ಣ ಕಸರತ್ತಿನಲ್ಲಿ ಜಮ್ಮು ಹಾಗೂ ಕಾಶ್ಮೀರದ ಜನರು ಪಾಲ್ಗೊಳ್ಳದಂತೆ ದೂರ ಇರಿಸಲಾಗಿದೆ. ಇದು ಈ ಹಿಂದಿನ ಜಮ್ಮು ಹಾಗೂ ಕಾಶ್ಮೀರದ ಸಮಗ್ರತೆಗೆ ಧಕ್ಕೆ ಉಂಟು ಮಾಡಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

370ನೇ ವಿಧಿ ರದ್ದು ಪ್ರಶ್ನಿಸಿ ಹಾಗೂ ಜಮ್ಮುಕಾಶ್ಮೀರದಲ್ಲಿ ನಿರ್ಬಂಧ ಹಿಂಪಡೆಯುವಂತೆ ಕೋರಿ ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ 12ಕ್ಕೂ ಅಧಿಕ ಮನವಿ ಸಲ್ಲಿಸಲಾಗಿದೆ. ಈ ಮನವಿಗಳನ್ನು ನ್ಯಾಯವಾದಿ ಎಂ.ಎಲ್ ಶರ್ಮಾ, ಕಾಂಗ್ರೆಸ್ ಕಾರ್ಯಕರ್ತ ತಹಸಿನ ಪೂನವಾಲಾ, ನ್ಯಾಯವಾದಿ ಶಕೀರ್ ಶಬೀರ್, ನ್ಯಾಶನಲ್ ಕಾನ್ಫರೆನ್ಸ್‌ನ ಸಂಸದರಾದ ಮುಹಮ್ಮದ್ ಅಕ್ಬರ್ ಲೋನೆ, ಹಸ್ನೈನ್ ಮಸೂದಿ, ‘ಕಾಶ್ಮೀರ ಟೈಮ್ಸ್‌’ನ ಕಾರ್ಯನಿರ್ವಹಣಾ ಸಂಪಾದಕಿ ಅನುರಾಧಾ ಭಾಸಿನ್ ಈ ಮನವಿಗಳನ್ನು ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News