ಪರಿಹಾರ ಕೇಂದ್ರಗಳಲ್ಲಿ ಜಾತಿ ಹುಡುಕಿದ ಸನ್ನಿವೇಶಗಳು ಬೇಸರ ತರಿಸಿದೆ: ಪ್ರೊ.ಅರವಿಂದ ಮಾಲಗತ್ತಿ

Update: 2019-08-18 17:40 GMT

ಮೈಸೂರು,ಆ.18: ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿ ಸಂಕಷ್ಟ ಅನುಭವಿಸುತ್ತಿದ್ದರೂ ಪರಿಹಾರ ಕೇಂದ್ರಗಳಲ್ಲಿ ಜಾತಿ ಹುಡುಕಿದ ಸನ್ನಿವೇಶಗಳು ಬೇಸರ ತರಿಸಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಅರವಿಂದ ಮಾಗಲತ್ತಿ ತಿಳಿಸಿದರು.

ನಗರದ ಕಲಾಮಂದಿರದ ಮನೆಯಂಗಳದಲ್ಲಿ ರವಿವಾರ ರಂಗವಾಹಿನಿ ಹಾಗೂ ನೆಲೆ ಹಿನ್ನಲೆ ವತಿಯಿಂದ ಹಮ್ಮಿಕೊಂಡಿದ್ದ ಯುವಕವಿ ಸಿ.ಶಂಕರ ಅಂಕನಶೆಟ್ಟಿಪುರ ಅವರ “ಪೊರಕೆ” ಕವನ ಸಂಕಲನ ಬುಡುಗಡೆ ಮಾಡಿ ಅವರು ಮಾತನಾಡಿದರು.

ನೆರೆ ಬಂದು ಸಾಯುವ ಸ್ಥಿತಿ ತಲುಪುತ್ತಿದ್ದರೂ ನಮ್ಮಲ್ಲಿ ಜಾತಿ ಮಾತ್ರ ಸದ್ದು ಮಾಡುತ್ತಿದೆ. ನೆರೆ ಬಂದಾಗ ದೇವರುಗಳೂ ಕೊಚ್ಚಿ ಹೋಗುತ್ತವೆ. ಆದರೆ, ಈ ನೆಲದಿಂದ ಜಾತಿ ಮಾತ್ರ ಕೊಚ್ಚಿಕೊಂಡು ಹೋಗುವುದಿಲ್ಲ, ನಾ.ಡಿಸೋಜ ಅವರು ಕೃತಿಯೊಂದರಲ್ಲಿ ಹೀಗಿ ಬರೆಯುತ್ತಾರೆ. ನೆರೆಯಿಂದ ರಕ್ಷಿಸಿಕೊಳ್ಳಲು ಆರು ಮಂದಿ ಒಂದು ದೋಣಿಯಲ್ಲಿ ಹೋಗುತ್ತಿರುತ್ತಾರೆ. ದೋಣಿಗೆ ಭಾರವಾಗಿ ಮುಳುಗುವ ಸ್ಥಿತಿಯಲ್ಲಿದ್ದಾಗ, ಒಬ್ಬರು ನೀರಿಗೆ ಬೀಳಬೇಕಾದ ಪರಿಸ್ಥಿತಿ ಎದುರಾದಾಗ, ಯಾರೂ ಮುಂದೆ ಬರುವುದಿಲ್ಲ, ಆಗ ದೋಣಿಯಲ್ಲಿದ್ದ ದೇವರ ಮೂರ್ತಿಯನ್ನೇ ನೀರಿಗೆ ಎಸೆಯುವ ಪ್ರಸಂಗವಿದೆ. ಆದರೆ, ರಾಜ್ಯದಲ್ಲಿ ಪ್ರವಾಹದಿಂದಾಗಿ ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವಾಗ ಜನಾಂಗೀಯ ವಿವಾದವಾಯಿತು. ಪರಿಹಾರ ಕೇಂದ್ರಗಳಲ್ಲೂ ಜಾತಿ ಹುಡುಕಿದ ಸನ್ನಿವೇಶಗಳು ಬೇಸರ ತರಿಸಿದೆ ಎಂದು ಹೇಳಿದರು.

ಕೆಲವರಿಗೆ ಜಾತಿ ಅವಮಾನದ ಸಂಕೇತವಾದರೆ, ಇನ್ನುಳಿದವರಿಗೆ ಸ್ವಾಭಿಮಾನದ ಸಂಕೇತವಾಗಿರುತ್ತದೆ. ಪ್ರೊ.ಕೆ.ರಾಮದಾಸ್ ಅವರು “ಜಾತಿ ಬಿಟ್ಟು ದೇಶ ಕಟ್ಟು” ಎಂದು ಚಳವಳಿ ರೂಪಿಸಿದ್ದರು. ಅದೇ ವೇಳೆ ಇನ್ನೊಂದು ಜನವರ್ಗ “ಜಾತಿ ಕಟ್ಟಿ, ದೇಶ ಆಳು” ಎಂದು ಪ್ರತಿಪಾದಿಸಿತು. ಈ ನೆಲದಲ್ಲಿ ಜಾತಿ ಅಗಾಧವಾಗಿ ಬೇರೂರಿದೆ ಎಂದು ಹೇಳಿದರು.

ಶಿಕ್ಷಕರ ಸಾಂದರ್ಭಿಕ ರಜೆಯಗಳನ್ನು 15 ರಿಂದ 10 ಕ್ಕೆ ಇಳಿಸಿರುವ ನಿರ್ಧಾರ ಮೂರ್ಖತನವಾದ್ದಾಗಿದೆ. ವಿದ್ಯಾರ್ಥಿಗಳ ಬಗ್ಗೆ ಅಷ್ಟು ಕಾಳಜಿ ಇದ್ದರೆ ಜಯಂತಿಗಳನ್ನು ರದ್ದು ಮಾಡಲಿ. ಅಥವಾ ಜಯಂತಿ ದಿನಗಳಂದೇ ಆರ್.ಎಚ್ (ನಿರ್ಬಂಧಿತ ರಜೆ) ವಿಧಿಸಲಿ ಎಂದು ಹೇಳಿದರು.

ಸಾಹಿತಿ ಬನ್ನೂರು ಕೆ.ರಾಜು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚೆನ್ನಪ್ಪ, ಪ್ರಕಾಶಕ ಡಿ.ಎನ್.ಲೋಕಪ್ಪ, ಮಾಜಿ ಮಹಾಪೌರ ನಾರಾಯಣ್, ರಂಗಕರ್ಮಿ ಕೆ.ಆರ್.ಗೋಪಾಕೃಷ್ಣ, ಪೌರಕಾರ್ಮಿಕರ ಸಂಘ ಉನ್ನತ ಸಮಿತಿ ಅಧ್ಯಕ್ಷ ಎನ್.ಮಾರಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News