ವಿರಾಜಪೇಟೆ: ಬೆಟ್ಟ ಕುಸಿದ ಸ್ಥಳದಲ್ಲಿ ಮತ್ತೊಂದು ಶವ ಪತ್ತೆ

Update: 2019-08-18 12:35 GMT

ಮಡಿಕೇರಿ ಆ.16: ಮಹಾಮಳೆಯಿಂದ ಆ.9 ರಂದು ವಿರಾಜಪೇಟೆಯ ತೊರ ಗ್ರಾಮದಲ್ಲಿ ಬೆಟ್ಟ ಕುಸಿದು ನಾಪತ್ತೆಯಾಗಿದ್ದವರ ಪೈಕಿ ಶಂಕರ (57) ಎಂಬುವವರ ಮೃತದೇಹ ಭಾನುವಾರ ಪತ್ತೆಯಾಗಿದೆ. ಇದರೊಂದಿಗೆ ಇಲ್ಲಿಯವರೆಗೆ ಒಟ್ಟು ಐದು ಮೃತದೇಹಗಳು ದೊರೆತಂತಾಗಿದ್ದು, ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಜೀವ ಕಳೆದುಕೊಂಡವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.

ಧಾರಾಕಾರ ಮಳೆಗೆ ತೋರ ಗ್ರಾಮದ ಮಣಿಪಾರೆ ಬೆಟ್ಟ ಕುಸಿದ ಪರಿಣಾಮ ಒಟ್ಟು ಹತ್ತು ಮಂದಿ ನಾಪತ್ತೆಯಾಗಿದ್ದರು. ಈ ಪೈಕಿ ಮಮತಾ ಹಾಗೂ ಲಿಖಿತಾ ಎಂಬ ತಾಯಿ ಮಗಳ ಮೃತದೇಹವನ್ನು ಅಂದೇ ಮಣ್ಣಿನಡಿಯಿಂದ ಹೊರ ತೆಗೆಯಲಾಗಿತ್ತು. ಆನಂತರ ಹವಾಮಾನ ವೈಪರೀತ್ಯದಿಂದ ಹಾಗೂ ಮಣ್ಣು ಕುಸಿದ ಜಾಗ ಸಂಪೂರ್ಣ ಕೆಸರುಮಯವಾಗಿದ್ದ ಪರಿಣಾಮವಾಗಿ ನಾಪತ್ತೆಯಾಗಿದ್ದ 8 ಮಂದಿಯ ಶೋಧ ಕಾರ್ಯಕ್ಕೆ ತೀವ್ರ ಆಡಚಣೆಯಾಗಿತ್ತು.

ಮಳೆಯ ತೀವ್ರತೆ ಕಡಿಮೆಯಾದ ನಂತರ ರಕ್ಷಣಾ ತಂಡಗಳು ನಿರಂತರ ಪ್ರಯತ್ನ ಹಾಗೂ ಸಾಹಸದ ಮೂಲಕ ಸ್ಥಳಕ್ಕೆ ತೆರಳಿ ಮಣ್ಣಿನಡಿ ಸಿಲುಕಿದ್ದ ಅನಸೂಯ ಎಂಬುವವರ ಮೃತದೇಹವನ್ನು ಕಳೆದ ಸೋಮವಾರ ಹೊರತೆಗೆದಿದ್ದರೆ, ಆ.14ರಂದು ಅಪ್ಪು ಎಂಬುವವರ ಮೃತದೇಹ ಪತ್ತೆಯಾಗಿತ್ತು. ಉಳಿದ ಶವಗಳಿಗಾಗಿ ಸತತವಾಗಿ 5-6 ಹಿಟಾಚಿ ಯಂತ್ರಗಳನ್ನು ಬಳಸಿ ಕೆಸರುಮಯವಾಗಿದ್ದ ಮಣ್ಣನ್ನು ಸರಿಸಿ ನಾಪಪತ್ತೆಯಾದವರಿಗಾಗಿ ಶೋಧ ಮುಂದುವರಿಸಲಾಗಿತ್ತು. ಕಳೆದ ಮೂರು ದಿನಗಳಲ್ಲಿ ಯಾವುದೇ ಪ್ರಗತಿ ಸಾಧ್ಯವಾಗಿರಲಿಲ್ಲ.

ಆದರೆ ಭಾನುವಾರ ನಡೆದ ಕಾರ್ಯಾಚರಣೆಯ ಸಂದರ್ಭ ಶಂಕರ ಎಂಬವರ ಮೃತದೇಹ ಪತ್ತೆಯಾಗಿದ್ದು, ಅದನ್ನು ಹೊರತೆಗೆಯುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಶಂಕರ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದು, ಪ್ರಸಕ್ತ ತೋರ ಗ್ರಾಮದ ಕೀತಿಯಂಡ ರಾಮಕೃಷ್ಣ ಅವರ ಲೈನ್‍ಮನೆಯಲ್ಲಿ ವಾಸವಾಗಿದ್ದರು.

ಇನ್ನೂ ಐವರು ಪತ್ತೆಯಾಗಬೇಕಾಗಿದ್ದು, ಶೋಧ ಕಾರ್ಯ ತೀವ್ರಗೊಂಡಿದೆ. ತೋರ ಗ್ರಾಮದ ಪ್ರಭು ಅವರ ತಾಯಿ ದೇವಕಿ(65), ಮಕ್ಕಳಾದ ಅಮೃತಾ(13) ಹಾಗೂ ಆದಿತ್ಯ (10) ಮತ್ತು ಹರೀಶ್ ಎಂಬವರ ಕುಟುಂಬದ ಸದಸ್ಯರಾದ ಲೀಲಾ ಹಾಗೂ ವೀಣಾ ಎಂಬವರು ಪತ್ತೆಯಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News