‘ಆರ್ಥಿಕ ಸುಧಾರಣೆ, ತಂತ್ರಜ್ಞಾನ ಕ್ರಾಂತಿಯ ಶ್ರೇಯ ಮನಮೋಹನ್ ಸಿಂಗ್, ಚಿದಂಬರಂ, ನರಸಿಂಹ ರಾವ್ ಗೆ ಸಲ್ಲಬೇಕು’

Update: 2019-08-18 10:18 GMT

ಮುಂಬೈ, ಆ.18: ದೇಶದಲ್ಲಿ ಕೈಗೊಳ್ಳಲಾದ ಆರ್ಥಿಕ ಸುಧಾರಣೆಗಳು ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿನ ಅಭೂತಪೂರ್ವ ಸಾಧನೆಗಳ ಶ್ರೇಯ ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಮಾಜಿ ವಿತ್ತ ಸಚಿವ ಪಿ ಚಿದಂಬರಂ ಹಾಗು ಪಿ.ವಿ. ನರಸಿಂಹ ರಾವ್ ಅವರಿಗೆ ಸಲ್ಲುತ್ತದೆ ಎಂದು ಇನ್ಫೋಸಿಸ್ ಸಹ-ಸ್ಥಾಪಕ ನಾರಾಯಣ ಮೂರ್ತಿ ಹೇಳಿದ್ದಾರೆ.

ಪ್ರತಿಷ್ಠಿತ ಸೈಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ನಾಯಕತ್ವ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಸಿಂಗ್ ಹಾಗೂ ಚಿದಂಬರಂ ಹೊರತಾಗಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹ ರಾವ್ ಹಾಗೂ ಮೋಂಟೆಕ್ ಸಿಂಗ್ ಅಹ್ಲುವಾಲಿಯಾ ಅವರನ್ನೂ ಉಲ್ಲೇಖಿಸಿ ಈ ನಾಲ್ಕು ಮಂದಿ ಭಾರತದ ಆರ್ಥಿಕ ಸುಧಾರಣೆಯ  ಶಿಲ್ಪಿಗಳಾಗಿದ್ದಾರೆ ಎಂದರು.

``ನಾವು 45 ವರ್ಷಗಳಲ್ಲಿ ಸಾಧಿಸಲಾಗದೇ ಇದ್ದುದನ್ನು ಅವರು ಕೇವಲ ಒಂದೇ ವಾರದಲ್ಲಿ ಸಾಧಿಸಿ ತೋರಿಸಿದರು'' ಎಂದು ನಾರಾಯಣಮೂರ್ತಿ ಹೇಳಿದರು.

“ನಮ್ಮ ಕಂಪೆನಿ 80ರ ದಶಕದಲ್ಲಿ ಸ್ಥಾಪನೆಗೊಂಡಾಗ ದೇಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯಾಗಿರಲಿಲ್ಲ. ಒಂದು ಟೆಲಿಫೋನ್ ಸಂಪರ್ಕ ಪಡೆಯಲು ನಮಗೆ ಏಳು ವರ್ಷ ಬೇಕಾಯಿತು.  ಆಗ ಅತ್ಯಂತ ಹೆಚ್ಚಿನ ಆದ್ಯತೆ ಸರಕಾರಿ ಅಧಿಕಾರಿಗಳಿಗೆ  ಹಾಗೂ ನಂತರದ ಆದ್ಯತೆ ನಿವೃತ್ತ ಸರಕಾರಿ ಅಧಿಕಾರಿಗಳಿಗೆ ನೀಡಲಾಗುತ್ತಿತ್ತು'' ಎಂದು ಅವರು ವಿವರಿಸಿದ್ದಾರೆ.

``ಆ ದಿನಗಳಲ್ಲಿ ಒಂದು ಲಕ್ಷ ಡಾಲರ್ ಮೌಲ್ಯದ ಕಂಪ್ಯೂಟರ್ ಆಮದುಗೊಳಿಸಲು ಪರವಾನಿಗೆ ಪಡೆಯಲು ದಿಲ್ಲಿಗೆ ಮೂರು ವರ್ಷಗಳ ಅವಧಿಯಲ್ಲಿ ನಾವು 50 ಬಾರಿ ಭೇಟಿ ನೀಡಬೇಕಿತ್ತು,'' ಎಂದು ಅವರು ವಿವರಿಸಿದ್ದಾರೆ. “ವಿದೇಶಕ್ಕೆ ಹೋಗಬೇಕೆಂದಿದ್ದರೆ  ರಿಸರ್ವ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿ ಮೂರು ವಾರ  ಕಾದ ನಂತರ ಉತ್ತರ ದೊರೆಯುತ್ತಿತ್ತು'' ಎಂದು ವಿವರಿಸಿದ ಅವರು, “ಮುಂದೆ ಮಹತ್ತರ ಬದಲಾವಣೆ ಬಂತು, ಅದಕ್ಕೆ ಪಿ ವಿ ನರಸಿಂಹ ರಾವ್, ಡಾ ಮನಮೋಹನ್ ಸಿಂಗ್, ಮೋಂಟೆಕ್ ಸಿಂಗ್  ಅಹ್ಲುವಾಲಿಯಾ ಹಾಗೂ ಪಿ ಚಿದಂಬರಂ ಕಾರಣ'' ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News