ಉಯಿಘರ್ ಮುಸ್ಲಿಮರ ಬಂಧನದಲ್ಲಿ ಚೀನಾಕ್ಕೆ ಈಜಿಪ್ಟ್ ನೆರವು: ವರದಿ

Update: 2019-08-18 13:41 GMT

ಕೈರೋ (ಈಜಿಪ್ಟ್), ಆ. 18: ಈಜಿಪ್ಟ್ ಪೊಲೀಸರು ಆ ದೇಶದಲ್ಲಿರುವ ಚೀನಾದ ಉಯಿಘರ್ ಮುಸ್ಲಿಮರನ್ನು ಬಂಧಿಸಿ ವಿಚಾರಣೆಗಾಗಿ ಚೀನಾದ ವಶಕ್ಕೆ ನೀಡುತ್ತಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅಬ್ದುಲ್‌ ಮಲಿಕ್ ಅಬ್ದುಲಝೀಝ್ ಎಂಬ ಉಯಿಘರ್ ವಿದ್ಯಾರ್ಥಿಯನ್ನು ಈಜಿಪ್ಟ್ ಪೊಲೀಸರು ಬಂಧಿಸಿ ಕೈಕೋಳ ತೊಡಿಸಿದರು ಹಾಗೂ ಕಣ್ಣಿಗೆ ಕಟ್ಟಿದ ಬಟ್ಟೆಯನ್ನು ಬಿಚ್ಚಿದಾಗ ಅವರು ಚೀನಾದ ಅಧಿಕಾರಿಗಳ ಎದುರು ನಿಂತಿದ್ದರು.

ಅವರನ್ನು ಅವರ ಸ್ನೇಹಿತರ ಜೊತೆಗೆ ಹಾಡಹಗಲಲ್ಲೇ ಎತ್ತಿಕೊಂಡು ಕೈರೋ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚೀನಾದ ಅಧಿಕಾರಿಗಳು, ಈಜಿಪ್ಟ್‌ನಲ್ಲಿ ನೀವು ಏನು ಮಾಡುತ್ತಿದ್ದೀರಿ ಎಂಬ ಬಗ್ಗೆ ಪ್ರಶ್ನಿಸಿದರು.

‘‘ನನ್ನನ್ನು ಪ್ರಶ್ನಿಸಿದವರು ತಮ್ಮ ಹೆಸರು ಅಥವಾ ತಾವು ಯಾರು ಎನ್ನುವುದನ್ನು ಹೇಳಲೇ ಇಲ್ಲ’’ ಎಂದು 27 ವರ್ಷದ ಅಬ್ದುಲಝೀಝ್ ಹೇಳಿದರು.

‘‘ನೀವು ಭಯೋತ್ಪಾದಕರು ಎಂದು ಚೀನಾ ಸರಕಾರ ಹೇಳುತ್ತಿದೆ ಎಂದು ಈಜಿಪ್ಟ್ ಪೊಲೀಸರು ಹೇಳುತ್ತಾರೆ. ಆದರೆ, ನಾವು ಅಲ್-ಅಝರ್ ವಿದ್ಯಾರ್ಥಿಗಳಷ್ಟೆ ಎಂದು ನಾವು ಹೇಳಿದ್ದೇವೆ’’ ಎಂದು ಅಬ್ದುಲಝೀಝ್ ಹೇಳಿದರು.

ಚೀನಾ ಈಜಿಪ್ಟ್‌ನ ಅತಿ ದೊಡ್ಡ ಹೂಡಿಕೆದಾರರ ಪೈಕಿ ಒಂದಾಗಿದೆ. ಪೂರ್ವ ಕೈರೋದಲ್ಲಿ ನೂತನ ಆಡಳಿತಾತ್ಮಕ ರಾಜಧಾನಿಯೊಂದರ ನಿರ್ಮಾಣ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಅದು ಹಣ ಸುರಿಯುತ್ತಿದೆ. ಉಭಯ ದೇಶಗಳ ನಡುವಿನ ವ್ಯಾಪಾರ ಕಳೆದ ವರ್ಷ 13.8 ಬಿಲಿಯ ಡಾಲರ್ ತಲುಪಿದ್ದು, ಹೊಸ ದಾಖಲೆಯಾಗಿದೆ.

ಹಾಗಾಗಿ, ತನ್ನ ದೇಶದಲ್ಲಿರುವ ಉಯಿಘರ್ ಮುಸ್ಲಿಮರ ಬಂಧನದಲ್ಲಿ ಈಜಿಪ್ಟ್ ಚೀನಾಕೆ ನೆರವು ನೀಡುತ್ತಿದೆ ಎಂದು ಭಾವಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News