4 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮನೆಗೆ ತಲುಪಲು ನೆರವಾದ ‘ಗೂಗಲ್ ಮ್ಯಾಪ್’

Update: 2019-08-18 13:21 GMT

ಹೊಸದಿಲ್ಲಿ, ಆ.18: ನಾಲ್ಕು ತಿಂಗಳುಗಳ ಹಿಂದೆ ನಾಪತ್ತೆಯಾಗಿದ್ದ 12 ವರ್ಷದ ಬಾಲಕಿಯೊಬ್ಬಳು ಕೊನೆಗೂ ತನ್ನ ತಂದೆಯ ಬಳಿ ಸೇರಲು ಗೂಗಲ್ ಮ್ಯಾಪ್ ಸಹಾಯ ಮಾಡಿದೆ. ಈ ಘಟನೆ ದಿಲ್ಲಿಯಲ್ಲಿ ನಡೆದಿದೆ.

ಮಾರ್ಚ್ 21ರಂದು ಬಾಲಕಿ ಇಲ್ಲಿನ ಕೃತಿ ನಗರ್ ಬಳಿ ಆಟೋದಲ್ಲಿ ತೆರಳಿದ್ದಳು. ಮೆಟ್ರೋ ಸ್ಟೇಶನ್ ಬಳಿ ಬಾಲಕಿ ಇಳಿಯದೇ ಇದ್ದಾಗ ರಿಕ್ಷಾ ಚಾಲಕ ‘ಎಲ್ಲಿಗೆ ಹೋಗಬೇಕು’ ಎಂದು ಕೇಳಿದ್ದ. ಆದರೆ ಆಕೆ ಯಾವುದೇ ಉತ್ತರ ನೀಡಿರಲಿಲ್ಲ. ಕೂಡಲೇ ಆಟೋ ಚಾಲಕ ಆಕೆಯನ್ನು ಕೃತಿ ನಗರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದ.

ತನಿಖೆ ವೇಳೆ ಬಾಲಕಿ ತನ್ನ ಮನೆಯ ವಿಳಾಸ ತಿಳಿಸಿಲ್ಲ. ಆದರೆ ತಾನು ಖುರ್ಜಾ ಗ್ರಾಮದವಳಾಗಿದ್ದು, ತಂದೆಯ ಹೆಸರು ಜೀತನ್ ಎಂದು ತಿಳಿಸಿದ್ದಳು. ಪೊಲೀಸರು ‘ಖುರ್ಜಾ’ ಹೆಸರಿನ ಸಾಮ್ಯತೆ ಇರುವ ಖಜುರಿ ಖಾಸ್ ಮತ್ತು ಖುರೇಜಿಯಲ್ಲಿ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ನಾಪತ್ತೆ ಪ್ರಕರಣಗಳು ದಾಖಲಾಗಿರಲಿಲ್ಲ.

ಬಾಲಕಿ ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ. ನಂತರ ಬಾಲಕಿಯನ್ನು ಉತ್ತರ ಪ್ರದೇಶದ ಖುರ್ಜಾ ಗ್ರಾಮಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿಯೂ ಆಕೆಯ ಕುಟುಂಬದ ಬಗ್ಗೆ ಯಾವುದೇ ಮಾಹಿತಿ ಲಭಿಸಿರಲಿಲ್ಲ. ಆಕೆಯ ಗ್ರಾಮದ ಸಮೀಪದ ಊರುಗಳ ಬಗ್ಗೆ ಪೊಲೀಸರು ಕೇಳಿದಾಗ ಆಕೆ, “ಸೋನ್ ಬರ್ಸಾ ತನ್ನ ತಾಯಿಯ ಊರು ಮತ್ತು ನನ್ನ ಗ್ರಾಮದ ಹತ್ತಿರ ಸಕಾಪರ್ ಎಂಬ ಊರಿದೆ ಎಂದಿದ್ದಳು. ನಂತರ ಪೊಲೀಸರು ಗೂಗಲ್ ಮ್ಯಾಪ್ ಸಹಾಯದಿಂದ ಉತ್ತರ ಪ್ರದೇಶದ ಸಿದ್ಧಾರ್ಥ್ ನಗರ ಜಿಲ್ಲೆಯಲ್ಲಿ ಸಕಾಪರ್, ಸೋನ್ ಬರ್ಸಾ ಮತ್ತು ಕುರ್ಜಾ ಎಂಬ ಊರುಗಳಿವೆ ಎನ್ನುವುದನ್ನು ಕಂಡುಕೊಂಡರು.

ನಂತರ ಅಲ್ಲಿಗೆ ತೆರಳಿ ಬಾಲಕಿಯನ್ನು ತಂದೆ ಜೀತನ್ ರ ಕೈಗೊಪ್ಪಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News