ಟೆಲಿಫೋನ್ ಕದ್ದಾಲಿಕೆ ಪ್ರಕರಣ ನನ್ನ ಸಲಹೆ ಮೇರೆಗೆ ಸಿಬಿಐಗೆ ಎಂಬುದು ನೂರಕ್ಕೂ ನೂರು ಸುಳ್ಳು: ಸಿದ್ದರಾಮಯ್ಯ

Update: 2019-08-19 05:22 GMT

ಹುಬ್ಬಳ್ಳಿ, ಆ.19: ಟೆಲಿಫೋನ್ ಕದ್ದಾಲಿಕೆ ಪ್ರಕರಣವನ್ನು ನನ್ನ ಸಲಹೆ ಮೇರೆಗೆ ಸಿಬಿಐಗೆ ವಹಿಸಿರುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದು, ಇದು ನೂರಕ್ಕೂ ನೂರು ಸುಳ್ಳು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಅವರಿಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಈ ವಿಚಾರವಾಗಿ ನಾನು ಯಡಿಯೂರಪ್ಪ ಜೊತೆ ಮಾತನಾಡಿಯೂ ಇಲ್ಲ, ಸಿಬಿಐಗೆ ವಹಿಸಿ ಅಂತ ಹೇಳಿಯೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಯಡಿಯೂರಪ್ಪ ನನ್ನ ಸಲಹೆ ಕೇಳುವುದಾದರೆ ಅಪರೇಶನ್ ಕಮಲ ಪ್ರಕರಣವನ್ನೂ ಸಿಬಿಐಗೆ ವಹಿಸಲಿ. ಅಪರೇಶನ್ ಕಮಲದ ಮೂಲಕ ಶಾಸಕರನ್ನು ಕೊಂಡುಕೊಳ್ಳುವುದಕ್ಕೆ ಬಿಜೆಪಿಯವರು ಕೋಟ್ಯಂಟರ ರೂ. ಖರ್ಚು ಮಾಡಿದ್ದಾರೆ. ಇದರಲ್ಲಿ ಕೋಟ್ಯಂತರ ರೂ. ಕಪ್ಪು ಹಣದ ವ್ಯವಹಾರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪರ ಆಡಿಯೋಗಳು ಅಲ್ಲದೆ ಶ್ರೀನಿವಾಸ ಗೌಡ ಸಹಿತ ಕೆಲವು ಶಾಸಕರು ತಮಗೆ ಹಣದ ಆಮಿಷವೊಡ್ಡಲಾಗಿತ್ತು ಎಂದು ಆರೋಪ ಕೂಡಾ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಸಿಬಿಐಗೆ ವಹಿಸುವುದು ಉತ್ತಮ ಎಂಬುದು ಯಡಿಯೂರಪ್ಪರಿಗೆ ನನ್ನ ಸಲಹೆ ಎಂದು ಸಿದ್ದರಾಮಯ್ಯ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News