ಮಾಜಿ ಸಚಿವ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರ

Update: 2019-08-19 05:41 GMT

ಹೊಸದಿಲ್ಲಿ, ಆ.19: ಅನಾರೋಗ್ಯದಿಂದಾಗಿ  ಹೊಸದಿಲ್ಲಿಯ  ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಏಮ್ಸ್) ಚಿಕಿತ್ಸೆ ಪಡೆಯುತ್ತಿರುವ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿಯವರ  ಆರೋಗ್ಯ ಸ್ಥಿತಿ ಗಂಭೀರವಾಗಿದೆ. 

 ಜೇಟ್ಲಿಯ ಶ್ವಾಸಕೋಶ ಮತ್ತು ಹೃದಯಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿದು ಬಂದಿದೆ. 66 ವರ್ಷದ ಜೇಟ್ಲಿ ಅವರನ್ನು ಉಸಿರಾಟದ ಸಮಸ್ಯೆಯ ಹಿನ್ನೆಲೆಯಲ್ಲಿ   ಆಗಸ್ಟ್ 9 ರಂದು ಏಮ್ಸ್ ಗೆ  ದಾಖಲಿಸಲಾಗಿತ್ತು.  ಮೂಲಗಳ ಪ್ರಕಾರ ಜೇಟ್ಲಿ ಅವರನ್ನು ಎಕ್ಟ್ರಾ-ಕಾರ್ಪೊರಿಯಲ್‌ ಮೆಂಬ್ರೇನ್‌ ಆಕ್ಸಿಜನೇಷನ್‌ (ಇಸಿಎಂಒ) ವ್ಯವಸ್ಥೆಯಲ್ಲಿ ಇರಿಸಿ ಚಿಕಿತ್ಸೆ ಮುಂದುವರಿಸಲಾಗಿದೆ .

ಅವರ  ಆರೋಗ್ಯದ ವಿಚಾರಣೆಗೆ ಗಣ್ಯರ  ದಂಡೇ ಹರಿದುಬರುತ್ತಿದ್ದು,ಏಮ್ಸ್ ಸುತ್ತ ಬಿಗಿ ಬಂದೋಬಸ್ತ್‌ ಮಾಡಲಾಗಿದೆ. ರಾಷ್ಟ್ರಪತಿ  ರಾಮ್ ನಾಥ್ ಕೋವಿಂದ್, ಪ್ರಧಾನ ಮಂತ್ರಿ  ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವಾರು ಹಿರಿಯ ನಾಯಕರು ಏಮ್ಸ್ ಗೆ ಭೇಟಿ ನೀಡಿ   ಜೇಟ್ಲಿಯವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ರವಿವಾರ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ದಿಲ್ಲಿ  ಸಿಎಂ ಅರವಿಂದ ಕೇಜ್ರಿವಾಲ್, ಕೇಂದ್ರ ಸಚಿವ ಸ್ಮೃತಿ ಇರಾನಿ ಏಮ್ಸ್ ಗೆ ಭೇಟಿ ನೀಡಿದ್ದಾರೆ.

ಮಾಜಿ ಪ್ರಧಾನಿ  ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಸರ್ಕಾರಗಳಲ್ಲಿ  ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಜೇಟ್ಲಿ  ಅನಾರೋಗ್ಯದಿಂದಾಗಿ  2019 ರ ಲೋಕಸಭಾ ಚುನಾವಣೆಯಲ್ಲಿ  ಸ್ಪರ್ಧಿಸಲಿಲ್ಲ. ಬಿಜೆಪಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದರೂ ಅನಾರೋಗ್ಯದ ಕಾರಣದಿಂದಾಗಿ ಜೇಟ್ಲಿ   ಸಚಿವ ಸ್ಥಾನ ಬಯಸಲಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News