ಪ್ರವಾಹ ಪೀಡಿತ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶುಲ್ಕ ರಹಿತ ಶೈಕ್ಷಣಿಕ ದಾಖಲೆಗಳನ್ನು ಒದಗಿಸಲು ಸುತ್ತೋಲೆ

Update: 2019-08-19 18:34 GMT

ಬೆಂಗಳೂರು, ಆ.19: ಪ್ರವಾಹ ಪೀಡಿತ ಜಿಲ್ಲೆಗಳ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿ ಹಾಗೂ ಇತರೆ ದಾಖಲೆಗಳನ್ನು ತ್ವರಿತವಾಗಿ ಹಾಗೂ ಶುಲ್ಕ ರಹಿತವಾಗಿ ನೀಡುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಪ್ರಸ್ತುತ ತೀವ್ರವಾಗಿ ಮಳೆ ಸುರಿದ ಪರಿಣಾಮವಾಗಿ ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿಯುಂಟಾಗಿದೆ. ಹೀಗಾಗಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಮಾಡಿರುವ ವಿದ್ಯಾರ್ಥಿಗಳು ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿಗಳ ಅಂಕಪಟ್ಟಿ ಹಾಗೂ ಪಿಯುಸಿ ಶಿಕ್ಷಣ ಅಥವಾ ವ್ಯಾಸಂಗಕ್ಕೆ ಸಂಬಂಧಿಸಿದ ದಾಖಲೆಗಳು ಪ್ರವಾಹದಿಂದ ಹಾನಿಯಾಗಿದ್ದರೆ ಅವರು ಅರ್ಜಿ ಸಲ್ಲಿಸಿ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳು ನಿಯಮಾನುಸಾರ ಸಂಬಂಧಪಟ್ಟ ಕಾಲೇಜು ಅಥವಾ ಜಿಲ್ಲಾ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಮುಖಾಂತರ ಇಲಾಖೆಗೆ ಅರ್ಜಿ ಸಲ್ಲಿಸಿದ ಬಳಿಕ ತಕ್ಷಣ ವಿದ್ಯಾರ್ಥಿಗಳಿಗೆ ದ್ವಿಪ್ರತಿ ಅಂಕಪಟ್ಟಿ ಹಾಗೂ ಇತರೆ ಪಿಯುಸಿ ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಶುಲ್ಕ ರಹಿತವಾಗಿ ಇಲಾಖೆ ನೀಡಲಾಗುತ್ತದೆ.

ದ್ವಿಪ್ರತಿ ಅಂಕಪಟ್ಟಿ ಹಾಗೂ ಇತರೆ ಪಿಯುಸಿ ಶಿಕ್ಷಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಶುಲ್ಕ ರಹಿತವಾಗಿ ಪಡೆಯಲು ವಿದ್ಯಾರ್ಥಿಗಳು ಅಥವಾ ಪೋಷಕರು ಪದವಿ ಪೂರ್ವ ಶಿಕ್ಷಣ ಇಲಾಖೆಯ ಕೇಂದ್ರ ಕಚೇರಿಗೆ ಅಲೆಯುವಂತಿಲ್ಲ. ಪ್ರವಾಹ ಪೀಡಿತ ಉಪ ನಿರ್ದೇಶಕ ಮೂಲಕ ಅರ್ಜಿ ಸಲ್ಲಿಸಿದರೆ ಅವರ ಕಚೇರಿಗೆ ತಲುಪಿಸಲಾಗುತ್ತದೆ. ಕೆಲವು ಶೈಕ್ಷಣಿಕ ದಾಖಲೆಗಳನ್ನು ಜಿಲ್ಲಾ ಉಪ ನಿರ್ದೇಶಕರ ಅಥವಾ ಕಾಲೇಜು ಹಂತದಲ್ಲಿಯೇ ನೀಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News