ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ ರಾಜ್ಯದ ಸರಕಾರಿ ಶಾಲೆಗಳ ಮಕ್ಕಳ ದಾಖಲಾತಿ !

Update: 2019-08-18 13:46 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಆ.18 : ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳಿಗೆ ದಾಖಲಾಗುವ ಮಕ್ಕಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಅನುದಾನಿತ ಹಾಗೂ ಖಾಸಗಿ ಶಾಲೆಗಳತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.

ರಾಜ್ಯ ಸರಕಾರ ಸರಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪಠ್ಯಪುಸ್ತಕ, ಬಟ್ಟೆ, ಶೂ, ಸಾಕ್ಸ್, ಬಸ್‌ಪಾಸ್, ಸೈಕಲ್ ಹಾಗೂ ಪೌಷ್ಠಿಕ ಆಹಾರ ನೀಡುವ ಉದ್ದೇಶದಿಂದ ಬಿಸಿಯೂಟ, ಬಿಸಿ ಹಾಲು ಸೇರಿದಂತೆ ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರೂ ಮಕ್ಕಳ ದಾಖಲಾತಿ ಸಂಖ್ಯೆ ನಿರಂತರವಾಗಿ ಕುಸಿಯುತ್ತಿದೆ. ರಾಜ್ಯದಲ್ಲಿ ಒಂದನೆ ತರಗತಿಯಿಂದ ಹತ್ತನೆ ತರಗತಿವರೆಗೆ ಕಳೆದ 14 ವರ್ಷಗಳಲ್ಲಿ ಸುಮಾರು ಶೇ.20 ರಷ್ಟು ದಾಖಲಾತಿ ಕುಸಿತ ಕಂಡಿರುವುದು ತಿಳಿದುಬಂದಿದೆ. ಕಳೆದೊಂದು ದಶಕದಲ್ಲಿ ಶಾಲೆಗೆ ಸೇರುವವರ ಸಂಖ್ಯೆ ಅಂದಾಜು 15 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

2009-10 ರಲ್ಲಿ 1 ನೆ ತರಗತಿಗೆ 6.35 ಲಕ್ಷ ಹಾಗೂ 1 ರಿಂದ 10ನೆ ತರಗತಿಗೆ 54.54 ಲಕ್ಷ ಮಕ್ಕಳು ದಾಖಲಾಗಿದ್ದರು. ಆದರೆ, ಈ ಸಾಲಿನಲ್ಲಿ ಒಂದನೆ ತರಗತಿಗೆ ಜುಲೈವರೆಗೂ 3.95 ಲಕ್ಷ ಮಕ್ಕಳು ದಾಖಲಾಗಿದ್ದಾರೆ. 1 ರಿಂದ 10 ನೆ ತರಗತಿವರೆಗೆ 41.15 ಲಕ್ಷಕ್ಕೆ ಕುಸಿತವಾಗಿದೆ ಎಂದು ಅಂಕಿಅಂಶಗಳು ಹೇಳುತ್ತಿವೆ. ಕಳೆದ ವರ್ಷ 1 ನೆ ತರಗತಿಗೆ 4.55 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದರೆ, 1 ರಿಂದ 10 ನೆ ತರಗತಿವರೆಗೆ 43.79 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಖಾಸಗಿ ಸಂಸ್ಥೆಗಳು ಸಿಎಸ್‌ಆರ್ ಅನುದಾನದ ಅಡಿಯಲ್ಲಿ ಮೂಲ ಸೌಕರ್ಯ ಪಡೆದಿರುವ, ಸರಕಾರಿ ಸೌಲಭ್ಯಗಳಿರುವ ಕಡೆಗಳಲ್ಲಿ ಆರ್‌ಟಿಇ ಕಾಯ್ದೆಯಡಿ ಖಾಸಗಿ ಶಾಲೆಗಳಿಗೆ ನೀಡುತ್ತಿದ್ದ ಶೇ.25 ರಷ್ಟು ಸೀಟುಗಳನ್ನು ರದ್ಧುಪಡಿಸಿದ ಹಿನ್ನೆಲೆಯಲ್ಲಿ 10 ಸಾವಿರಕ್ಕೂ ಅಧಿಕ ಶಾಲೆಗಳಲ್ಲಿ ದಾಖಲಾತಿ ಸಂಖ್ಯೆ ಅಧಿಕವಾಗಿದೆ. ಆದರೆ, ಮೂಲಭೂತ ಸೌಲಭ್ಯಗಳಿರದ 20 ಸಾವಿರ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿದಿದೆ.

ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಈ ಬಾರಿ 94 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಪೈಕಿ 8.5 ಲಕ್ಷ ವಿದ್ಯಾರ್ಥಿಗಳು ಒಂದನೆ ತರಗತಿಗೆ ದಾಖಲಾಗಿದ್ದಾರೆ. 4.5 ಲಕ್ಷ ವಿದ್ಯಾರ್ಥಿಗಳು ಮತ್ತೊಂದು ಕಡೆಗೆ ವರ್ಗಾವಣೆ ಪಡೆದುಕೊಂಡು ಹೋಗಿದ್ದಾರೆ. ಇನ್ನು ಮೂರು ಲಕ್ಷದಷ್ಟು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಅಪೂರ್ಣವಾಗಿದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News